ವಿಜಯಸಾಕ್ಷಿ ಸುದ್ದಿ, ಗದಗ
ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸದ್ಯ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಕ್ಷೇತ್ರ ಶಿಕ್ಷಣಾಧಿಕಾರಿಗೆ (ಬಿಇಒ) 5 ವರ್ಷ ಜೈಲು ಹಾಗೂ 25 ಸಾವಿರ ರೂ. ದಂಡ ವಿಧಿಸಿ ಗದಗ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಗದಗ ಜಿಲ್ಲೆಯ ಮುಂಡರಗಿಯ ಪಟ್ಟಣದಲ್ಲಿ 2020 ರಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಶಂಕ್ರಪ್ಪ ನಿಂಗಪ್ಪ ಹಳ್ಳಿಗುಡಿ ಶಿಕ್ಷೆಗೆ ಗುರಿಯಾದ ಅಧಿಕಾರಿ.
ಮುಂಡರಗಿಯಲ್ಲಿ ಬಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾಗ ಮನೆ ಭೇಟಿ ಕಾರ್ಯಕ್ರಮದ ನೆಪದಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಬಗ್ಗೆ ಮುಂಡರಗಿ ಪೊಲೀಸ್ ಠಾಣೆಯಲ್ಲಿ 29/2020 ಕಲಂ 354(ಎ) 8,10,12 ಐ.ಪಿ.ಸಿ ಕಲಂ ಪೋಕ್ಸೋ ಕಾಯ್ದೆ 2012 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಅಂದಿನ ಪೊಲೀಸ್ ಇನ್ಸ್‌ಪೆಕ್ಟರ್ ಎಸ್ ಎಂ ಬೆಂಕಿ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿ, 21-3-2020ರಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆಯಲ್ಲಿ ಆರೋಪಿ ಅಂದಿನ ಬಿಇಒ ಶಂಕ್ರಪ್ಪ ನಿಂಗಪ್ಪ ಹಳ್ಳಿಗುಡಿ ಅವರು ಮಾಡಿದ ಅಪರಾಧವು ರುಜುವಾತಾಗಿದ್ದರಿಂದ ಸದರಿ ಆರೋಪಿಗೆ 5 ವರ್ಷ ಜೈಲು, 25 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡದ ಹಣ ಕೊಡಲುತಪ್ಪಿದಲ್ಲಿ ಹೆಚ್ಚುವರಿಯಾಗಿ 6 ತಿಂಗಳು ಶಿಕ್ಷೆ ವಿಧಿಸಿ ಮಾನ್ಯ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ರಾಜೇಶ್ವರ ಶೆಟ್ಟಿ ಅವರಿದ್ದ ಪೀಠ ಆದೇಶ ಹೊರಡಿಸಿದೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕರಾದ ಅಮರೇಶ್ ಉಮಾಪತಿ ಹಿರೇಮಠ ವಾದ ಮಂಡಿಸಿದ್ದರು.