ವಿಡಿಯೋ ಸಂವಾದ ಮೂಲಕ ತಜ್ಞರ ಸಲಹಾ ಸಮಿತಿ ಸಭೆ
*ಪರಿಸ್ಥಿತಿಗನಗುಣವಾಗಿ ಶಾಲೆ ರಜೆ ಕುರಿತು ಸಲಹಾ ಸಮಿತಿಯ ನಿರ್ಧಾರ
ವಿಜಯಸಾಕ್ಷಿ ಸುದ್ದಿ, ಗದಗ:
ಶಾಲಾ ಮಕ್ಕಳಲ್ಲಿ ಸೋಂಕು ದೃಢವಾದಲ್ಲಿ ಆ ಶಾಲೆಯನ್ನು ಒಂದು ಘಟಕವನ್ನಾಗಿ ಪರಿಗಣಿಸಿ ಪರಿಸ್ಥಿತಿಗೆ ಅನುಸಾರವಾಗಿ ರಜೆ ನೀಡಲಾಗುತ್ತಿದೆ. ಸೋಮವಾರ ನಡೆದ ತಜ್ಞರ ಸಲಹಾ ಸಮಿತಿಯು ಶಾಲಾ ತರಗತಿಗಳನ್ನು ಈ ವಾರವೂ ಮುಂದುವರೆಸಲು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿತು.
ಅನುದಾನ ರಹಿತ ಶಾಲೆಗಳ ಸಂಘದ ಮುಖ್ಯಸ್ಥ ಶಶಿಧರ ದಿಂಡೂರ ಮಾತನಾಡಿ, ಜಿಲ್ಲೆಯ ಮಕ್ಕಳಲ್ಲಿ ಸೋಂಕಿನ ಪ್ರಮಾಣ ಅಷ್ಟಾಗಿ ಇಲ್ಲದಿರುವದರಿಂದ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಶಾಲಾ ತರಗತಿ ನಡೆಸುವದು ಸೂಕ್ತವಾಗಿದ್ದು ಈ ವಾರವು ಶಾಲೆಗಳನ್ನು ಯಥಾವತ್ತಾಗಿ ನಡೆಸಬಹುದಾಗಿದೆ ಎಂದರು.
ಜಿಲ್ಲಾಡಳಿತದಿಂದ ಸೋಮವಾರ ಏರ್ಪಡಿಸಲಾದ ತಜ್ಞರ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು, ಅಭಿಪ್ರಾಯಗಳನ್ನು ಪರಿಗಣಿಸಿ ಸೋಂಕು ಹೆಚ್ಚು ಕಂಡು ಬರುವ ಶಾಲೆಗಳಿಗೆ ಮಾತ್ರ ರಜೆ ನೀಡಿ ಸೋಂಕು ನಿಯಂತ್ರಣಕ್ಕೆ ಶಾಲಾ ಮಕ್ಕಳು ಹಾಗೂ ಶಿಕ್ಷಕರನ್ನು ತಪಾಸಣೆಗೊಳಪಡಿಸುವಂತೆ ಸೂಚಿಸಿದರು. ಮಕ್ಕಳಿಗೆ ಶಾಲಾ ತರಗತಿಗಳಿಗೆ ಹಾಜರಾತಿ ಕಡ್ಡಾಯವಾಗಿರುವುದಿಲ್ಲ. ಆನಲೈನ್ ಮೂಲಕವೂ ತರಗತಿಗಳಿಗೆ ಹಾಜರಾಗಬಹುದಾಗಿರತ್ತದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜಗದೀಶ ನುಚ್ಚಿನ ಮಾತನಾಡಿ, ಕಳೆದೆರಡು ಕೊರೊನಾ ಸೋಂಕಿನ ಅಲೆಗಳ ಅಂಕಿ ಅಂಶಗಳನ್ನು ಗಮನಿಸಿದಾಗ ಮಕ್ಕಳಲ್ಲಿ ಸೋಂಕಿನ ಪ್ರಮಾಣ ಈ ಬಾರಿ ಕಡಿಮೆ ಇದ್ದು ಹಾಗೂ ಸೋಂಕು ದೃಢಪಟ್ಟ ಮಕ್ಕಳ ಆರೋಗ್ಯದಲ್ಲಿ ಗಂಭೀರ ಸ್ವರೂಪದ ಪರಿಣಾಮಗಳು ಕಂಡುಬಂದಿಲ್ಲ. ಸರ್ಕಾರ ನಿಗದಿಪಡಿಸಿದ ಗುರಿಗಿಂತ ಹೆಚ್ಚಿನ ಕೋವಿಡ್ ಪರೀಕ್ಷೆಗಳನ್ನು ಜಿಲ್ಲೆಯಲ್ಲಿ ಕೈಗೊಳ್ಳಲಾಗುತ್ತಿದೆ.
ಜನೇವರಿ 1 ರಿಂದ 16 ರ ವರೆಗೆ ಜಿಲ್ಲೆಯಲ್ಲಿ ಮಕ್ಕಳು ಸೇರಿದಂತೆ ಒಟ್ಟು 21659 ಜನರನ್ನು ಸೋಂಕು ತಪಾಸಣೆಗೊಳಪಡಿಸಲಾಗಿದ್ದು ಈ ಪೈಕಿ 0-18 ವಯೋಮಾನದ 87 ಮಕ್ಕಳು ಸೇರಿದಂತೆ ಒಟ್ಟು 563 ಪ್ರಕರಣಗಳು ದೃಢಪಟ್ಟಿದ್ದು ಒಟ್ಟಾರೆ 23 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ವರೆಗೆ 53 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಸಭೆಗೆ ತಿಳಿಸಿದರು.
ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಬಿ.ಎಂ.ಗೊಜನೂರ ಸಭೆಗೆ ಮಾಹಿತಿ ಒದಗಿಸುತ್ತಾ, ಜಿಲ್ಲೆಯಲ್ಲಿ ಒಂದನೇ ಡೋಸ್ ಲಸಿಕೆಯನ್ನು ಶೇ. 100 ಕ್ಕೂ ಅಧಿಕ ಅರ್ಹರಿಗೆ ನೀಡಲಾಗಿದೆ. ಅದರಂತೆ ಎರಡನೇ ಡೋಸನ್ನು ಶೇ. 89 ರಷ್ಟು ಪೂರ್ಣಗೊಳಿಸಲಾಗಿದೆ. 15 ರಿಂದ 18 ವಯೋಮಾನದ ಮಕ್ಕಳಿಗೆ ನೀಡುವ ಲಸಿಕಾಕರಣವನ್ನು ಶೀಘ್ರವೇ ಪೂರ್ಣಗೊಳಿಸಲು ಕ್ರಮ ವಹಿಸಲಾಗಿದೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವಲಿಂಗಪ್ಪ ಮಾತನಾಡಿ, ಸೋಂಕು ನಿಯಂತ್ರಣ ಕುರಿತು ಕಟ್ಟುನಿಟ್ಟಾಗಿ ಮಾಸ್ಕ್ ಧರಿಸುವುದರೊಂದಿಗೆ ದೈಹಿಕ ಅಂತರ ಪಾಲಿಸಿ ತರಗತಿ ನಡೆಸಲು ಶಿಕ್ಷಕರಿಗೆ ಸೂಚಿಸಲಾಗಿದೆ. ಸೋಂಕು ದೃಢಪಟ್ಟ ಶಾಲೆಗಳಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಶಾಲಾ ತರಗತಿಗಳನ್ನು ನಡೆಸುವ ಕುರಿತಂತೆ ಪಾಲಕರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದರು.
ಕೊನೆಯಲ್ಲಿ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಭರತ ತಜ್ಞರ ಅಭಿಪ್ರಾಯಗಳನ್ನು ಆಲಿಸಿ ಮಾತನಾಡಿ, ಶಾಲಾ ಮಕ್ಕಳಲ್ಲಿ ಸೋಂಕಿನ ಪ್ರಕರಣಗಳು ಅಧಿಕವಾಗಿ ಕಂಡುಬಂದಲ್ಲಿ ಶಾಲೆಗಳಿಗೆ ರಜೆ ಘೋಷಿಸೋಣ ಈ ಬಗ್ಗೆ ನಿರಂತರವಾಗಿ ತಜ್ಞರ ಹಾಗೂ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಸಂಪರ್ಕದಲ್ಲಿದ್ದು ಸಮನ್ವಯದೊಂದಿಗೆ ಕಾರ್ಯನಿರ್ವಹಿಸೋಣ ಎಂದರು.
ಸಲಹಾ ಸಮಿತಿ ಸಭೆಯನ್ನು ಪುನ: ಮುಂದಿನ ವಾರ ಜರುಗಿಸಿ ಮಕ್ಕಳಲ್ಲಿ ಸೋಂಕಿನ ಪ್ರಮಾಣ ಕುರಿತು ಚರ್ಚಿಸುವ ಮೂಲಕ ಮುಂದಿನ ನಿರ್ಧಾರ ಕೈಗೊಳ್ಳಲು ಕ್ರಮ ವಹಿಸಲಾಗುವದು ಈ ಬಗ್ಗೆ ಶಿಕ್ಷಣ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ನಿಗಾವಹಿಸುವಂತೆ ಸೂಚಿಸಿದರು.
ಸಭೆಯಲ್ಲಿ ಸಲಹಾ ಸಮಿತಿ ಸದಸ್ಯರು, ಆಯ್.ಎಮ್.ಎ. ಪದಾಧಿಕಾರಿಗಳು, ಖಾಸಗಿ ಶಾಲಾ ಆಡಳಿತ ಮಂಡಳಿ ಪದಾಧಿಕಾರಿಗಳು, ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.