ಗದಗ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆಗೆ ಅಸಮಾಧಾನ! ಸಚಿವ ಶ್ರೀರಾಮುಲುಗೆ ಮುದ್ರಣಕಾಶಿ ಉಸ್ತುವಾರಿ ವಹಿಸುವಂತೆ ಅಭಿಮಾನಿಗಳ ಒತ್ತಾಯ
ದುರಗಪ್ಪ ಹೊಸಮನಿ
ವಿಜಯಸಾಕ್ಷಿ ಸುದ್ದಿ, ಗದಗ:
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಐದು ತಿಂಗಳ ಬಳಿಕ ಜಿಲ್ಲಾ ಉಸ್ತುವಾರಿ ಮಂತ್ರಿಗಳನ್ನು ಬದಲಾವಣೆ ಮಾಡಿ ಆದೇಶ ಹೊರಡಿಸುತ್ತಿದ್ದಂತೆ ಕೆಲ ಜಿಲ್ಲೆಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ ಗದಗ ಜಿಲ್ಲೆಯಲ್ಲೂ ಸದ್ಯ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ನೇಮಕವಾಗಿರುವ ಸಚಿವ ಬಿ.ಸಿ. ಪಾಟೀಲರನ್ನು ಬದಲಾಯಿಸಿ ಎಂಬ ಅಪಸ್ವರ ಕಮಲ ಪಾಳೆಯ ಹಾಗೂ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಸ್ವಂತ ಜಿಲ್ಲೆಯ ಮಂತ್ರಿಗಳಿಗೆ ಬೇರೆ ಜಿಲ್ಲೆಗಳ ಉಸ್ತುವಾರಿ ನೀಡಿದ್ದು, ಈ ಹಿಂದೆ ಗದಗ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದ ಸಿ.ಸಿ. ಪಾಟೀಲರಿಗೆ ಬಾಗಲಕೋಟೆ ಜಿಲ್ಲೆಯ ಜವಾಬ್ದಾರಿ ನೀಡಿದೆ. ನೆರೆಯ ಹಾವೇರಿ ಜಿಲ್ಲೆಯ ಬಿ.ಸಿ. ಪಾಟೀಲ್‌ಗೆ ಗದಗ ಮತ್ತು ಚಿತ್ರದುರ್ಗ ಜಿಲ್ಲೆಗಳ ಉಸ್ತುವಾರಿ ಕೊಟ್ಟಿದ್ದು, ಬಿ.ಸಿ. ಪಾಟೀಲ ನೇಮಕಕ್ಕೆ ಸ್ವಪಕ್ಷದವರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಉಸ್ತುವಾರಿ ಮಂತ್ರಿ ಬದಲಾಯಿಸುವಂತೆ ಪಟ್ಟು ಹಿಡಿದಿದ್ದಾರೆ.

ಕೃಷಿ ಸಚಿವ ಬಿ.ಸಿ. ಪಾಟೀಲರಿಗೆ ಗದಗ ಜಿಲ್ಲೆ ದೂರವಾಗುತ್ತದೆ. ಅಲ್ಲದೆ, ಎರಡೆರಡು ಜಿಲ್ಲೆಗಳ ಉಸ್ತುವಾರಿ ವಹಿಸಲಾಗಿದೆ. ಇದರಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗುವ ಸಾಧ್ಯತೆಗಳಿವೆ. ಹೀಗಾಗಿ ಗದಗ ಜಿಲ್ಲೆಯ ಜನರ ನಾಡಿಮಿಡಿತ ಅರಿತಿರುವ ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರಿಗೆ ಬಳ್ಳಾರಿ ಉಸ್ತುವಾರಿ ಜೊತೆಗೆ ಅವರ ಕರ್ಮಭೂಮಿ ಗದಗ ಜಿಲ್ಲೆಯ ಉಸ್ತುವಾರಿಯನ್ನೂ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಈ ಕುರಿತ ಸಂದೇಶವುಳ್ಳ ಪೋಸ್ಟ್ ಗಳನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ.

‘ಸಚಿವ ಬಿ. ಶ್ರೀರಾಮುಲು ಗದಗ ಜಿಲ್ಲೆ ಜನತೆಯ ಮನಗೆದ್ದಿದ್ದಾರೆ. ಇಲ್ಲಿನ ಜನರ ಸಮಸ್ಯೆಗಳ ಬಗ್ಗೆ ಅವರಿಗೆ ಸಂಪೂರ್ಣ ಮಾಹಿತಿ ಇದೆ. ಹೀಗಾಗಿ ಬಳ್ಳಾರಿ ಉಸ್ತುವಾರಿ ಜೊತೆಗೆ ಗದಗ ಜಿಲ್ಲೆ ಉಸ್ತುವಾರಿಯನ್ನೂ ನೀಡಬೇಕು. ಇದರಿಂದ ಗದಗ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚು ಅನುಕೂಲವಾಗುತ್ತದೆ. ಅಲ್ಲದೆ, ಶ್ರೀರಾಮುಲು ಅವರಿಗೆ ಗದಗ ಜನರು ಅಂದರೆ ಬಹಳ ಪ್ರೀತಿ ಇದೆ. ಈ ಹಿಂದೆ 2006ರಲ್ಲಿ ಶ್ರೀರಾಮುಲು ಗದಗ ಉಸ್ತುವಾರಿ ಸಚಿವರಾಗಿದ್ದಾಗ ಬಹಳಷ್ಟು ಜನಪರ ಕೆಲಸಗಳಾಗಿವೆ ಹೀಗಾಗಿ ಶ್ರೀರಾಮುಲು ಅವರನ್ನು ಗದಗ ಜಿಲ್ಲೆ ಉಸ್ತುವಾರಿ ಮಂತ್ರಿಯನ್ನಾಗಿ ನೇಮಿಸುವಂತೆ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಶ್ರೀರಾಮುಲು ಅಭಿಮಾನಿಗಳು ಮನವಿ ಮಾಡಿಕೊಂಡಿದ್ದಾರೆ.

ಜಿಲ್ಲೆಯ ಸಚಿವರೇ ಉಸ್ತುವಾರಿ ವಹಿಸಿಕೊಂಡರೆ ಆಡಳಿತ ವ್ಯವಸ್ಥೆ ಚುರುಕಾಗಿರುತ್ತದೆ. ಜಿಲ್ಲೆಯ ಆಗುಹೋಗುಗಳ ಬಗ್ಗೆ, ಜನರ ಅಪೇಕ್ಷೆಯ ಕುರಿತು ಅವರಿಗೆ ಸಂಪೂರ್ಣ ಅರಿವಿರುತ್ತದೆ. ಜನ ಸಾಮಾನ್ಯರ ಕೈಗೆಟುಕುತ್ತಾರೆ. ಅಲ್ಲದೆ, ಸಮಸ್ಯೆಗೆ ಶೀಘ್ರವೇ ಸ್ಪಂದಿಸುತ್ತಾರೆ. ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತಾದ ಕಾಳಜಿ ಮತ್ತು ನೀಲನಕ್ಷೆ ಹೊಂದಿರುತ್ತಾರೆ. ಆದರೆ, ಬೇರೆ ಜಿಲ್ಲೆಯವರು ಅದೂ, ಓರ್ವರಿಗೆ ಎರಡೆರಡು ಜಿಲ್ಲೆಗಳ ಉಸ್ತುವಾರಿ ವಹಿಸಿದರೆ ಅಭಿವೃದ್ಧಿ ಕಷ್ಟಸಾಧ್ಯ. ಏಕೆಂದರೆ, ಈ ಹಿಂದೆ ಕೊಳ್ಳೇಗಾಲ ಶಾಸಕ ಎನ್. ಮಹೇಶ್, ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಉಸ್ತುವಾರಿಗಳಾಗಿದ್ದ ಅಷ್ಟೇನೂ ಅಭಿವೃದ್ಧಿ ಕೆಲಸಗಳು ಆಗಿರಲಿಲ್ಲ ಎಂಬುವುದು ಜಿಲ್ಲೆಯ ಜನರ ಅಳಲು.
ಸಿಸಿಪಿ ಎತ್ತಂಗಡಿಗೆ ಅಸಮಾಧಾನ

ತವರು ಜಿಲ್ಲೆಯ ಸಿ.ಸಿ. ಪಾಟೀಲರನ್ನು ಬಾಗಲಕೋಟೆಗೆ ಎತ್ತಂಗಡಿ ಮಾಡಿರುವ ಸಿಎಂ ಬಸವರಾಜ ಬೊಮ್ಮಾಯಿ ಬೇರೆ ಜಿಲ್ಲೆಯ ಬಿ.ಸಿ. ಪಾಟೀಲ್‌ಗೆ ಗದಗ ಜಿಲ್ಲಾ ಉಸ್ತುವಾರಿ ನೀಡಿದ್ದಾರೆ. ಇದು ಜಿಲ್ಲೆಯ ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ಅಸಮಾಧಾನವನ್ನುಂಟು ಮಾಡಿದೆ. ಹೀಗಾಗಿ ಅವಳಿ ನಗರಕ್ಕೆ ಸಿಸಿಪಿ ಬಂದಾಗ ಜೇನು ಹುಳುಗಳಂತೆ ಮುತ್ತಿಕ್ಕಿಗೊಳ್ಳುತ್ತಿದ್ದ ಬಿಜೆಪಿಗರು ಬಿಸಿಪಿ ಆಗಮಿಸಿದಾಗ ಸೇರುವುದು, ಸಹಕಾರ ನೀಡುವುದು ಅನುಮಾನ ಎನ್ನಲಾಗುತ್ತಿದೆ. ಏಕೆಂದರೆ, ಸಿ.ಸಿ. ಪಾಟೀಲರನ್ನು ಎತ್ತಂಗಡಿ ಮಾಡಿದರೇನಾಯ್ತು ಗದಗ ಜಿಲ್ಲೆಯ ಬಗ್ಗೆ ಸವಿಸ್ತಾರವಾಗಿ ಗೊತ್ತಿರುವ ಬಿ. ಶ್ರೀರಾಮುಲು ಅವರಿಗೆ ಉಸ್ತುವಾರಿ ನೀಡಬೇಕೆಂಬ ಆಗ್ರಹ ಇದಕ್ಕೆ ಪುಷ್ಟಿ ನೀಡಿದಂತಿದೆ.
ಗದಗ ಜಿಲ್ಲೆಯ ಉಸ್ತುವಾರಿಗೆ ಬಿ. ಶ್ರೀರಾಮುಲು ಸೂಕ್ತ ವ್ಯಕ್ತಿ. ಅವರಿಗೆ ಗದುಗಿನ ಗಲ್ಲಿಗಲ್ಲಿಯ ಜನರು ಚಿರಪರಿಚಿತವಾಗಿದ್ದು, ಇದರಿಂದ ಜಿಲ್ಲೆಯ ಜನರಿಗೆ ಅನುಕೂಲವಾಗುತ್ತದೆ. ಅವರು ಉಸ್ತುವಾರಿ ಮಂತ್ರಿಯಾಗಿದ್ದಾಗಲೇ ಗದಗ ಜಿಲ್ಲೆ ರಾಜ್ಯದಲ್ಲಿ ಬೆಳಕಿಗೆ ಬಂದಿದ್ದು, ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಹೀಗಾಗಿ ಬಿ.ಸಿ. ಪಾಟೀಲ್ ಬದಲಿಗೆ ಸಮೀಪದ ಶ್ರೀರಾಮುಲು ಅವರನ್ನು ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಕ ಮಾಡಬೇಕು.
ವಿಶ್ವನಾಥ ಖಾನಾಪುರ, ವಿಕಾಸ ವೇದಿಕೆ ಜಿಲ್ಲಾಧ್ಯಕ್ಷ
