ಮರಳು ತುಂಬಿಕೊಂಡು ಎಡಬದಿಯ ರಸ್ತೆಯಲ್ಲಿ ನಿಂತಿದ್ದ ಟ್ರ್ಯಾಕರ್
ವಿಜಯಸಾಕ್ಷಿ ಸುದ್ದಿ, ಗದಗ/ಮುಂಡರಗಿ
ಹೊಸ ವರ್ಷ ಆಚರಣೆಗೆ ಕೇಕ್ ತರಲು ಮುಂಡರಗಿ ಪಟ್ಟಣಕ್ಕೆ ಬಂದು ವಾಪಾಸು ಹೋಗುವಾಗ ಟ್ರ್ಯಾಕರ್ ಟೇಲರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮವಾಗಿ ಇಂಜಿನಿಯರ್ ಸೇರಿ ಇಬ್ಬರು ಮೃತಪಟ್ಟ ಘಟನೆ ಜರುಗಿದೆ.

ಮೃತರನ್ನು ಬಳ್ಳಾರಿ ಜಿಲ್ಲೆಯ ಶಿರಗುಪ್ಪದ ಇಂಜಿನಿಯರ್ ರವಿ ತಂದೆ ರಮೇಶ್ ಕೆ (25) ಹಾಗೂ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಳೊಗೇರಾದ ಶರಣಗೌಡ ಗುರುನಗೌಡ ಪಾಟೀಲ (42)ಎಂದು ಗುರುತಿಸಲಾಗಿದೆ.
ಮೃತರು ಇಬ್ಬರು ಬೈಕ್ ನಲ್ಲಿ ಶನಿವಾರ ರಾತ್ರಿ
ಮುಂಡರಗಿ ತಾಲೂಕಿನ ಬರದೂರು ದಾಟಿ ಮೇವುಂಡಿ ಕಡೆಗೆ ಹೊರಟಾಗ ಎಡಬದಿಯ ರಸ್ತೆಯ ಮೇಲೆ ಮರಳು ತುಂಬಿಕೊಂಡು ನಿಂತಿದ್ದ ಟ್ರ್ಯಾಕರ್ ಟೇಲರ್ ಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಮುಂಡರಗಿಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಗದಗ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮುಂಜಾನೆ ಮೃತಪಟ್ಟಿದ್ದಾರೆ.

ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.