ವಿಜಯಸಾಕ್ಷಿ ಸುದ್ದಿ, ಗದಗ
ಜಿಲ್ಲೆಯಲ್ಲಿ ಅಕ್ರಮ ಮರಳು ಸಂಗ್ರಹಣೆ, ಸಾಗಾಟ ಲಂಗುಲಗಾಮಿಲ್ಲದೇ ಸಾಗುತ್ತಿದೆ. ಒಂದೆಡೆ ಮರಳು ಪೂರೈಕೆ ತಗ್ಗಿರುವದರಿಂದ ದರ ಮುಗಿಲು ಮುಟ್ಟಿದೆ. ಈ ನಡುವೆ, ಆಡಳಿತದ ನಿಯಮಾವಳಿಗಳಿಗೆ ಕ್ಯಾರೇ ಎನ್ನದೆ ಅಕ್ರಮವಾಗಿ ಮರಳು ಸಂಗ್ರಹಿಸಿ ಸಾಗಿಸುತ್ತಿರುವ ಬಗ್ಗೆ ರೋಣದಿಂದ ವರದಿಯಾಗಿದೆ.
ಗದಗ ಜಿಲ್ಲೆ ರೋಣ ತಾಲೂಕಿನ ತಳ್ಳಿಹಾಳ ಗ್ರಾಮದ ತುಂಬಿದ ಹಳ್ಳದಲ್ಲಿ ಅಕ್ರಮ ಮರಳು ಧಂದೆ ಯಾರ ಭಯವೂ ಇಲ್ಲದೇ ಸಾಗುತ್ತಿರುವದು ತಾಲೂಕಾಡಳಿತದ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಇಲ್ಲಿ ತುಂಬಿದ ಸವಿನೀರಿನ ಹಳ್ಳದಲ್ಲಿಯೇ ಟ್ರಾಕ್ಟರ್ ಮೂಲಕ ಮರಳು ಸಂಗ್ರಹಣೆ ಹಾಗೂ ಸಾಗಾಟ ನಿತ್ಯವೂ ನಡೆಯುತ್ತಲೇ ಇದೆ ಎಂಬ ಆರೋಪ ಕೇಳಿಬರುತ್ತಿದೆ.
ಹರಿಯುವ ನೀರಲ್ಲಿ ಟ್ರ್ಯಾಕರ್ ಚಾಲಕರ ಹುಚ್ಚಾಟವೂ ಹೆಚ್ಚಾಗಿದೆ. ಸ್ವಲ್ಪ ಯಾಮಾರಿದರೂ ಅಪಘಾತ ಕಟ್ಟಿಟ್ಟ ಬುತ್ತಿ. ಸದ್ಯ ವೈರಲ್ ಆಗಿರುವ ವಿಡಿಯೋ ಒಂದು ಸಾಕ್ಷಿಕರಿಸಿದೆ.
ಇಂಥ ಅಕ್ರಮಗಳ ಬಗ್ಗೆ ಗಮನಹರಿಸಬೇಕಿದ್ದ ಆಡಳಿತ ದಿವ್ಯ ನಿರ್ಲಕ್ಯ ಧೋರಣೆ ತಾಳಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.