ಎಸ್ಪಿ ಮೇಲೆ ತೂಗುಗತ್ತಿ; ಗಲಭೆಗೆ ಕುಮ್ಮಕ್ಕು ನೀಡಿದವರ ಮೇಲೆ ಕ್ರಮ ಕೈಗೊಳ್ತಾರಾ ಶಿವಪ್ರಕಾಶ್?

0
Spread the love

ವಿಜಯಸಾಕ್ಷಿ ಸುದ್ದಿ, ಗದಗ:

Advertisement

ಜಿಲ್ಲೆಯ ನರಗುಂದ ಕೋಮುಗಲಭೆಯಲ್ಲಿ ಯುವಕನೋರ್ವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬೆಳಗಾವಿ ಉತ್ತರ ವಿಭಾಗದ ಐಜಿ ಅವರು ನರಗುಂದ ಸಿಪಿಐ ನಂದೀಶ್ವರ ಕುಂಬಾರ್ ಅವರನ್ನು‌ ಅಮಾನತು‌ ಮಾಡಿ ಆದೇಶಿಸಿದ್ದಾರೆ. ಇನ್ನುಳಿದ ತಮ್ಮ ವ್ಯಾಪ್ತಿಯಲ್ಲಿ ಬರುವ ಅಧಿಕಾರಿ, ಸಿಬ್ಬಂದಿಗಳ ಮೇಲೆ‌ ಕ್ರಮ ಕೈಗೊಳ್ಳುವ ಜವಾಬ್ದಾರಿ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಅವರ ಹೆಗಲಿಗೆ ಬಿದ್ದಿದೆ.

ನರಗುಂದ ಗಲಭೆ ಪ್ರಕರಣ ಕುರಿತಂತೆ
ಹಲವು ತಿಂಗಳಿಂದ ಹಿಂದೂ-ಮುಸ್ಲಿಂರ ಮಧ್ಯೆ ನಿರಂತರವಾಗಿ ಗಲಾಟೆ, ಗಲಭೆಗಳು ನಡೆಯುತ್ತಿದ್ದರೂ ತಡೆಗಟ್ಟಲು ಮುಂದಾಗಲಿಲ್ಲ. ಅಲ್ಲದೇ, ಘಟನೆ ಬಳಿಕ ಆರೋಪಿಗಳನ್ನು ಶೀಘ್ರವೇ ಬಂಧಿಸಲಿಲ್ಲ. ಅಲ್ಲದೇ, ಎರಡು ಕೋಮಿನ ಮಧ್ಯೆ ಆಗಾಗ ನಡೆಯುತ್ತಿದ್ದ ಸಣ್ಣಪುಟ್ಟ ಗಲಾಟೆಗಳನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲ, ಕರ್ತವ್ಯ ಲೋಪವೆಸಗಿದ್ದಾರೆ ಎಂಬ ಕಾರಣಕ್ಕೆ ನರಗುಂದ ಸಿಪಿಐ‌ ನಂದೀಶ್ವರ ಕುಂಬಾರ ಅವರನ್ನು ಐಜಿಪಿ ಎನ್.ಸತೀಶ್ ಕುಮಾರ್ ಅವರು ಅಮಾನತು‌ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ನರಗುಂದ ಪೊಲೀಸ್ ಠಾಣೆಯ ಇನ್ನುಳಿದ ಅಧಿಕಾರಿ, ಸಿಬ್ಬಂದಿಗಳಿಗೆ ನಡುಕ‌ ಶುರುವಾಗಿದೆ.

ತಮ್ಮ ವ್ಯಾಪ್ತಿಗೆ ಬರುವ ನರಗುಂದ ಸಿಪಿಐ ಅವರನ್ನು ಅಮಾನತು ಮಾಡಿ ಆದೇಶಿಸಿರುವ ಐಜಿಪಿ ಅವರು, ಇನ್ನುಳಿದ ಪೊಲೀಸ್ ಸಿಬ್ಬಂದಿಗಳ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ. ಹಲವು ವರ್ಷಗಳಿಂದ ಒಂದೇ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವವರು, ಕೊಲೆ ಪ್ರಕರಣದಲ್ಲಿ ಭಾಗಿಯಾದ ಭಜರಂಗದಳ ಕಾರ್ಯಕರ್ತರಿಗೆ ಯಾವೆಲ್ಲ ಅಧಿಕಾರಿಗಳು ಕುಮ್ಮಕ್ಕು ‌ನೀಡುತ್ತಿದ್ದರು ಎಂಬ ಇತ್ಯಾದಿ ಮಾಹಿತಿಗಳನ್ನು ‌ತರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ, ಅಂತಹ ಅಧಿಕಾರಿಗಳ‌ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಜವಾಬ್ದಾರಿಯನ್ನು ಎಸ್ಪಿ ಅವರಿಗೆ ವಹಿಸಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಎಸ್ಪಿ ಅವರ ಮೇಲೆ ತೂಗುಗತ್ತಿ ಓಡಾಡುತ್ತಿದೆ.

ಗದಗ ಜಿಲ್ಲೆಯ ಇತಿಹಾಸದಲ್ಲೇ ಇಂತಹ ಕೋಮು ಗಲಭೆಗಳು‌ ನಡೆದಿರಲಿಲ್ಲ. ಅಲ್ಲದೇ, ಸಣ್ಣಪುಟ್ಟ ಘಟನೆಗಳು ನಡೆದರೂ ಎರಡು ಕಡೆಯ ಹಿರಿಯರು ಬೈದು ಬುದ್ಧಿವಾದ ಹೇಳಿ ಸರಿಪಡಿಸುತ್ತಿದ್ದರು. ಆದರೆ, ನರಗುಂದದಲ್ಲಿ ಜ.17 ರಂದು ನಡೆದ ಘಟನೆಯಿಂದಾಗಿ ಗದಗ ಜಿಲ್ಲೆಯ ‌ಜನತೆ ತಲೆತಗ್ಗಿಸುವಂತಾಗಿದೆ. ಕೋಮುಸೌಹಾರ್ದತೆಗೆ ಹೆಸರುವಾಸಿಯಾಗಿರುವ ಜಿಲ್ಲೆಗೆ ಕಪ್ಪು ಮಸಿ ಅಂಟಿದಂತಾಗಿದೆ ಎಂಬ ಮಾತು ಸಾರ್ವಜನಿಕ ‌ವಲಯದಲ್ಲಿ‌ ಕೇಳಿ ಬರುತ್ತಿದೆ.

ಅದರಂತೆ, ಎಸ್ಪಿ ಶಿವಪ್ರಕಾಶ್ ದೇವರಾಜು ಅವರು ಕರ್ತವ್ಯಲೋಪ ಎಸಗಿದ ಪೊಲೀಸ್ ಇಲಾಖೆ ಸಿಬ್ಬಂದಿಗಳು‌ ಮತ್ತು ಆರೋಪಿಗಳ ಮೇಲೆ ಸೂಕ್ತ ಕ್ರಮ‌ ಕೈಗೊಂಡು ಕಾನೂನು ಸುವ್ಯವಸ್ಥೆ ಕಾಪಾಡುತ್ತಾರಾ?. ತಾವೇ ಹೇಳಿದಂತೆ ಈ‌‌ ನಾಲ್ವರು ಆರೋಪಿಗಳಷ್ಟೇ ಅಲ್ಲದೇ ಘಟನೆಗೆ ಕುಮ್ಮಕ್ಕು ‌ನೀಡಿದ ಆರೋಪಿಗಳನ್ನು ಬಂಧಿಸುತ್ತಾರಾ? ಎಂಬುದನ್ನು ‌ಕಾದು ನೋಡಬೇಕಿದೆ.


Spread the love

LEAVE A REPLY

Please enter your comment!
Please enter your name here