ನರಗುಂದದಲ್ಲಿ ಯುವಕನ ಕೊಲೆ; ಸಚಿವ ಪಾಟೀಲ್, ಪೊಲೀಸರ ನಡೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅಸಮಾಧಾನ

0
Spread the love

ನರಗುಂದದಲ್ಲಿ ಭಜರಂಗದಳ, ಸಂಘ ಪರಿವಾರ ಬಾಲ ಬಿಚ್ಚಿರುವುದು ಅಪಾಯಕಾರಿ

Advertisement

ವಿಜಯಸಾಕ್ಷಿ ಸುದ್ದಿ, ನರಗುಂದ:

‘ನರಗುಂದದಲ್ಲಿ ಈ ರೀತಿಯ ಘಟನೆಗಳು ಯಾವತ್ತೂ ನಡೆದಿರಲಿಲ್ಲ. ಇಂತಹ ಘಟನೆಗಳು ಉಡುಪಿ, ಮಂಗಳೂರು ಕಡೆಗಳಲ್ಲಿ ನಡೆಯುತ್ತಿದ್ದವು. ಆದರೆ, ಈಗ ಇಲ್ಲಿಯೂ ಭಜರಂಗದಳ, ಸಂಘ ಪರಿವಾರದವರು ಬಾಲ ಬಿಚ್ಚಿರುವುದು ಅಪಾಯಕಾರಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.

ಕಳೆದ ಜ.17ರಂದು ಪಟ್ಟಣದಲ್ಲಿ ಕೊಲೆಯಾದ ಯುವಕನ ಮನೆಗೆ ಮಂಗಳವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಬಳಿಕ ಮಾತನಾಡಿದರು.

‘ಭಜರಂಗದಳ, ಸಂಘಪರಿವಾರದವರು ಕಾನೂನು ಕೈಗೆ ತೆಗೆದುಕೊಳ್ಳಲು ಶುರು ಮಾಡಿದ್ದು, ಅವರಿಗೆ ಪೊಲೀಸರ ಭಯವಿಲ್ಲದಾಗಿದೆ. ಇಂತವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳದಿದ್ದರೆ ಕುಮ್ಮಕ್ಕು ನೀಡಿದಂತಾಗುತ್ತದೆ ಎಂದು ಹೇಳಿದ ಅವರು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

‘ಘಟನೆಯ ಬಗ್ಗೆ ಪೊಲೀಸರಿಗೆ ಮುಂಚಿತವಾಗಿ ಗೊತ್ತಿದ್ದರೂ ಮುಂಜಾಗೃತಾ ಕ್ರಮ ಕೈಗೊಂಡಿಲ್ಲ. ಮುಂಜಾಗೃತಾ ಕ್ರಮ ಕೈಗೊಂಡಿದ್ದರೆ, ಹೀಗಾಗುತ್ತಿರಲಿಲ್ಲ. ಪೊಲೀಸರ ನಿರ್ಲಕ್ಷ್ಯದಿಂದ ಹೀಗಾಗಿದ್ದು, ಭಜರಂಗದಳದವರ ಜೊತೆಗೆ ಅವರೂ ಶಾಮೀಲಾಗಿರಬೇಕು. ಇಲ್ಲದಿದ್ದರೆ ಭಜರಂಗದಳವರನ್ನು ಕಂಡು ಹೆದರಿಕೊಂಡಿರಬೇಕು ಎಂದು ಆರೋಪಿಸಿದ ಅವರು, ಈ ಬಗ್ಗೆ ವಿಧಾನಸಭೆಯಲ್ಲಿ ಧ್ವನಿ ಎತ್ತಲಾಗುವುದು. ಭಜರಂಗದಳ, ಸಂಘಪರಿವಾರದವರ ಮೇಲೆ ಕ್ರಮ ಕೈಗೊಳ್ಳುವಂತೆ, ಮೃತ ಯುವಕನ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸುತ್ತೇನೆ ಎಂದು ಹೇಳಿದರು.

‘ಜಿಲ್ಲಾ ಉಸ್ತುವಾರಿ ಸಚಿವರು ಇದೇ ಊರಿನವರಾಗಿದ್ದರೂ, ಅವರ ಊರಿನಲ್ಲಿಯೇ ಕೊಲೆಯಾಗಿದ್ದರೂ ಇಲ್ಲಿಯವರೆಗೂ ಸೌಜನ್ಯಕ್ಕಾದರೂ ಮೃತ ಯುವಕನ ಮನೆಗೆ ಭೇಟಿ ನೀಡದಿರುವುದು ಅವರ ಬೇಜವಾಬ್ದಾರಿತನ ತೋರಿಸುತ್ತದೆ. ಮಂತ್ರಿಯಾಗಿರುವ ಸಿ.ಸಿ.ಪಾಟೀಲರು ಘಟನೆಯನ್ನು ಲಘುವಾಗಿ ತೆಗೆದುಕೊಂಡಿದ್ದಾರೆ. ಅವರ ಕ್ಷೇತ್ರದಲ್ಲಿ ಕೋಮು ಗಲಭೆಯಾಗಿ ಕೊಲೆಯಾಗಿರುವುದು ಅವರಿಗೆ ಕಪ್ಪುಚುಕ್ಕಿಯಾಗಿದೆ ಎಂದ ಅವರು, ಮಂತ್ರಿಯೇ ಬಂದಿಲ್ಲ ಅಂದ್ರೆ, ಅಧಿಕಾರಿಗಳು ಹೇಗೆ ಬರುತ್ತಾರೆ ಹೇಳಿ? ಎಂದು ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ಈ ಮೇಲಿನಂತೆ ಪ್ರತಿಕ್ರಿಯಿಸಿದರು.


Spread the love

LEAVE A REPLY

Please enter your comment!
Please enter your name here