ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ…..
ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ತಾಲೂಕಿನ ಆದ್ರಳ್ಳಿಯ ಲಂಬಾಣಿ ಸಮುದಾಯದ ಶ್ರೀ ಕುಮಾರ ಮಹಾರಾಜ ಸ್ವಾಮೀಜಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ಆರೋಪದಡಿ ಅವರ ಮೇಲೆ ಪ್ರಕರಣ ದಾಖಲಿಕೊಂಡ ಘಟನೆ ಗುರುವಾರ ನಡೆದಿದೆ.
ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ಒಳ ಮೀಸಲಾತಿಯಿಂದ ಸಮಾಜಕ್ಕೆ ಅನ್ಯಾಯವಾಗಿದ್ದು ಮುಂಬರುವ ಚುನಾವಣೆಯಲ್ಲಿ ಲಂಬಾಣಿ ಸಮಾಜದ ಯಾರೊಬ್ಬರೂ ಬಿಜೆಪಿಗೆ ಮತ ಹಾಕದಂತೆ ಸ್ವಾಮೀಜಿಯವರು ಬಹಿರಂಗ ಸಭೆಯಲ್ಲಿ ಲಂಬಾಣಿ ಸಮಾಜ ಬಾಂಧವರಿಂದ ಆಣೆ-ಪ್ರಮಾಣ ಮಾಡಿಸಿದ ಆರೋಪ ಅವರ ಮೇಲಿದೆ.
ಈ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಒಳ ಮೀಸಲಾತಿಯಿಂದ ಹತ್ತಿರುವ ಕಿಚ್ಚಿಗೆ ತುಪ್ಪ ಸವರಿದಂತಾಗಿದೆ. ಒಳಮೀಸಲಾತಿ ಆದೇಶ ವಿರೋಧಿಸಿ ಶಿರಹಟ್ಟಿ ಮತಕ್ಷೇತ್ರದ ಲಂಬಾಣಿ, ಕೊರಚ, ಕೊರಮ, ಜತೆಗೆ ಮುಸ್ಲಿಂ ಜನಾಂಗದವರನ್ನೊಳಗೊಂಡು ಲಕ್ಷ್ಮೇಶ್ವರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸುವ ಸಮಾಜದ ನಿರ್ಧಾರವನ್ನು ಜನಾಂಗದವರಿಗೆ ತಿಳಿಸುವ ವೇಳೆ ಸ್ವಾಮೀಜಿ ಈ ರೀತಿ ಹೇಳಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತು ಫ್ಲೈಯಿಂಗ್ ಸ್ಕ್ವಾಡ್ ಆಗಿರುವ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ ಮಾರುತಿ ರಾಠೋಡ್ ಅವರು, ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, 0048/2023-ಕಲಂ-295, 171-ಸಿ, ಐ ಪಿ ಸಿ ಮತ್ತು representation of people act-1951 u/s-125(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.



