ವಾಹನ ಕಳುವಾದರೆ ಆನ್‌ಲೈನ್‌ನಲ್ಲೇ ಕಂಪ್ಲೇಂಟ್ ಕೊಡಿ!!

0
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

Advertisement

ರಾಜ್ಯ ಪೊಲೀಸ್ ಇಲಾಖೆ ನಾಗರಿಕ ಸ್ನೇಹಿ ಸೇವೆಗಳನ್ನು ಒದಗಿಸುತ್ತಿದೆ. ಇತ್ತೀಚೆಗೆ ಮೋಟಾರು ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಆನ್‌ಲೈನ್ ಮೂಲಕ ಪ್ರಥಮ ವರ್ತಮಾನ ವರದಿ ಇ-ಎಫ್‌ಐಆರ್ ನೋಂದಣಿ ಮಾಡಲು ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ ಜಾಲತಾಣದ ಮೂಲಕ ಪಡೆಯಬಹುದಾಗಿದೆ. ಇದರಿಂದ ದೂರುದಾರರು ತಾವು ಕುಳಿತಲ್ಲೇ ಇಂಟರ್‌ನೆಟ್ ಸಹಾಯದಿಂದ ಕಂಪ್ಯೂಟರ್ ಇಲ್ಲವೇ ಮೊಬೈಲ್ ಮೂಲಕ ಕೆಲವೇ ಕ್ಷಣಗಳಲ್ಲಿ ಇ-ಎಫ್‌ಐಆರ್ ದಾಖಲಿಸಬಹುದಾಗಿದೆ.

ಇ-ಎಫ್‌ಐಆರ್ ದಾಖಲಿಸುವುದು ಹೇಗೆ ?

ಲಾಗಿನ್ ಆಗಬೇಕು, ನಂತರ ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಪೇಜ್‌ನಲ್ಲಿ ಸಾರ್ವಜನಿಕ ಸೇವಾ ಕೇಂದ್ರ ಪೋರ್ಟಲ್‌ನ ಮೇಲೆ ಕ್ಲಿಕ್ ಮಾಡಿದ ನಂತರ ನಾಗರಿಕ ಕೇಂದ್ರಿತ ಪುಟ ತೆರೆಯುತ್ತದೆ. ಇಲ್ಲಿ ಈಗಾಗಲೇ ನೋಂದಾಯಿತ ಬಳಕೆದಾರರಿದ್ದಲ್ಲಿ ನೇರವಾಗಿ ಲಾಗ್ ಇನ್ ಆಗಬಹುದು. ಇಲ್ಲವಾದರೆ ತಮ್ಮ ನೋಂದಾಯಿತ ಆಧಾರ ಹಾಗೂ ಮೊಬೈಲ್ ನಂಬರ್ ಮೂಲಕ ನೋಂದಣಿ ಮಾಡಿಕೊಂಡು ಅಕೌಂಟ್ ಕ್ರಿಯೇಟ್ ಆಯ್ಕೆ ಮಾಡಿಕೊಳ್ಳಬೇಕು.

ತದನಂತರ ಪೋರ್ಟಲ್‌ನಲ್ಲಿ ಕ್ರಿಯೇಟ್ ಮಾಡಿಕೊಂಡಂತಹ ಯೂಸರ್ ನೇಮ್ ಮತ್ತು ಪಾಸ್‌ವರ್ಡ್ ಬಳಸಿಕೊಂಡು ಸೈನ್-ಇನ್ ಆಗಿ ಕಳ್ಳತನವಾದಂತಹ ವಾಹನದ ಬಗ್ಗೆ ಇ-ಎಫ್‌ಐಆರ್ ನೋಂದಾಯಿಸುವುದಕ್ಕೆ ವೆಹಿಕಲ್ ಥೆಫ್ಟ್ ಆಪ್ಸ್ನ್ ಕ್ಲಿಕ್ ಮಾಡಿ, ಅದರಲ್ಲಿ ಬರುವ ಹೆಸರು ವಿಳಾಸ ಮತ್ತು ಕಳ್ಳತನವಾದ ವಾಹನದ ಸಂಪೂರ್ಣ ಮಾಹಿತಿಯನ್ನು ದಾಖಲಿಸಬೇಕು.


ಈ ಸಂದರ್ಭದಲ್ಲಿ ಆಧಾರ ದತ್ತಾಂಶದಿಂದ ಬರುವಂತಹ ಮಾಹಿತಿಗಳನ್ನು ತಿದ್ದುಪಡಿ ಮಾಡಲಿಕ್ಕೆ ಅವಕಾಶವಿರುವದಿಲ್ಲ. ಜೊತೆಗೆ ಕಳವಾದ ಸ್ಥಳವನ್ನು ಜಿಪಿಎಸ್ ಮೂಲಕ ಮತ್ತು ಸಮಯ ಹಾಗೂ ಸಂಬಂಧಿಸಿದ ಪೊಲೀಸ್ ಠಾಣೆಯನ್ನು ನಮೂದಿಸಬೇಕು.

ವಾಹನದ ನೋಂದಣಿ ನಂಬರ್ ದಾಖಲು ಮಾಡಿದ ನಂತರ ಇನ್ನಿತರೆ ಮಾಹಿತಿಯು ತಾನಾಗಿಯೇ ಭರ್ತಿ ಮಾಡಿಕೊಳ್ಳುತ್ತದೆ. ದೂರು ಪ್ರತಿ, ವಾಹನದ ನೋಂದಣಿ ಪತ್ರ, ಇನ್ಶುರೆನ್ಸ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ನೋಂದಾಯಿತ ಆಧಾರ್ ಹಾಗೂ ಮೊಬೈಲ್ ಸಂಖ್ಯೆಯ ಮೂಲಕ ಇ-ಸಹಿಯನ್ನು ದೃಢೀಕರಿಸಿದ ನಂತರ ಭರ್ತಿ ಮಾಡಿದ ಎಲ್ಲ ಮಾಹಿತಿಯನ್ನು ಸಬ್‌ಮಿಟ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ ದೂರನ್ನು ದಾಖಲಿಸಬೇಕು.

ಇ-ಎಫ್‌ಐಆರ್ ಪಡೆಯುವುದು ಹೇಗೆ ?

ದೂರು ದಾಖಲಾದ ನಂತರ ಸೂಕ್ತ ಕ್ರಮಕ್ಕಾಗಿ ಸಂಬಂಧಿಸಿದ ಠಾಣೆಯ ಠಾಣಾಧಿಕಾರಿ ಹಾಗೂ ಫಿರ್ಯಾದಿದಾರರಿಗೆ ನೋಂದಾಯಿಸಿದ ಎಸ್‌ಎಂಎಸ್ ಸಂದೇಶ ರವಾನಿಸಲಾಗುತ್ತದೆ. ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಸಬ್‌ಮಿಟ್ ಮಾಡಿದ ನಂತರ ಫಿರ್ಯಾದುದಾರರಿಗೆ ೨ ಗಂಟೆಯೊಳಗೆ ಆಧಾರ ಇ-ಸಹಿ ಮಾಡುವಂತೆ ಎಸ್‌ಎಂಎಸ್ ರವಾನೆಯಾಗುತ್ತದೆ. ಫಿರ್ಯಾದುದಾರರು ಸಿಸಿಬಿ ಪೋರ್ಟ್ ನಲ್ಲಿ ಲಾಗ್-ಇನ್ ಆಗಿ ಆಧಾರ ಇ-ಸಹಿ ಮಾಡಿದ ನಂತರ ಮತ್ತೆ ಸಂಬಂಧಿಸಿದ ಠಾಣಾಧಿಕಾರಿಗೆ ಇ-ಸಹಿಯನ್ನು ಮಾಡುವಂತೆ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ರವಾನೆಯಾಗುತ್ತದೆ.

ಠಾಣಾಧಿಕಾರಿ ಇ-ಸಹಿ ಮಾಡಿದ ನಂತರ ಪ್ರಥಮ ವರ್ತಮಾನ ವರದಿಯಲ್ಲಿ ಫಿರ್ಯಾದುದಾರರು ಮತ್ತು ಠಾಣಾಧಿಕಾರಿ ಇಬ್ಬರು ಮಾನ್ಯ ಮಾಡಿದ ಸಹಿಯೊಂದಿಗೆ ಪ್ರಥಮ ವರ್ತಮಾನ ವರದಿ ಅಥವಾ ಇ-ಎಫ್‌ಐಆರ್ ಜನರೇಟ್ ಆಗಲಿದೆ. ನಂತರ ಇದನ್ನು ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಅರಿವು

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರಿಗೆ ಉಪಯುಕ್ತವಾಗುವಂತಹ ಕಳ್ಳತನವಾದಂತಹ ವಾಹನಗಳ ಬಗ್ಗೆ ದೂರು ನೀಡುವುದಕ್ಕೆ ಪೊಲೀಸ್ ಠಾಣೆಗಳಿಗೆ ಅಲೆದಾಡದೇ ಕುಳಿತಲ್ಲಿಯೇ ಇಲಾಖೆಯ ಅಧಿಕೃತ ವೆಬ್‌ಸೈಟ್ ಮೂಲಕ ಇ-ಎಫ್‌ಐಆರ್ ಪಡೆಯುವ ಬಗ್ಗೆ ಅರಿವು ಮೂಡಿಸುತ್ತಿದ್ದು, ಈ ಬಗ್ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆಗಳು ಸಹ ವ್ಯಕ್ತವಾಗುತ್ತಿವೆ.

ಸಾರ್ವಜನಿಕರಿಗೆ ತ್ವರಿತಗತಿಯಲ್ಲಿ ಸಮಸ್ಯೆಗಳಿಗೆ ಪರಿಹಾರವನ್ನು ಕಲ್ಪಿಸುವುದಕ್ಕೆ ಇಲಾಖೆ ವತಿಯಿಂದ ಈಗಾಗಲೇ ಹಲವಾರು ಸೇವೆಗಳನ್ನು ಒದಗಿಸಲಾಗುತ್ತಿದೆ. ಇದೀಗ ಕಳ್ಳತನವಾದಂತಹ ವಾಹನಗಳ ದೂರು ದಾಖಲಿಸಲು ಪೊಲೀಸ್ ಠಾಣೆಗಳ ಅಲೆದಾಟವನ್ನು ತಪ್ಪಿಸುವುದಕ್ಕಾಗಿ ಇಂಟರ್‌ನೆಟ್ ಸಹಾಯದಿಂದ ಕುಳಿತಲ್ಲಿಯೇ ಇ-ಎಫ್‌ಐಆರ್ ಮೂಲಕ ದೂರು ದಾಖಲಿಸಿ ಪ್ರತಿಯನ್ನು ಪಡೆಯಬಹುದಾಗಿದೆ. ಇದರಿಂದ ತಕ್ಷಣವೇ ಸಿಸ್ಟಮ್‌ನಲ್ಲಿ ಚೆಕ್ ಆಗಲು ಸಹಕಾರಿಯಾಗಲಿದೆ. ಕಳವಾದ ಮೊಬೈಲ್ ಹಾಗೂ ಡುಪ್ಲಿಕೇಟ್ ಸಿಮ್‌ಗಳಿಗೂ ಸಹ ಇಲಾಖೆಯ ವೆಬ್‌ಸೈಟ್ ಮೂಲಕ ಇ-ಲಾಸ್ಟ್ ನಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ಪ್ರತಿಯನ್ನು ಪಡೆದುಕೊಳ್ಳಬಹುದಾಗಿದೆ. ಇದರಿಂದ ಸಾರ್ವಜನಿಕರ ಕೆಲಸ ಬೇಗ ಆಗುವುದರ ಜೊತೆಗೆ ಸಮಯವೂ ಸಹ ಉಳಿಯಲಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು.

-ಶಿವಪ್ರಕಾಶ ದೇವರಾಜು, ಎಸ್ಪಿ. ಗದಗ

Spread the love

LEAVE A REPLY

Please enter your comment!
Please enter your name here