ವಿಜಯಸಾಕ್ಷಿ ಸುದ್ದಿ, ಗದಗ:
ರಾಜ್ಯಾದ್ಯಂತ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ಮಾರ್ಗಸೂಚಿಗಳನ್ನು ಜಿಲ್ಲೆಯ ಕಂದಾಯ, ಪೊಲೀಸ್ ಹಾಗೂ ಇತರೆ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವುದರ ಮೂಲಕ ರಾತ್ರಿ ಹಾಗೂ ವಾರಾಂತ್ಯದ ಕರ್ಪ್ಯೂ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಸೂಚಿಸಿದರು.
ಜಿಲ್ಲಾಡಳಿತ ಭವನದ ವಿಡಿಯೋ ಸಂವಾದ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಕೋವಿಡ್ ಸೋಂಕು ನಿಯಂತ್ರಣ ಹಾಗೂ ಕಠಿಣ ಮಾರ್ಗಸೂಚಿಗಳ ಅನುಷ್ಠಾನ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸೋಂಕು ನಿಯಂತ್ರಣದಲ್ಲಿ ವಿವಿಧ ಇಲಾಖೆಗಳು ಪ್ರಮುಖವಾಗಿ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮುಂಚೂಣಿಯಲ್ಲಿ ನಿಂತು ಪರಸ್ಪರ ಸಮನ್ವಯದೊಂದಿಗೆ ಕರ್ತವ್ಯ ನಿರ್ವಹಿಸಬೇಕು. ತಾಲೂಕಾಡಳಿತ ಹಾಗೂ ಸ್ಥಳೀಯ ಆಡಳಿತಗಳು ಸೋಂಕಿನ ಹತೋಟಿಗೆ ಮಾರ್ಗಸೂಚಿಗಳ ಪಾಲನೆ ಸರಿಯಾಗಿ ಅನುಷ್ಠಾನಗೊಳಿಸಬೇಕೆಂದು ಸೂಚಿಸಿದರು.
ಜ.19ರವರೆಗೆ ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ರಾತ್ರಿ ಕರ್ಪ್ಯೂ ಹಾಗೂ ಶುಕ್ರವಾರ ರಾತ್ರಿ 10 ರಿಂದ ಸೋಮವಾರ ಬೆಳಗಿನ 5ರವರೆಗೆ ವಾರಾಂತ್ಯದ ಕರ್ಪ್ಯೂ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಸರ್ಕಾರ ಜಾರಿಗೊಳಿಸಿರುವ ಪರಿಷ್ಕೃತ ಮಾರ್ಗಸೂಚಿಗಳು ಪಾಲನೆಯಾಗುವಂತೆ ನಿಗಾವಹಿಸಬೇಕು. ಮಾರ್ಗಸೂಚಿ ಉಲ್ಲಂಘಿಸುವವರ ಮೇಲೆ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಜಿಲ್ಲೆಯ ಎಲ್ಲ ಸಾರ್ವಜನಿಕ ಉದ್ಯಾನಗಳು ಸ್ತಬ್ಧವಾಗಿರಲಿವೆ. ಮಾಹಿತಿ ತಂತ್ರಜ್ಞಾನ ಉದ್ಯಮ ಒಳಗೊಂಡಂತೆ ಎಲ್ಲ ಉದ್ಯಮ ಕ್ಷೇತ್ರಗಳಿಗೆ ಕರ್ಫ್ಯೂನಿಂದ ವಿನಾಯಿತಿ ನೀಡಿದೆ. ನೌಕರರು ಆಯಾ ಸಂಘ/ಸಂಸ್ಥೆಗಳು ನೀಡುವ ಅಧಿಕೃತ ಗುರುತಿನ ಚೀಟಿ ಹಾಜರುಪಡಿಸಿ ಸಂಚರಿಸಬಹುದು. ಇನ್ನು ತುರ್ತು ಚಿಕಿತ್ಸೆಗಾಗಿ ಅಗತ್ಯವಿರುವ ರೋಗಿಗಳು, ಅವರ ಪರಿಚಾರಕರು/ವ್ಯಕ್ತಿಗಳಿಗೆ ಮತ್ತು ಲಸಿಕೆ ಹಾಕಿಸಿಕೊಳ್ಳಲು ಉದ್ದೇಶಿಸಿರುವ ವ್ಯಕ್ತಿಗಳಿಗೆ ಕನಿಷ್ಠ ರುಜುವಾತನ್ನು ಹಾಜರುಪಡಿಸಿ ಓಡಾಡಬಹುದು.
ವೀಕೆಂಡ್ ಕರ್ಪ್ಯೂ ವೇಳೆ ಆಹಾರ, ದಿನಸಿ, ಹಣ್ಣು ಮತ್ತು ತರಕಾರಿಗಳು, ಡೈರಿ ಮತ್ತು ಹಾಲಿನ ಬೂತ್‌ಗಳು, ಮಾಂಸ ಮತ್ತು ಮೀನು, ಪಶು ಆಹಾರದ ಅಂಗಡಿಗಳು ಕಾರ್ಯ ನಿರ್ವಹಿಸಲಿವೆ. ಬೀದಿ ಬದಿ ವ್ಯಾಪಾರಿಗಳಿಗೆ ಅನುಮತಿ ಇರಲಿದೆ. ಸಾರ್ವಜನಿಕ ವಿತರಣೆಯ ನ್ಯಾಯಬೆಲೆ ಅಂಗಡಿಗಳು ತೆರೆದಿರಲಿವೆ. ಜನರ ಅನಗತ್ಯ ಓಡಾಡಕ್ಕೆ ಕಡಿವಾಣ ಹಾಕುವುದಕ್ಕಾಗಿ (ಹೋಮ್ ಡಿಲೆವರಿ) ಪ್ರೋತ್ಸಾಹಿಸಬೇಕು.
ರೆಸ್ಟೋರೆಂಟ್, ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಅವಕಾಶ ಇರಲಿದೆ.
ವಾರಾಂತ್ಯದ ಕರ್ಪ್ಯೂ ವೇಳೆಯಲ್ಲಿ ಬರುವ ಸಂತೆಗಳನ್ನು ಸಾಧ್ಯವಾದಷ್ಟು ಮುಂದೂಡಬೇಕು. ಇಲ್ಲವಾದಲ್ಲಿ ವಿಶಾಲವಾದ ಮೈದಾನಕ್ಕೆ ವರ್ಗಾಯಿಸಿ ಕೋವಿಡ್ ಮಾರ್ಗಸೂಚಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕು. ಅಗತ್ಯ ಸೇವೆಗಳ ಅಂಗಡಿ ಮುಂಗ್ಗಟ್ಟುಗಳಲ್ಲಿ ಕೋವಿಡ್ ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕು. ಪ್ರವೇಶ ದ್ವಾರದಲ್ಲಿ ಕಡ್ಡಾಯವಾಗಿ ಮಾಸ್ಕ ಧರಿಸಿ ಆಗಮಿಸುವಂತೆ ಅಳವಡಿಸಲು ತಿಳಿಸಿ ಸಾಮಾಜಿಕ ಅಂತರ ಪಾಲನೆಯಾಗುವಂತೆ ನೋಡಿಕೊಳ್ಳಬೇಕೆಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿವಪ್ರಕಾಶ ಅವರು ಮಾತನಾಡಿ, ಗದಗ ನಗರದ ಸುತ್ತಲಿನ ಪ್ರಮುಖ ಪ್ರವೇಶ ರಸ್ತೆಗಳಲ್ಲಿ ಚೆಕ್‌ಪೋಸ್ಟ್ ತೆರೆಯುವ ಮೂಲಕ ಅನಗತ್ಯ ಸಾರ್ವಜನಿಕರ ಸಂಚಾರವನ್ನು ತಡೆಯಬೇಕು. ಸಂಚಾರಿ ದಳಗಳ ವಾಹನಗಳ ಮೂಲಕ ಅಲ್ಲಲ್ಲಿ ಅನಗತ್ಯ ಜನ ಸಂಚಾರವನ್ನು ನಿಯಂತ್ರಿಸಬೇಕು. ಬೀಟ್ ಪೊಲೀಸರು ಪ್ರತಿದಿನ ಜನಜಂಗುಳಿ ಸೇರುವ ಪ್ರದೇಶಗಳ ಮಾಹಿತಿಯನ್ನು ಮೇಲಾಧಿಕಾರಿಗಳಿಗೆ ತಿಳಿಸುವ ಮೂಲಕ ನಿಯಂತ್ರಿಸಲು ಸೂಕ್ತ ಕ್ರಮ ವಹಿಸಬೇಕು. ತಾಲೂಕುಗಳಲ್ಲಿ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಒಟ್ಟಿಗೆ ಕಾರ್ಯಾಚರಣೆ ಮಾಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು, ವಿವಿಧ ಇಲಾಖೆಯ ಮುಖ್ಯಸ್ಥರು ಆಯಾ ತಾಲೂಕಿನ ತಹಶೀಲ್ದಾರರು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಎಂದಿನಂತೆ ಬಸ್ ಸಂಚಾರ
ಜಿಲ್ಲೆಯಲ್ಲಿ ಶನಿವಾರ ಮತ್ತು ಭಾನುವಾರ ವೀಕೆಂಡ್ ಕರ್ಪ್ಯೂ ಜಾರಿಯಲ್ಲಿದ್ದರೂ ಎಂದಿನಂತೆ ಬಸ್ ಸಂಚಾರ ಇರಲಿದೆ. ಪ್ರಯಾಣಿಕರ ಸಂಖ್ಯೆ ವಿರಳವಿದ್ದಲ್ಲಿ, ಪ್ರಯಾಣಿಕರೇ ಇರದಿದ್ದಲ್ಲಿ ಆ ಮಾರ್ಗದಲ್ಲಿ ಸಂಚಾರ ಇರುವುದಿಲ್ಲ. ಒಟ್ಟು ಜಿಲ್ಲೆಯಲ್ಲಿ 483 ಬಸ್‌ಗಳಿದ್ದು ಪ್ರಯಾಣಿಕರ ಸಂಖ್ಯೆಗನುಗುಣವಾಗಿ ಬಸ್ ಸಂಚಾರ ಇರಲಿದೆ. ಅಲ್ಲದೇ, ಗ್ರಾಮೀಣ ಪ್ರದೇಶಗಳಲ್ಲಿ ಎಂದಿನಂತೆ ಬಸ್ ಸಂಚರಿಸಲಿವೆ ಎಂದು ಕೆಎಸ್‌ಆರ್‌ಟಿಸಿ ಡಿಸಿ ಎಫ್.ಸಿ.ಹಿರೇಮಠ ಅವರು ವಿಜಯಸಾಕ್ಷಿಗೆ ತಿಳಿಸಿದರು.