ಟಿಕೆಟ್ ವಂಚಿತರ ನಿಗೂಢ ನಡೆ……?
ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ಶಿರಹಟ್ಟಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ವಂಚಿತ ಹಾಲಿ ಶಾಸಕ ರಾಮಣ್ಣ ಲಮಾಣಿ ಬಹುತೇಕ ಬಂಡಾಯವಾಗಿ ಕಣ್ಣಕ್ಕಿಳಿಯುವ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಿದ್ದಾರೆ.
ಬುಧವಾರ ಶಾಸಕ ರಾಮಣ್ಣ ಲಮಾಣಿ ಅವರ ಮನೆಯ ಮುಂದೆ ಜಮಾಯಿಸಿದ ಅವರ ಅಭಿಮಾನಿ ಬಳಗ ಮತ್ತು ಕಾರ್ಯಕರ್ತರು, ಶಾಸಕ ರಾಮಣ್ಣ ಲಮಾಣಿಯವರಿಗೆ ಟಿಕೆಟ್ ನೀಡದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ ಶಾಸಕರು ಯಾವುದೇ ಕಾರಣಕ್ಕೂ ಚುನಾವಣೆ ಕಣದಿಂದ ಹಿಂದೆ ಸರಿಯುವುದು ಬೇಡ, ಕಾರ್ಯಕರ್ತರು ಮತದಾರರು ನಿಮ್ಮೊಂದಿಗಿದ್ದೇವೆ. ನೀವು ಕಣಕ್ಕಿಳಿಯಿರಿ ಬಹುಮತದಿಂದ ಆಯ್ಕೆ ಮಾಡುತ್ತೇವೆ ಎಂದು ಘೋಷಣೆ ಕೂಗಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ರಾಮಣ್ಣ ಲಮಾಣಿ, ಪಕ್ಷಕ್ಕಾಗಿ ತನುಮನಧನ ಸಮರ್ಪಿಸಿದ್ದೇನೆ. ಪಕ್ಷದ ಎಲ್ಲ ಹಿರಿಯ ನಾಯಕರೂ ನನಗೆ ಟಿಕೆಟ್ ಕೊಡುತ್ತೇನೆ ಎಂಬ ಬಲವಾದ ಭರವಸೆ ನೀಡಿದ್ದರಿಂದ ಇತ್ತೀಚಿನ ದಿನಗಳಲ್ಲಿ ಪಕ್ಷದ ಎಲ್ಲ ಕಾರ್ಯಕ್ರಮಗಳ ಖರ್ಚುವೆಚ್ಚ ನಿಭಾಯಿಸಿದ್ದೇನೆ. ಆದರೆ ನನ್ನ ಮತ್ತು ಕ್ಷೇತ್ರದ ಇತರೆಲ್ಲ ಆಕಾಂಕ್ಷಿಗಳನ್ನು ಹೊರತುಪಡಿಸಿ ಬೇರೆ ತಾಲೂಕಿನ ಆಕಾಂಕ್ಷಿಗೆ ಮಣೆ ಹಾಕಿರುವುದು ಬಹಳಷ್ಟು ನೋವಾಗಿದೆ. ಈ ನಿಟ್ಟಿನಲ್ಲಿ ಟಿಕೆಟ್ ವಂಚಿತ ಎಲ್ಲ ಆಕಾಂಕ್ಷಿಗಳು, ಅಭಿಮಾನಿ/ಕಾರ್ಯಕರ್ತರ ಸಭೆ ಮಾಡಿ ಒಮ್ಮತದ ಪಕ್ಷೇತರ ಅಥವಾ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಿಸುವ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ಟಿಕೆಟ್ ವಂಚಿತರ ನಿಗೂಢ ನಡೆ!
ಟಿಕೆಟ್ ಘೋಷಣೆಯಾಗುವ ಮೊದಲು ಲಕ್ಷ್ಮೇಶ್ವರದ ದೇವಸ್ಥಾನ(ದೇವರ ಸನ್ನಿಧಿ)ದಲ್ಲಿ ಬಿಜೆಪಿ ಪಕ್ಷದ ಎಲ್ಲ ಆಕಾಂಕ್ಷಿಗಳು ಪಕ್ಷ ಯಾರಿಗೇ ಟಿಕೆಟ್ ಕೊಟ್ಟರೂ ಭಿನ್ನಾಭಿಪ್ರಾಯ ಬದಿಗೊತ್ತಿ ಒಮ್ಮತದಿಂದ ಪಕ್ಷದ ಗೆಲುವಿಗಾಗಿ ಶ್ರಮಿಸುತ್ತೇವೆ ಎಂದು ಪರಸ್ಪರ ಕಂಕಣಕಟ್ಟಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದರು. ಇದೀಗ ಅದೆಲ್ಲ ಗಾಳಿಗೆ ತೂರಿ ವರ್ತಿಸುತ್ತಿರುವುದು ರಾಜಕೀಯದಲ್ಲಿ ಆಣೆ-ಪ್ರಮಾಣಕ್ಕೆ ಬೆಲೆ ಇಲ್ಲ ಎಂಬುದನ್ನು ಸಾಕ್ಷೀಕರಿಸುತ್ತದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಟಿಕೆಟ್ ವಂಚಿತ ಆಕಾಂಕ್ಷಿಗಳೆಲ್ಲರೂ ಸಭೆ ಸೇರಿ ನಿರ್ಣಯವೊಂದನ್ನು ಕೈಗೊಳ್ಳುತ್ತಾರೆ ಎಂಬ ಮಾತುಗಳು ತೀವ್ರ ಕತೂಹಲ ಮೂಡಿಸಿದೆ. ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಮುಂಚೂಣಿಯಲ್ಲಿದ್ದ ಶಾಸಕ ರಾಮಣ್ಣ ಲಮಾಣಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಭೀಮಸಿಂಗ್ ರಾಥೋಡ, ಗುರುನಾಥ ದಾನಪ್ಪನವರ, ಎಸ್‌ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಪೂರ್ಣಾಜಿ ಖರಾಟೆ, ಸಣ್ಣೀರಪ್ಪ ಹಳೆಪ್ಪನವರ ಅಷ್ಟೇ ಅಲ್ಲದೇ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ವಂಚಿತರು ಗುರುವಾರ ಸಭೆ ಸೇರಿ ಮುಂದಿನ ನಡೆಯ ಬಗ್ಗೆ ಚರ್ಚೆ ನಡೆಸಿ ಸ್ಪಷ್ಟ ನಿರ್ಧಾರ ಪ್ರಕಟಿಸುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ.
ರಾಮಣ್ಣ-ರಾಮಕೃಷ್ಣ ಒಂದಾಗಲಿದ್ದಾರೆಯೇ ?
ರಾಜಕೀಯದಲ್ಲಿ ಯಾರೂ ಮಿತ್ರರೂ ಅಲ್ಲ-ಶತ್ರುಗಳೂ ಅಲ್ಲ ಎಂಬ ಮಾತಿನಂತೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದ ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ ಇಬ್ಬರೂ ಸೇರಿ ಇತರೇ ಟಿಕೆಟ್ ವಂಚಿತ ಆಕಾಂಕ್ಷಿಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅತೃಪ್ತ/ಆಕ್ಷಾಂಕ್ಷಿಗಳ ದೊಡ್ಡ ಕೂಟವನ್ನೇ ರಚಿಸಿ ರಾಷ್ಟ್ರೀಯ ಪಕ್ಷಗಳಿಗೆ ಟಾಂಗ್ ಕೊಡುವ ಬಗ್ಗೆ ಒಂದು ಸುತ್ತಿನ ಮಾತುಕತೆಯೂ ನಡೆದಿರುವ ಬಗ್ಗೆ ಕೇಳಿ ಬರುತ್ತಿರುವುದು ಕುತೂಹಲ ಮೂಡಿಸಿದೆ.