ವಿಜಯಸಾಕ್ಷಿ ಸುದ್ದಿ, ಗದಗ
ಶಿರಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯ ಯಳವತ್ತಿ ಗ್ರಾಮದಲ್ಲಿ ಚುನಾವಣೆಯ ಕರ್ತವ್ಯದಲ್ಲಿದ್ದ ಅಧಿಕಾರಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದ 14 ಜನ ಆರೋಪಿತರಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2015ರ ಮೇ 29ರಂದು ಸಂಜೆ 5 ಗಂಟೆಗೆ ಬೂತ್ ನಂ.100ಕ್ಕೆ ಆರೋಪಿ ಚನ್ನಪ್ಪಗೌಡ ನಿಂಗನಗೌಡರ ಪದೇ ಪದೇ ಬಂದು ಹೋಗುತ್ತಿದ್ದಾಗ, ಕರ್ತವ್ಯದಲ್ಲಿದ್ದ ಅಧಿಕಾರಿಯು, ನಿಮ್ಮ ವರ್ತನೆಯಿಂದ ಬೇರೆಯವರಿಗೆ ತೊಂದರೆಯಾಗುತ್ತದೆ ಎಂದು ತಿಳಿಸಿದಾಗ,
ಆರೋಪಿಯು ಇನ್ನುಳಿದ 13 ಆರೋಪಿತರೊಂದಿಗೆ ಕೂಡಿಬಂದು, ಅವಾಚ್ಯವಾಗಿ ಬೈದು, ಫಿರ್ಯಾದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ, ತಕರಾರು ಬಿಡಿಸಲು ಬಂದ ವ್ಯಕ್ತಿಗೂ ಕಲ್ಲು ಎಸೆದು ಗಾಯಗೊಳಿಸಿದ ಅಪರಾಧದ ಕುರಿತು ಗದಗ ವಿಭಾಗದ ಪೊಲೀಸ್ ಉಪಾಧೀಕ್ಷಕ ಎಂ.ವಿ ನಾಗನೂರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಇದನ್ನೂ ಓದಿ ವರ್ಕ್ ಫ್ರಾಮ್ ಹೋಮ್ ಟಾಸ್ಕ್ ನೀಡಿ ರೈತನಿಗೆ ವಂಚನೆ…
ಸಾಕ್ಷಿ ವಿಚಾರಣೆ ನಡೆಸಿದ ಗದುಗಿನ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರ ಎಸ್ ಶೆಟ್ಟಿ, ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದರಿಂದ 1ನೇ ಆರೋಪಿ ಚನ್ನಪ್ಪಗೌಡ ನಿಂಗನಗೌಡರ ಸೇರಿದಂತೆ ಉಳಿದ 13 ಆರೋಪಿಗಳಿಗೆ ಆಗಸ್ಟ್ 7ರಂದು ಕಲಂ 143ರ ಅಡಿಯಲ್ಲಿ 6 ತಿಂಗಳ ಸಾದಾ ಸಜೆ, 500 ರೂ ದಂಡ, 147ರಡಿ 1 ವರ್ಷ ಸಾದಾ ಶಿಕ್ಷೆ, 500 ರೂ. ದಂಡ, 148ರ ಅಡಿಯಲ್ಲಿ 1 ವರ್ಷ ಸಾದಾ ಸಜೆ, 500 ರೂ ದಂಡ,
ಕಲಂ 323ರಡಿ 1 ವರ್ಷ ಜೈಲು, 500 ರೂ ದಂಡ, ಕಲಂ 324ರಡಿ 1 ವರ್ಷ ಜೈಲು, 500 ರೂ ದಂಡ, ಕಲಂ 353ರಡಿಯಲ್ಲಿ 1 ವರ್ಷ ಜೈಲು ಹಾಗೂ 5 ಸಾವಿರ ರೂ ದಂಡ, ಕಲಂ 504ರಡಿಯಲ್ಲಿ 1 ವರ್ಷ ಸಜೆ, 1 ಸಾವಿರ ರೂ ದಂಡ, ಕಲಂ 506ರಲ್ಲಿ 1 ವರ್ಷ ಸಜೆ, 1 ಸಾವಿರ ರೂ ದಂಡ, ಕಲಂ 3(1)(×) ಪ.ಜಾ/ಪ.ಪಂ ಕಾಯ್ದೆಯಡಿ 1 ವರ್ಷ ಸಾದಾ ಶಿಕ್ಷೆ ಹಾಗೂ 1 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಇದನ್ನೂ ಓದಿ ನೀರುಪಾಲಾದ ಬಾಲಕರ ಕುಟುಂಬಗಳಿಗೆ ಎರಡು ಲಕ್ಷ ರೂ. ಪರಿಹಾರ
ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಅಭಿಯೋಜಕ ಮಲ್ಲಿಕಾರ್ಜುನಗೌಡ ಬಸವನಗೌಡ ದೊಡ್ಡಗೌಡ್ರ ಸಾಕ್ಷಿ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.