ಗ್ರಾಮ ವಾಸ್ತವ್ಯದಲ್ಲಿ ತಹಸೀಲ್ದಾರ ಕೆ.ಆರ್.ಪಾಟೀಲ……
ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ
ಗ್ರಾಮೀಣ ಜನತೆ ತಾಲೂಕಾ ಆಡಳಿತಕ್ಕೆ ಅಲೆದಾಡುವುದನ್ನು ತಪ್ಪಿಸುವುದಕ್ಕಾಗಿ ಸರಕಾರ ಜಾರಿಗೊಳಿಸಿರುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಗ್ರಾಮವಾಸ್ತವ್ಯದಲ್ಲಿ ಅರ್ಹ ಫಲಾನುಭವಿಗಳಿಗೆ ಸರಕಾರದ ಯೋಜನೆಗಳನ್ನು ತಲುಪಿಸಲಾಗುತ್ತಿದೆ ಎಂದು ತಹಸೀಲ್ದಾರ ಕೆ.ಆರ್.ಪಾಟೀಲ ಹೇಳಿದರು.
ಅವರು ಶನಿವಾರ ತಾಲೂಕಿನ ಕುಸಲಾಪೂರ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಿಮ್ಮ ಸಮಸ್ಯೆಗಳನ್ನು ಆಲಿಸುವುದಕ್ಕೆ ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗಿದ್ದು, ಇಲ್ಲಿ ನಿಮ್ಮ ಸಮಸ್ಯೆಗಳ ಕುರಿತು ಮನವಿಯನ್ನು ಸಲ್ಲಿಸಿ, ನಂತರ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ನಿಮಗೆ ಉತ್ತರ ನೀಡಲಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಇತ್ಯರ್ಥ ಪಡಿಸಬೇಕಾದಂತಹ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲಾಗುವುದು. ನಮ್ಮ ಹಂತ ಮೀರಿ ಬಂದಂತಹ ಅರ್ಜಿಗಳನ್ನು ಆಯಾ ಇಲಾಖೆಯ ಮೇಲಾಧಿಕಾರಿಗಳಿಗೆ ವಿಲೇವಾರಿ ಮಾಡಿ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲಾಗುವುದು ಎಂದರು.
ಗ್ರಾಮದ ಸರಕಾರಿ ಶಾಲಾ ಆವರಣದಲ್ಲಿ ಸಸಿಯನ್ನು ನೆಟ್ಟು, ಗ್ರಾಮ ಸಂಚಾರ ಮಾಡಿ, ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿಯ 10 ಫಲಾನುಭವಿಗಳಿಗೆ ಮಾಸಾಶನದ ಮಂಜೂರಾತಿ ಆದೇಶ ಪತ್ರ, ತಾಲೂಕ ಪಂಚಾಯತ ವತಿಯಿಂದ ನರೇಗಾ ಉದ್ಯೋಗ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ ಅರ್ಜಿ, ಗ್ರಾಪಂ-4, ಕಂದಾಯ ಇಲಾಖೆ-5, ಸರ್ವೆ ಇಲಾಖೆ-3, ಸಿಡಿಪಿಓ-1, ಜಪಿಡಬ್ಲ್ಯೂಡಿ-1, ಅರಣ್ಯ ಇಲಾಖೆ-1, ಸಾರಿಗೆ ಇಲಾಖೆ-1, ಹೆಸ್ಕಾಂ-1, ಶಿಕ್ಷಣ ಇಲಾಖೆ-1 ಹಾಗೂ ಕಾರ್ಮಿಕ ಇಲಾಖೆ-1 ಹೀಗೆ ಒಟ್ಟು 19 ಅರ್ಜಿಗಳು ಸ್ವೀಕೃತವಾದವು.
ಮಜ್ಜೂರ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರು, ತಾಪಂ ಇಓ ಎಸ್.ನಾರಾಯಣ, ಪಶು ವೈದ್ಯಾಧಿಕಾರಿ ಡಾ. ದಯಾನಂದ ಹಕ್ಕಾಪಕ್ಕಿ, ಶಿಕ್ಷಣ ಇಲಾಖೆಯ ಇಸಿಓ ಹರೀಶ್, ಶಿವಣ್ಣ ಲಮಾಣಿ, ಕಂದಾಯ ನಿರೀಕ್ಷಕ ಮಹಾಂತೇಶ ಮಗದುಮ್ ಮುಂತಾದವರು ಉಪಸ್ಥಿತರಿದ್ದರು.