ದಾಖಲೆ ಬೆಲೆಗೆ ಮಾರಾಟವಾದ ಮೆಣಸಿನಕಾಯಿ; 1 ಕ್ವಿಂಟಲ್‌ಗೆ 70,199 ರೂಪಾಯಿಗೆ ಮಾರಾಟ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಗದಗ ತಾಲೂಕಿನಲ್ಲಿ ಕೋಟುಮಚಗಿಯ ರೈತ ಶರಣಪ್ಪ ಈರಪ್ಪ ಜಗ್ಗಲ್ ಎಂಬುವವರು ಮೆಣಸಿನಕಾಯನ್ನು ದಾಖಲೆ ಬೆಲೆಗೆ ಮಾರಾಟ ಮಾಡಿ ಎಲ್ಲರೂ ಅಚ್ಚರಿಪಡುವಂತೆ ಮಾಡಿದ್ದಾರೆ. ಶರಣಪ್ಪ ಅವರು ಕ್ವಿಂಟಲ್ಗೆ 70,199 ರೂಪಾಯಿ ದಾಖಲೆ ಬೆಲೆಗೆ ಕೆಂಪು ಮೆಣಸಿನಕಾಯಿ ಮಾರಾಟ ಮಾಡಿದ್ದಾರೆ.

ತಮ್ಮ 4 ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆದಿರುವ ರೈತ ಶರಣಪ್ಪ ಜಗ್ಗಲ್ ಈಗಾಗಲೇ ಸುಮಾರು 1 ಲಕ್ಷ ರೂಪಾಯಿಯ ಮೆಣಸಿನಕಾಯಿ ಮಾರಾಟ ಲಾಭ ಪಡೆದುಕೊಂಡಿದ್ದಾರೆ.

ಕಾಶ್ಮೀರ ಡಬ್ಬಿ ಎಂಬ ಹೊಸ ತಳಿ ಮೆಣಸಿನ ಬೀಜ ಬಿತ್ತನೆ ಮಾಡಿ ಶರಣಪ್ಪ ಅವರು ಈ ದಾಖಲೆ ಬೆಲೆ ಕಂಡಿದ್ದಾರೆ. ಬೆಳೆದ ಮೆಣಸಿನಕಾಯಿಯನ್ನು ಸ್ಟಾಕ್ ಇಟ್ಟಿರುವ ರೈತ ಶರಣಪ್ಪ ಅವರು, ಇನ್ನಷ್ಟು ಆದಾಯ ಗಳಿಸುವ ಉತ್ಸಾಹದಲ್ಲಿದ್ದಾರೆ.

ಸಾಮಾನ್ಯವಾಗಿ ಮೆಣಸಿನಕಾಯಿ ಬೆಲೆಯನ್ನು ಅದರ ಗುಣಮಟ್ಟವನ್ನು ಅವಲಂಬಿಸಿ ಕ್ವಿಂಟಲ್‌ಗೆ 35,000-50,000 ರೂ ನೀಡಲಾಗುತ್ತದೆ. ಆದರೆ, ಶರಣಪ್ಪ ಅವರು ಕ್ವಿಂಟಲ್‌ಗೆ ರೂ.70 ಸಾವಿರಕ್ಕೂ ಹೆಚ್ಚು ಹಣ ಗಳಿಕೆ ಮಾಡಿದ್ದಾರೆ.

ಈ ಹಿಂದೆ 2020ರಲ್ಲಿ ರೈತರೊಬ್ಬರು ಕ್ವಿಂಟಲ್ ಮೆಣಸಿನಕಾಯಿಗೆ 41,101ರೂ.ಗೆ ಮಾರಾಟ ಮಾಡಿದ್ದರು. ನವೆಂಬರ್ 2022ರಲ್ಲಿ ಮಾರುಕಟ್ಟೆ ಬೆಲೆ 45,000 ಆಗಿತ್ತು ಎಂದು ರೈತರು ತಿಳಿಸಿದ್ದಾರೆ.

ಶರಣಪ್ಪ ಅವರ ಮೆಣಸಿನಕಾಯಿಯನ್ನು ಅಂಗಡಿ ಮಾಲೀಕ ಅಶೋಕ ಗಡಾದ್ ಅವರು ಗದಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮಾರುಕಟ್ಟೆಯಲ್ಲಿ ಖರೀದಿಸಿದ್ದಾರೆ. ಕಳೆದ ವಾರ ಹುಬ್ಬಳ್ಳಿ ಎಪಿಎಂಸಿಯಲ್ಲಿ ಶರಣಪ್ಪ ಅವರು, ಇದೇ ಮೆಣಸಿನಕಾಯಿಯನ್ನು ಕ್ವಿಂಟಲ್‌ಗೆ 59 ಸಾವಿರ ರೂ.ಗೆ ಮಾರಾಟ ಮಾಡಿದ್ದರು. ಈ ಬೆಳವಣಿಗೆಯನ್ನು ಗಮನಿಸಿದ ಗಡಾದ್ ಅವರು ಮೆಣಸಿನಕಾಯಿ ನೋಡಿ ಉತ್ತಮ ಬೆಲೆ ನೀಡಿ ಖರೀದಿ ಮಾಡಿದ್ದಾರೆ.

ಕಳೆದ ವರ್ಷ ಎಡೆಬಿಡದೆ ಸುರಿದ ಮಳೆಯಿಂದಾಗಿ ಬಹುತೇಕ ಮೆಣಸಿನಕಾಯಿ ಬೆಳೆ ನಾಶವಾಗಿ ಬೆಲೆ ಏರಿಕೆಯಾಗಿದೆ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ.

ಈ ಹಣವನ್ನು ನನ್ನ ಮೂವರು ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಲು ನಿರ್ಧರಿಸಿದ್ದೇನೆ. ಇದು ನಮ್ಮ ಕುಟುಂಬಕ್ಕೆ ಹೊಸ ವರ್ಷದ ಉಡುಗೊರೆಯಾಗಿದೆ. ಈ ವಿಶೇಷ ಮೆಣಸಿನಕಾಯಿಯನ್ನು ಬೆಳೆಯಲು ನಮಗೆ ಸಹಾಯ ಮಾಡಿದ ಮತ್ತು ನಮಗೆ ಮಾರ್ಗದರ್ಶನ ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದು ಶರಣಪ್ಪ ಅವರು ಹೇಳಿದ್ದಾರೆ.

ಈ ವರ್ಷ ಅಕಾಲಿಕ ಮಳೆ ಸುರಿದು ಮೆಣಸಿನಕಾಯಿ ಬೆಳೆಯ ಇಳುವರಿ ಕಡಿಮೆಯಾಗಿದೆ. ಅಳಿದುಳಿದ ಮೆಣಸಿನಕಾಯಿಗೆ ಬಂಗಾರದ ಬೆಲೆ ಬಂದಿದ್ದು, ಇದೇ ರೀತಿ ಬೆಲೆ ಇದ್ದರೆ ರೈತರು ಆರ್ಥಿಕವಾಗಿ ಮುಂದೆ ಬರಲು ಸಾಧ್ಯ.

-ಯಲ್ಲಪ್ಪ ಎಚ್ ಬಾಬರಿ, ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ

ಕಾಶ್ಮೀರ ಡಬ್ಬಿ ಮೆಣಸಿನಕಾಯಿಯು ದಪ್ಪ, ಉದ್ದ ಮತ್ತು ಎಣ್ಣೆಯ ಅಂಶವನ್ನು ಹೊಂದಿರುವ ತಳಿಯಾಗಿದೆ. ಮತ್ತು ಇದು ಹೆಚ್ಚಿನ ಬೆಲೆಯನ್ನು ಆಕರ್ಷಿಸುತ್ತದೆ. ಇದನ್ನು ಮುಖ್ಯವಾಗಿ ಮೆಣಸಿನ ಪುಡಿ ಮಾಡಲು ಬಳಸಲಾಗುತ್ತದೆ. ಗದಗ, ಹುಬ್ಬಳ್ಳಿ ಮತ್ತು ಹಾವೇರಿಯ ಏಜೆಂಟ್‌ಗಳು ಇದಕ್ಕೆ ಉತ್ತಮ ಬೆಲೆ ನೀಡಿ, ಇತರ ರಾಜ್ಯಗಳಿಂದ ಖರೀದಿ ಮಾಡುತ್ತಾರೆ.


Spread the love

LEAVE A REPLY

Please enter your comment!
Please enter your name here