ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಪ್ರೊ.ಸಿ.ವಿ ಕೆರಿಮನಿ ಇನ್ನಿಲ್ಲ

0
Spread the love


ಲಕ್ಷ್ಮೇಶ್ವರ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಪ್ರೊ. ಸಿ.ವಿ ಕೆರಿಮನಿಯವರು ಸೊಮವಾರ ಸಂಜೆ ತಮ್ಮ 84ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದು, ಪುಲಿಗೆರೆಯ ಸಾಹಿತ್ಯ ಕ್ಷೇತ್ರ ಬಡವಾಗಿದೆ. ಸಿವಿಕೆ ಅವರು ಪತ್ನಿ, ಮೂವರು ಪುತ್ರಿಯರು, ಪುತ್ರ ಸೇರಿ ಅಪಾರ ಬಂಧುಗಳು, ಸಾಹಿತ್ಯಾಭಿಮಾನಿ ಬಳಗವನ್ನು ಅಗಲಿದ್ದಾರೆ.

Advertisement

ಇಳಿ ವಯಸ್ಸಿನಲ್ಲಿಯೂ ಸಾಹಿತ್ಯಿಕ, ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರದ ಸೇವೆಯಲ್ಲಿ ತೊಡಗಿಸಿಕೊಂಡು ದಣಿವರಿಯದ ಕನ್ನಡ ಕಾಯಕಯೋಗಿದ್ದ ಸಿವಿಕೆ, ಪುಲಿಗೆರೆ ಸಾಂಸ್ಕೃತಿಕ ಲೋಕದ ರಾಯಭಾರಿಯಂತಿದ್ದರು.

ಮೂಲತಃ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮದವರು. ಲಕ್ಷ್ಮೇಶ್ವರದ ಪುರಸಭಾ ಕಾಲೇಜಿನ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಉಪನ್ಯಾಸಕರಾಗಿ, ಭಾಷೆಯ ಜ್ಞಾನ-ಅಭಿಮಾನ ಮೊಳಗಿಸಿದರು.

ಹಂಪಿ ಕನ್ನಡ ವಿ.ವಿ. ಆಡಳಿತ ಸದಸ್ಯರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ಕಾಲೇಜು ಶಿಕ್ಷಕ ಸಂಘದ ಉಪಾಧ್ಯಕ್ಷರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ, ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾಗಿ, ಅಭ್ಯಾಸ ಮಂಡಳಿ ಸದಸ್ಯರಾಗಿ, ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ ಅನನ್ಯ.

ಗದಗ ಜಿಲ್ಲೆಯ ಮಾಹಿತಿಯನ್ನು ನೀಡುವ ಹಲವಾರು ಅರ್ಥಪೂರ್ಣ ಕೃತಿಗಳನ್ನು ಸಂಪಾದಿಸಿ, ಗದಗ ಜಿಲ್ಲೆಯ ಜನರಿಗೆ ಮಹದುಪಕಾರಗೈದಿದ್ದಾರೆ. ಇತ್ತೀಚಿಗೆ ಪ್ರಕಟಗೊಂಡ `ಗದಗ ಜಿಲ್ಲೆ ಒಂದು ಅಧ್ಯಯನ’ ಕೃತಿ ಗದಗ ಜಿಲ್ಲೆಯ ಸಮಗ್ರ ಮಾಹಿತಿಯನ್ನು ನೀಡುವ ಪ್ರಮುಖ ಆಕರ ಗ್ರಂಥವಾಗಿ ಹೊರಹೊಮ್ಮಿದೆ.

ಎರಡು ಅವಧಿಗೆ ಲಕ್ಷ್ಮೇಶ್ವರದ ರೋಟರಿ ಕ್ಲಬ್ ಅಧ್ಯಕ್ಷರಾಗಿ ಸಾಮಾಜಿಕ ಕಾರ್ಯಗಳನ್ನು ನೆರವೇರಿಸಿದ್ದರು. 1999 ರಲ್ಲಿ ಸಿಂಗಾಪೂರದಲ್ಲಿ ಜರುಗಿದ ಜಾಗತಿಕ ರೋಟರಿ ಸಮಾವೇಶದಲ್ಲಿ ಪಾಲ್ಗೊಂಡಿದ್ದು, ರಾಷ್ಟ್ರೀಯ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರೊ.ಸಿ.ವಿ.ಕೆರಿಮನಿಯವರ ಸಾಧನೆಗೆ ಶರೀಫ ಪ್ರಶಸ್ತಿ, ಉತ್ತಮ ಎನ್‌ಎಸ್ ಅಧಿಕಾರಿ, ರಾಜ್ಯಮಟ್ಟದ ಮನುಕುಲ ಪ್ರಶಸ್ತಿಗಳೊಂದಿಗೆ, 2012ನೇ ಸಾಲಿನ ಕರ್ನಾಟಕ ಸರಕಾರದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದರು.

ಸಂತಾಪ: ಸಿವಿಕೆ ಅವರ ನಿಧನಕ್ಕೆ ನಾಡಿನ ವಿವಿಧ ಮಠಾಧೀಶರು, ಸಾಹಿತಿಗಳು, ರಾಜಕಾರಣಿಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ. ಆ 29ರ ಮಂಗಳವಾರ ಮಧ್ಯಾಹ್ನ ಅಂತ್ಯ ಸಂಸ್ಕಾರ ಲಕ್ಷ್ಮೇಶ್ವರದಲ್ಲಿ ನೆರವೇರಲಿದೆ.


Spread the love

LEAVE A REPLY

Please enter your comment!
Please enter your name here