ವಿಜಯಸಾಕ್ಷಿ ಸುದ್ದಿ, ಗದಗ
ನಿರಂತರ ಮಳೆಯಿಂದಾಗಿ ಮನೆಯೊಂದು ಕಣ್ಣೆದುರೇ ಧರೆಗುರುಳಿರುವ ದಾರುಣ ಘಟನೆ ಗದಗ ತಾಲೂಕಿನ ಅಂತೂರ-ಬೆಂತೂರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರಾಮಪ್ಪ ಪೂಜಾರ ಎಂಬುವರಿಗೆ ಸೇರಿದ ಮನೆ ಕುಸಿತವಾಗಿದ್ದು, ಅಂತೂರ-ಬೆಂತೂರನ ಶಂಭುಲಿಂಗೇಶ್ವರ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.
ಮನೆ ಕುಸಿಯುವ ವೇಳೆ ಅಡುಗೆ ಮನೆಯಲ್ಲಿದ್ದ ಚನ್ನವ್ವ ಪೂಜಾರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಉಳಿದ ಭಾಗ ದಿಢೀರ್ ಕುಸಿತ ಕಂಡಿದೆ. ತಕ್ಷಣ ಮನೆಯಲ್ಲಿದ್ದ ನಾಲ್ಕೂ ಜನ ಕುಟುಂಬಸ್ಥರು ಹೊರಗೆ ಓಡಿ ಬಂದಿದ್ದಾರೆ. ಇನ್ನು, ಮನೆ ಕುಸಿತದಿಂದ ಭಯಗೊಂಡು ನಿತ್ರಾಣಳಾಗಿದ್ದ ಚನ್ನವ್ವಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮನೆಯಲ್ಲಿನ ಗೃಹೋಪಯೋಗಿ ವಸ್ತುಗಳು ಸಂಪೂರ್ಣ ನಾಶವಾಗಿವೆ. ನಿತ್ಯ ಬದುಕಿಗೆ ಆಸರೆಯಾಗಿದ್ದ ಮನೆಯನ್ನು ಕಳೆದುಕೊಂಡ ಬಡಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಮನೆ ಕುಸಿಯುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.