ಲಗಾಮಿಲ್ಲದೇ ಸಾಗುತ್ತಿರುವ ಅಕ್ರಮ ಮರಳುಗಾರಿಕೆ, ಚಿವುಟಿದಷ್ಟೂ ಚಿಗುರುತ್ತಿರುವ ದಂಧೆ; ನಲುಗಿದ ತುಂಗಭದ್ರೆಯ ಒಡಲು…..!

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಆ ಸ್ಥಳಗಳಲ್ಲಿ ಹಗಲು-ರಾತ್ರಿಯೆನ್ನದೆ ಜೆಸಿಬಿ ಯಂತ್ರಗಳ ಭೋರ್ಗರೆತದ ಸದ್ದು ನಿರಂತರ ಕೇಳುತ್ತಲೇ ಇದೆ. ಭೂಮಿಯ ಒಡಲನ್ನು ಎಷ್ಟೇ ಬಗೆದರೂ ಅವರಿಗೆ ಸಂತೃಪ್ತಿಯೆಂಬುದಿಲ್ಲ. ಆಡಳಿತದ ನಿಯಮಗಳು, ಎಚ್ಚರಿಕೆಗಳ ಹಂಗೂ ಇವರಿಗಿಲ್ಲ.

ಏನೇ ಆದರೂ, ತಮ್ಮ ಧನದಾಹ ತೀರಿಸಿಕೊಳ್ಳಬೇಕೆಂಬುದಷ್ಟೇ ಈ ದುರಾಸೆಯ ಮನುಷ್ಯರ ಅಂತಿಮ ಗುರಿ. ಇದರ ಫಲವಾಗಿ, ಸಮೃದ್ಧವಾಗಿದ್ದ ತುಂಗಭದ್ರೆ ದಿನದಿಂದ ದಿನಕ್ಕೆ ಸೊರಗುತ್ತಲೇ ಇದೆ ಮತ್ತು, ಆ ಆರ್ತನಾದ ಯಾರಿಗೂ ಕೇಳಿಸುತ್ತಿಲ್ಲ.

ಸರ್ಕಾರದ ಆದೇಶಗಳನ್ನೂ ಧಿಕ್ಕರಿಸಿ, ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿರುವುದರಿಂದ ತುಂಗಭದ್ರೆಯ ಚಿತ್ರಣವೇ ಬದಲಾಗುತ್ತಿದೆ. ಜೆಸಿಬಿ ಯಂತ್ರಗಳ ಮೂಲಕ ತುಂಗಭದ್ರೆಯನ್ನು ವಿರೂಪಗೊಳಿಸಿ, ಇಕ್ಕೆಲದ ಜಮೀನುಗಳಲ್ಲಿ ಅಕ್ರಮವಾಗಿ ಕೋಟ್ಯಾಂತರ ರೂಪಾಯಿ ಮೌಲ್ಯದ ಮರಳು ಸಂಗ್ರಹಿಸಲಾಗುತ್ತಿದೆ.

ಜಿಲ್ಲಾಡಳಿತ, ಗಣಿ, ಪೊಲೀಸ್, ಕಂದಾಯ ಇಲಾಖೆ ಎಷ್ಟೇ ಕ್ರಮಗಳನ್ನು ಕೈಗೊಂಡರೂ ಈ ಅಕ್ರಮ, ಅನಧಿಕೃತ ಮರಳುಗಾರಿಕೆಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ. ಈ ಎಲ್ಲಾ ದೃಶ್ಯಗಳು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ತುಂಗಭದ್ರಾ ನದಿ ಪಾತ್ರದಲ್ಲಿ ಕಂಡುಬರುತ್ತಿದೆ.

ಮುಂಡರಗಿ ತಾಲೂಕಿನ ಕಕ್ಕೂರ, ಸಿಂಗಟಾಲೂರು, ಕೊರ್ಲಹಳ್ಳಿ, ಶೀರನಹಳ್ಳಿ, ಗಂಗಾಪುರ ಗ್ರಾಮದ ಬಳಿ ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳು ದಂಧೆ ನಿರಂತರವಾಗಿ ಸಾಗಿದೆ. ಸಕ್ರಮದ ದಾರಿ ಒಂದೇ ಆಗಿದ್ದರೆ, ಅಕ್ರಮದ ದಾರಿ ನೂರಾರು.

ಮುಂಗಾರು ಆರಂಭವಾಗಿರುವುದರಿಂದ ಜೂನ್ ೫ರಿಂದ ನದಿಯಲ್ಲಿ ಮರಳು ತೆಗೆಯದಂತೆ ಗಣಿ ಇಲಾಖೆ ಸ್ಪಷ್ಟ ಕಾನೂನು ರಚಿಸಿದೆ. ಆದರೆ, ಗಣಿ ಇಲಾಖೆಯ ಯಾವ ನಿಯಮಗಳಿಗೂ ಇಲ್ಲಿ ಕವಡೆ ಕಾಸಿನ ಬೆಲೆಯಿಲ್ಲ. ಆಡಳಿತದ ಅಧಿಕಾರಿಗಳು ಈ ಅಕ್ರಮಗಳಿಗೆ ಕಡಿವಾಣ ಹಾಕಲು ಮುಂದಾದಷ್ಟೂ ದಂಧೆಕೋರರು ರಂಗೋಲಿಯ ಕೆಳಗೂ ನುಸುಳುವಷ್ಟು ಹೆಚ್ಚಿದ್ದಾರೆ.

ಗದಗ ಜಿಲ್ಲೆಯಲ್ಲಿ ನಡೆಯುವ ಅಕ್ರಮ ಮರಳುಗಾರಿಕೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜೂನ್ ೧೨ರಂದು ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಅಕ್ರಮ ಮರಳುಗಾರಿಕೆಗೆ ಲಗಾಮು ಹಾಕಿದ್ದರು. ನಂತರದ ದಿನಗಳಲ್ಲಿ ಮತ್ತೆ ಮೊದಲಿನಂತೆಯೇ ಯಾರ ಗಮನಕ್ಕೂ ಬಾರದಂತೆ ಮರಳು ಲೂಟಿ ಮುಂದುವರೆದಿದೆ.


ಹೀಗೆ ಅಕ್ರಮ ಮರಳುಗಾರಿಕೆಯಿಂದ ನದಿಯ ಚಿತ್ರಣ ಬದಲಾಗುತ್ತಿದ್ದು, ಸರ್ಕಾರಕ್ಕೆ ಸೇರಬೇಕಿದ್ದ ಕೋಟ್ಯಾಂತರ ರೂಪಾಯಿ ತೆರಿಗೆ ಹಣ ಯಾರದೋ ಖಾತೆ ಸೇರುತ್ತಿದೆ. ಕಾನೂನು ಆಟಕ್ಕಿದ್ದರೂ ಲೆಕ್ಕಕ್ಕಿಲ್ಲ ಎಂಬಂತಾಗಿದೆ.

ನದಿ ಪಾತ್ರದಲ್ಲಿ ಹಾಗೂ ಅಕ್ಕಪಕ್ಕದ ಖಾಸಗಿ ಜಮೀನುಗಳಲ್ಲಿ ಸಂಗ್ರಹವಾಗಿರುವ ಅಪಾರ ಪ್ರಮಾಣದ ಅಕ್ರಮ ಮರಳು ಸಂಗ್ರಹವನ್ನು ವಶಕ್ಕೆ ಪಡೆದು, ದಂಧೆಕೋರರ ಅಟಾಟೋಪಗಳಿಗೆ ಬ್ರೇಕ್ ಹಾಕಬೇಕಿದೆ ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಕಳೆದ ಬೇಸಿಗೆಯಲ್ಲಿ ಅಕ್ರಮ ಮರಳುಗಾರಿಕೆಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ, ಈ ಅಕ್ರಮವನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದೆವು. ಮರಳು ಸಾಗಾಟಕ್ಕೆ ಬಳಸಿದ ಹಲವು ವಾಹನಗಳನ್ನು ವಶಕ್ಕೆ ಪಡೆದು ಗರಿಷ್ಠ ದಂಡ ವಿಧಿಸಿದ್ದರಿಂದ ನಿಯಂತ್ರಣಕ್ಕೆ ಬಂದಿತ್ತು. ಇದೀಗ ಮತ್ತೆ ಖಾಸಗಿ ಜಾಗಗಳಲ್ಲಿ ಅಕ್ರಮ ನಡೆಯುತ್ತಿರುವ ಬಗ್ಗೆ ದೂರುಗಳು ಬರತೊಡಗಿವೆ. ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಗಣಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ರಾತ್ರಿ ಸಮಯದಲ್ಲೇ ಈ ಚಟುವಟಿಕೆ ಹೆಚ್ಚಾಗಿ ನಡೆಯುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುತ್ತೇವೆ.

-ವೈಶಾಲಿ ಎಂ ಎಲ್. ಜಿಲ್ಲಾಧಿಕಾರಿಗಳು, ಗದಗ


ಚುನಾವಣೆಯ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಕಾರ್ಯಾಚರಣೆ ನಡೆಸಿ, ಅಕ್ರಮ ನಡೆಯುತ್ತಿರುವ ಸ್ಥಳಕ್ಕೆ ದಾಳಿ ಮಾಡಿ ಹಲವು ವಾಹನಗಳನ್ನು ವಶಕ್ಕೆ ಪಡೆದಿದ್ದೆವು. ಆ ಸಮಯದಲ್ಲಿ ನಿಯಂತ್ರಣಕ್ಕೆ ಬಂದಿದ್ದ ಈ ಅಕ್ರಮ ದಂಧೆ ಇದೀಗ ಮತ್ತೆ ಪ್ರಾರಂಭವಾದ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ತಿಳಿದುಬಂದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ಇಲಾಖೆಯ ಅಧಿಕಾರಿ/ಸಿಬ್ಬಂದಿಗಳೂ ಶಾಮೀಲಾಗಿದ್ದಾರೆ ಎಂಬ ಆರೋಪಗಳಿವೆ. ಅದು ಸತ್ಯವೇ ಆಗಿದ್ದರೆ, ಅಂಥವರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ.

-ಬಿ ಎಸ್ ನೇಮಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು.

    Spread the love

    LEAVE A REPLY

    Please enter your comment!
    Please enter your name here