ಇಬ್ಬರು ಮಕ್ಕಳು ಮೇಲೆ ದಾಳಿ..ಆತಂಕದಲ್ಲಿ. ಅಂತೂರು-ಬೆಂತೂರು ಗ್ರಾಮಸ್ಥರು….
ವಿಜಯಸಾಕ್ಷಿ ಸುದ್ದಿ, ಗದಗ
ಏಕಾಏಕಿ ಗ್ರಾಮಕ್ಕೆ ನುಗ್ಗಿದ ತೋಳವೊಂದು ಎಂಟು ವರ್ಷದ ಬಾಲಕಿ, ಆಕಳು ಕರು ಹಾಗೂ ನಾಯಿ ಮೇಲೆ ದಾಳಿ ಮಾಡಿ ಪರಾರಿಯಾದ ಘಟನೆ ತಾಲೂಕಿನ ಕುರ್ತಕೋಟಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.

ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನದ ಮುಂದೆ ಹಾಯ್ದು ಹೊರಟಿದ್ದ ತೋಳ ನೋಡಿದ ಗ್ರಾಮಸ್ಥರು ತೀವ್ರ ಆತಂಕಗೊಂಡರು.
ಅಷ್ಟರಲ್ಲಾಗಲೇ ತೋಳವು ರಸ್ತೆ ಬದಿ ಕಟ್ಟಿದ್ದ ಆಕಳು ಕರು, ಒಂದು ನಾಯಿಯ ಮೇಲೆ ದಾಳಿ ಮಾಡಿ ಕಚ್ಚಿದೆ. ನಂತರ ಮನೆ ಮುಂದೆ ಆಟವಾಡುತ್ತಿದ್ದ ಎಂಟು ವರ್ಷದ ಬಾಲಕಿಯ ಮೇಲೂ ದಾಳಿ ಮಾಡಿ ಕಚ್ಚಿದೆ. ತೋಳದ ಹುಚ್ಚಾಟ ನೋಡಿದ ಗ್ರಾಮಸ್ಥರು ಬೆನ್ನಟ್ಟಿದರೂ ಅವರ ಕೈಗೆ ಸಿಗದೇ ಪರಾರಿಯಾಗಿದೆ. ಸದ್ಯಕ್ಕೆ ಕುರ್ತಕೋಟಿ ಗ್ರಾಮದಿಂದ ನೀಲಗುಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ದಾರಿಯ ಕಡೆ ಹೋಗಿ ಹಳ್ಳದಲ್ಲಿ ಕಣ್ಮರೆಯಾಗಿದ್ದು, ಗ್ರಾಮಸ್ಥರ ಸಹಾಯದಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದರು ಪ್ರಯೋಜನವಾಗಿಲ್ಲ.

ತೋಳ ದಾಳಿಯಿಂದಾಗಿ ಬಾಲಕಿಯ ಬೆನ್ನಿನ ಮೇಲೆ ಗಾಯವಾಗಿದ್ದು, ಚಿಕಿತ್ಸೆಗಾಗಿ ಜಿಮ್ಸ್ ಗೆ ದಾಖಲು ಮಾಡಲಾಗಿದೆ.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಅಪ್ಪಣ್ಣ ಇನಾಮತಿ, ಅಶೋಕ್ ಶಿರಹಟ್ಟಿ, ಅಶೋಕ್ ಬಡಿಗೇರ್, ಪ್ರಬಣ್ಣ ಗಾಣಿಗೇರ, ಪ್ರಬಣ್ಣ ಬೆಂತೂರ, ಬಸವರಾಜ್ ಶಿಸುವಿನಹಳ್ಳಿ ಹಾಗೂ ಶೇಖಣ್ಣ ಆಲೂರ ಸೇರಿದಂತೆ ಗ್ರಾಮಸ್ಥರು ಇದ್ದರು.
ನೀಲಗುಂದ ಗ್ರಾಮದಲ್ಲಿ ತೋಳ ಪತ್ತೆ
ಕುರ್ತಕೋಟಿ ಗ್ರಾಮದಲ್ಲಿ ದಾಳಿ ಮಾಡಿದ್ದ ತೋಳ ಪಕ್ಕದ ನೀಲಗುಂದ ಗ್ರಾಮದಲ್ಲಿ ಜನರು ನೋಡಿದ್ದಾರೆ. ಕುರ್ತಕೋಟಿ ಗ್ರಾಮದಿಂದ ನೀಲಗುಂದ ಗ್ರಾಮಕ್ಕೆ ಹೊರಟಿದ್ದ ಬೈಕ್ ಸವಾರರ ಮುಂದೆ ಓಡೋಡಿ ಹೊರಟಿದ್ದ ತೋಳದ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ನಂತರ ಹೋಲದಿಂದ ಮನೆ ಕಡೆ ಹೊರಟಿದ್ದ ನಿತಿನ್ ಎಂಬ ಬಾಲಕನ ಮೇಲೂ ದಾಳಿ ಮಾಡಿ ಕಚ್ಚಿ ಬೆಂತೂರು ಗ್ರಾಮದ ಕಡೆ ತೆರಳಿದೆ ಎಂದು ಬಿಜೆಪಿ ಯುವ ಮುಖಂಡ ರವಿ ವಗ್ಗನವರು ಮಾಹಿತಿ ನೀಡಿದ್ದು, ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು, ತೋಳ ಹಿಡಿದು ಜನರ ಆತಂಕ ನಿವಾರಣೆಗೆ ಮುಂದಾಗಬೇಕಂದು ಒತ್ತಾಯಿಸಿದ್ದಾರೆ.