ಇಳೆಗೆ ತಂಪೆರೆದ ಮಳೆ: ರೈತರ ಮೊಗದಲ್ಲಿ ಮಂದಹಾಸ
ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ಮುಂಗಾರಿನ ಮುಖ್ಯ ಮಳೆಗಳು ಸಂಪೂರ್ಣ ವಿಫಲವಾಗಿದ್ದರಿಂದ ಚಿಂತೆಗೀಡಾಗಿದ್ದ ರೈತ ಸಮುದಾಯಕ್ಕೆ ಸೋಮವಾರ ಸಂಜೆ ಗುಡುಗು-ಸಿಡಿಲಬ್ಬರದೊಂದಿಗೆ ಸುರಿದ ಹದವಾದ ಮಳೆ ಲಕ್ಷ್ಮೇಶ್ವರ ಸೇರಿ ಸುತ್ತಲಿನ ಗ್ರಾಮಗಳ ರೈತರಲ್ಲಿ ಸಂತಸ ಮೂಡಿಸಿದೆ.

ಗುಡುಗು-ಸಿಡಿಲಿನ ಅಬ್ಬರಕ್ಕೆ ಜನರು ಕೆಲಕಾಲ ಬೆಚ್ಚಿದರು. ಪಟ್ಟಣದ ಕೆಂಚಲಾಪುರ ಓಣಿಯಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು ಮರ ಸಂಪೂರ್ಣ ಹೊತ್ತಿ ಉರಿದು ಆತಂಕ ಮೂಡಿಸಿತು. ಒಂದು ಗಂಟೆ ಕಾಲ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಬಹಳ ದಿನಗಳ ನಂತರ ಸುರಿದ ಮಳೆಯಿಂದ ಕೊಳಚೆ, ತ್ಯಾಜ್ಯದಿಂದ ಕೂಡಿದ್ದ ಚರಂಡಿ ನೀರು ಅನೇಕ ಕಡೆ ರಸ್ತೆಗೆ ಹರಿದು ಸಂಚಾರಕ್ಕೆ ಅಡಚಣೆಯಾಯಿತು.

ರೋಹಿಣಿ ಮಳೆ ಸಂಪೂರ್ಣ ಕೈಕೊಟ್ಟು, ಮುಂಗಾರಿನ ಬಹುತೇಕ ಬಿತ್ತನೆ ಕುಂಠಿತವಾಗಿದೆ. ಮೃಗಶಿರ ಮಳೆಗಾಗಿ ಗುರ್ಜಿ ಪೂಜೆ, ಬಿಂದಿಗೆ ಪೂಜೆ, ಜಲಾಭಿಷೇಕ, ಕಪ್ಪೆ, ಗೊಂಬೆ ಮದುವೆ ಇನ್ನಿತರ ಧಾರ್ಮಿಕ ಸಂಪ್ರದಾಯಗಳನ್ನು ಮಾಡುತ್ತ ಮುಗಿಲಿನತ್ತ ನೋಡುತ್ತಿದ್ದರು. ಸೋಮವಾರ ಸುರಿದ ಮಳೆ ರೈತ ಸಮುದಾಯಕ್ಕೆ ಖುಷಿ ತಂದಿದೆ.
ಸಂಜೆ 6ಕ್ಕೆ ಪ್ರಾರಂಭವಾದ ಮಳೆ 2 ಗಂಟೆಗಳ ಕಾಲ ಲಕ್ಷ್ಮೇಶ್ವರವೂ ಸೇರಿ ಆದ್ರಳ್ಳಿ, ಬಟ್ಟೂರ, ಬಡ್ನಿ, ಕುಂದ್ರಳ್ಳಿ, ಗೊಜನೂರ, ರಾಮಗೇರಿ, ಶಿಗ್ಲಿ, ಅಕ್ಕಿಗುಂದ, ಅಡರಕಟ್ಟಿ, ಮಂಜಲಾಪುರ ಮತ್ತಿತರರ ಕಡೆ ಹದವಾಗಿ ಸುರಿಯಿತು.

ಒಟ್ಟಿನಲ್ಲಿ ಮಳೆಗಾಗಿ ಮುಗಿಲಿನತ್ತ ಚಿತ್ತ ನೆಟ್ಟಿದ್ದ ಈ ಭಾಗದ ರೈತ ಸಮುದಾಯಕ್ಕೆ ಬಿತ್ತನೆಗೆ ಅನಕೂಲವಾಗುವಂತೆ ಮಳೆಯಾಗಿ ಕೊಂಚ ನೆಮ್ಮದಿಯನ್ನುಂಟು ಮಾಡಿದೆ. ಆದರೆ, ಮುಂಗಾರಿನ ಹೆಸರು, ಶೇಂಗಾ, ಹತ್ತಿ ಸೇರಿ ಪ್ರಮುಖ ಬೆಳೆಗಳ ಬಿತ್ತನೆ ಕಾಲಾವಧಿ ಮೀರಿದ್ದರಿಂದ ಏನನ್ನು ಬಿತ್ತವುದು ಎಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ.