ಜ.ಫಕೀರೇಶ್ವರ ಮಠಕ್ಕೆ ನೂತನ ಉತ್ತರಾಧಿಕಾರಿ ನೇಮಕ ಬೆನ್ನಲ್ಲೇ: ಆಡಳಿತಾಧಿಕಾರಿಯಾಗಿ ನಿವೃತ್ತ ಕೆಎಎಸ್ ಅಧಿಕಾರಿ ವೀರಣ್ಣ ತುರುಮರಿ ಅಧಿಕಾರ
ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ:

ಕೋಮು ಸೌಹಾರ್ದತೆಯ ಹರಿಕಾರ ಶಿರಹಟ್ಟಿಯ ಕರ್ತೃ ಶ್ರೀ ಜ. ಫಕೀರೇಶ್ವರ ಮಠಕ್ಕೆ ಬಾಲೆಹೊಸೂರಿನ ಫ.ದಿಂಗಾಲೇಶ್ವರ ಸ್ವಾಮೀಜಿ ಉತ್ತರಾಧಿಕಾರಿಯಾಗಿ ನೇಮಕವಾದ ಬೆನ್ನಲ್ಲೇ ಶ್ರೀಮಠದ ಆಡಳಿತಾಧಿಕಾರಿಯಾಗಿ ನಿವೃತ್ತ ಕೆಎಎಸ್ ಅಧಿಕಾರಿ ವೀರಣ್ಣ ತುರುಮರಿ ನೇಮಕಗೊಂಡಿದ್ದಾರೆ.

ಗುರುವಾರ ಜ.ಫ.ಸಿದ್ದರಾಮ ಸ್ವಾಮೀಜಿಗಳು ಶ್ರೀಮಠದ ಪರಂಪರೆಯಂತೆ ನೇಮಕ ಪತ್ರವನ್ನು ಕರ್ತೃ ಗದ್ದುಗೆಗೆ ಮುಟ್ಟಿಸಿ ಬಳಿಕ ತುರುಮರಿ ಅವರಿಗೆ ನೀಡಿದರು.
ಈ ವೇಳೆ ಮಾತನಾಡಿದ ಜ.ಫ.ಸಿದ್ದರಾಮ ಸ್ವಾಮೀಜಿ, ‘ಶ್ರೀ ಮಠದ ಎಲ್ಲ ಕೆಲಸ ಕಾರ್ಯಗಳ ಜೊತೆಗೆ ಅಭಿವೃದ್ಧಿ ಮತ್ತು ಸುಧಾರಣೆ ಮಾಡುವ ಹೊಣೆಗಾರಿಕೆ ನೀಡಲಾಗಿದೆ. ಸಮಾಧಾನ ಮತ್ತು ಶಾಂತಿಯಿಂದ ಎಲ್ಲರ ಸಹಕಾರದೊಂದಿಗೆ ಮಠದ ಅಭಿವೃದ್ಧಿಗೆ ಶ್ರಮವಹಿಸುವಂತೆ’ ಕಿವಿಮಾತು ಹೇಳಿದರು.

ಅಧಿಕಾರ ವಹಿಸಿಕೊಂಡು ಮಾತನಾಡಿದ ವೀರಣ್ಣ ತುರುಮರಿ, ‘ಉಭಯ ಶ್ರೀಗಳು ನನ್ನ ಮೇಲೆ ನಂಬಿಕೆ ಇಟ್ಟು ವಹಿಸಿರುವಂತಹ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ಯಾರಿಗೂ ತೊಂದರೆ ಆಗದ ರೀತಿಯಲ್ಲಿ ನಿಷ್ಪಕ್ಷಪಾತವಾಗಿ ಶ್ರೀ ಮಠದ ಶ್ರೇಷ್ಠತೆ ಹೆಚ್ಚಿಸುವುದಕ್ಕೆ ಉಭಯ ಶ್ರೀಗಳ ಮಾರ್ಗದರ್ಶನದಂತೆ ಕೆಲಸ ಮಾಡುತ್ತೇನೆ’ ಎಂದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಶಿವಪ್ರಕಾಶ್ ಮಹಾಜನಶೆಟ್ಟರ, ಯಲ್ಲಪ್ಪಗೌಡ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಮಾಯೂನ್ ಮಾಗಡಿ, ಚಂದ್ರಕಾಂತ್ ನೂರಶೆಟ್ಟರ ಸೇರಿ ಹಲವರು ಉಪಸ್ಥಿತರಿದ್ದರು.