ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ:
‘ನಾವು MD ಮಾಡಿ ಜನರ ಸೇವೆಗಾಗಿ ಇಲ್ಲಿಗೆ ಬಂದಿರುತ್ತೇವೆ ಹೊರತು ಗತಿಯಿಲ್ಲ ಅಂತಾ ಬಂದಿರುವುದಿಲ್ಲ. ಹೀಗೆ ಕುಡಿದು ಬಂದು ನಮಗೂ ನಮ್ಮ ಸಿಬ್ಬಂದಿಗಳಿಗೂ ಅವಾಚ್ಯವಾಗಿ ಬೈದು ಬೆದರಿಕೆ ಹಾಕಿದರೆ ಸೇವೆ ಮಾಡಲು ಹೇಗೆ ಸಾಧ್ಯ’ ಎಂದು ತಾಲೂಕಾ ವೈದ್ಯಾಧಿಕಾರಿ ಡಾ.ವೆಂಕಟೇಶ್ ರಾಠೋಡ್ ಅಸಹಾಯಕತೆ ವ್ಯಕ್ತಪಡಿಸಿದರು.
ಸೋಮವಾರ ಇಲ್ಲಿನ ತಾಲೂಕು ಆಸ್ಪತ್ರೆಯಲ್ಲಿ ಶಾಸಕ ರಾಮಣ್ಣ ಲಮಾಣಿ ಅಧ್ಯಕ್ಷತೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಅವರು ಈ ರೀತಿ ಬೇಸರ ವ್ಯಕ್ತಪಡಿಸಿದರು.
ಕೆಲವರು ಕುಡಿದು ಬಂದು ರಾತ್ರಿ ವೇಳೆ ಕರ್ತವ್ಯ ನಿರ್ವಹಿಸುವಂತಹ ಸಿಬ್ಬಂದಿಗಳಿಗೆ ಅವಾಚ್ಯವಾಗಿ ನಿಂದಿಸುತ್ತಿದ್ದಾರೆ. ಇದರಿಂದ ಕರ್ತವ್ಯ ನಿರ್ವಹಿಸಲು ತುಂಬಾ ತೊಂದರೆಯಾಗುತ್ತಿದ್ದು, ಕುಡುಕರ ಹಾವಳಿಯಿಂದ ಸಿಬ್ಬಂದಿಗಳು ಬೇಸತ್ತು ಪ್ರತಿಭಟಿಸುವ ಹಂತಕ್ಕೆ ತಲುಪಿದ್ದಾರೆ. ಸಿಬ್ಬಂದಿಗಳ ಹಿತದೃಷ್ಟಿಯಿಂದ ಅನಿವಾರ್ಯವಾಗಿ ಅವರ ಬೆಂಬಲಕ್ಕೆ ನಾನೂ ನಿಲ್ಲಬೇಕಾಗುತ್ತದೆ. ಆದ್ದರಿಂದ ಆಸ್ಪತ್ರೆಗೆ ರಾತ್ರಿ ವೇಳೆ ಖಾಯಂ ಪೊಲೀಸ್ ಸಿಬ್ಬಂದಿ ನೇಮಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವಂತೆ ಶಾಸಕರಿಗೆ ಮನವಿ ಮಾಡಿದರು.
ತಕ್ಷಣವೇ ಸ್ಪಂದಿಸಿದ ಶಾಸಕ
ಆಡಳಿತ ವೈದ್ಯಾಧಿಕಾರಿ ಈ ರೀತಿ ಹೇಳಿದ್ದನ್ನು ಆಲಿಸಿದ ಶಾಸಕ ರಾಮಣ್ಣ ಲಮಾಣಿ, ಸಂಬಂದಿಸಿದ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ ಆಸ್ಪತ್ರೆಗೆ ಕಾಯಂ ಸಿಬ್ಬಂದಿ ನಿಯೋಜಿಸಬೇಕೆಂದು ಸೂಚಿಸಿದರು. ಕುಡಿದು ಬಂದು ಆಸ್ಪತ್ರೆಯಲ್ಲಿ ಗಲಾಟೆ ಮಾಡುವಂತವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸುವಂತೆ ಹೇಳಿದ ಅವರು, ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂದು ವೈದ್ಯಾಧಿಕಾರಿಗೆ ಆತ್ಮಸ್ಥೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ನಾಗರಾಜ್ ಲಕ್ಕುಂಡಿ, ಫಕ್ಕೀರೇಶ ರಟ್ಟಿಹಳ್ಳಿ, ಸಂದೀಪ್ ಕಪ್ಪತ್ತನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.