ಸ್ಥಳಕ್ಕೆ ಪೊಲೀಸರ ಭೇಟಿ….. ಪರಿಶೀಲನೆ….
ವಿಜಯಸಾಕ್ಷಿ ಸುದ್ದಿ, ಗದಗ
ಎಲ್ಪಿಜಿ ಆಟೋ ವಾಹನ ಹಾಗೂ ಮಿನಿ ಬಸ್ (ಟೆಂಪೋ) ನಡುವೆ ಭೀಕರ ಅಪಘಾತ ವಾಗಿದ್ದು, ಸ್ಥಳದಲ್ಲೇ ಮೂವರು ಮೃತಪಟ್ಟಿದ್ದು, ಹಲವು ಜನರು ಗಾಯಗೊಂಡ ಘಟನೆ ಬೆಟಗೇರಿ ಸಮೀಪದ ಗಜೇಂದ್ರಗಡ ರಸ್ತೆಯ ಬಸವೇಶ್ವರ ದೇವಸ್ಥಾನದ ಬಳಿ ನಡೆದಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದ್ದ ಮದುವೆ ಮುಗಿಸಿ ಬೆಟಗೇರಿ ಕಡೆ ಬರುತ್ತಿದ್ದ ಮಿನಿ ಬಸ್, ನರೇಗಲ್ ಕಡೆ ಹೊರಟಿದ್ದ ಎಲ್ಪಿಜಿ ಆಟೋ ನಡುವೆ ಈ ಅಪಘಾತ ನಡೆದಿದೆ.
ಆಟೋದಲ್ಲಿ ಇದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರಿಂದ ಮೃತರ ಹೆಸರು, ವಿಳಾಸ ತಿಳಿದುಕೊಳ್ಳಲು ಹರಸಾಹಸ ಪಡಬೇಕಾಯಿತು.
ಅಪಘಾತ ಜರುಗಿ ಒಂದು ಗಂಟೆಯ ನಂತರ ಇಬ್ಬರು ಹೆಸರು ಗೊತ್ತಾಗಿದೆ. ಅದರಲ್ಲಿ ಬೆಟಗೇರಿಯ ನರಸಾಪೂರ ಆಶ್ರಯ ಕಾಲೋನಿಯ ಸಯ್ಯದ್ ಅಲಿ (20) ಹಾಗೂ ಪ್ರದೀಪ್ (40) ಎಂದು ತಿಳಿದು ಬಂದಿದೆ. ಮತ್ತೊಬ್ಬ ಬೆಟಗೇರಿ ಮಂಜುನಾಥ್ ನಗರದ ನಿವಾಸಿ ನಿಖಿಲ್ ಎನ್ನಲಾಗಿದೆ.

ಗಾಯಗೊಂಡವರು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಆಟೋ ಹಾಗೂ ಮಿನಿ ಬಸ್ ನಡುವೆ ನಡೆದ ಅಪಘಾತದಲ್ಲಿ ಆಟೋ ಸಂಪೂರ್ಣ ನಜ್ಜು ಗುಜ್ಜಾಗಿದ್ದು, ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಅಪಘಾತದ ಸುದ್ದಿ ತಿಳಿದ ಕೂಡಲೇ ಬೆಟಗೇರಿ ಪೊಲೀಸರು, ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಪ್ರಕರಣ ದಾಖಲಾಗಿದೆ.