ವಿಜಯಸಾಕ್ಷಿ ಸುದ್ದಿ, ಗದಗ:
‘ಉತ್ತರ ಕರ್ನಾಟಕಕ್ಕೆ ಆದ್ಯತೆ ಕೊಡವ ಹಿನ್ನೆಲೆಯಲ್ಲಿ ಈ ಭಾಗದ ಜ್ವಲಂತ ಸಮಸ್ಯೆಗಳ ಕುರಿತು ಸಮಗ್ರ ಚರ್ಚೆಯಾಗಲಿ ಎಂಬ ಉದ್ದೇಶದಿಂದ ಅಧಿವೇಶನ ನಡೆಯುತ್ತಿದೆ. ಆದರೆ, ಕಾಂಗ್ರೆಸ್ ಕೇವಲ ರಾಜಕೀಯ ಲಾಭ ಪಡೆಯಲು ಮುಂದಾಗುತ್ತಿದೆ. ಇವರು ಯಾಕೆ ಪ್ರತಿಭಟನಾ ರ‌್ಯಾಲಿ ಮಾಡುವ ಮೂಲಕ ನಾಟಕ ಮಾಡುತ್ತಿದ್ದಾರೆ ಎಂಬುವುದು ತಿಳಿಯುತ್ತಿಲ್ಲ’ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಕಿಡಿಕಾರಿದರು.
ಗುರುವಾರ ನಗರದ ತಮ್ಮ ಸ್ವನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ‘ನಮ್ಮ ಸರ್ಕಾರ ಅಧಿವೇಶನದಲ್ಲಿ ಚರ್ಚೆಗೆ ಸಿದ್ಧವಿದೆ.
ನಿಮ್ಮ ಪ್ರಶ್ನೆಗೆ ಉತ್ತರ ಕೊಡಲು ನಮ್ಮ ಮಂತ್ರಿಗಳು ಸಿದ್ಧರಿದ್ದಾರೆ. ಆದರೆ, ಅಧಿಕಾರ ಕಳೆದುಕೊಂಡ ಹತಾಶೆಯಿಂದ ಕಾಂಗ್ರೆಸ್ ಈ ರೀತಿ ಕೆಲಸ ಮಾಡುತ್ತಿದೆ.
ತಾಕತ್ತಿದ್ದರೆ ಕಾಂಗ್ರೆಸ್ ನವರು ಚರ್ಚೆಯಲ್ಲಿ ಪಾಲ್ಗೊಳ್ಳಲಿ ಎಂದು ಸವಾಲ್ ಹಾಕಿದ ಅವರು, ಸ್ವಾರ್ಥವಿಟ್ಟುಕೊಂಡು ರ‌್ಯಾಲಿ ಮಾಡಿ ಜನರ ದಿಕ್ಕು ತಪ್ಪಿಸುವುದು, ಕಲಾಪದ ಸಮಯ ವ್ಯರ್ಥ ಮಾಡುವುದು ಸರಿಯಲ್ಲ’ ಎಂದರು.
‘ಕಾಂಗ್ರೆಸ್ ನಾಯಕರು ಪರ್ಸಂಟೇಜ್ ಪಿತಾಮಹರು.
ನಾವು ಸಿದ್ದರಾಮಯ್ಯನವರ ಸರ್ಕಾರ 10 ಪರ್ಸೆಂಟ್ ಸರ್ಕಾರ ಅಂತಾ ಆರೋಪ ಮಾಡಿದ್ವಿ. ಈಗ ಅವರು ಆರೋಪಿಸುತ್ತಿದ್ದಾರೆ. ಆದರೆ, ಇದು ಸತ್ಯಕ್ಕೆ ದೂರವಾಗಿದೆ.
ರಾಜಕಾರಣಕ್ಕಾಗಿ ಕಾಂಗ್ರೆಸ್ ನಾಯಕರು ಈ ರೀತಿ ದೂರುತ್ತಿದ್ದಾರೆ. ಕಾಂಗ್ರೆಸ್ ನವರು ಕುಂಬಳಕಾಯಿ ಕಳ್ಳ ಯಾರು ಅಂದರೆ ಅವರು ತಮ್ಮ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದು, ಸತ್ಯ ಹರಿಶ್ಚಂದ್ರರು ಅಂತಾ ತೋರಿಸಿಕೊಳ್ಳಲು ಮುಂದಾಗಿದ್ದಾರೆ. ದಾಖಲೆಗಳಿದ್ದರೆ ರಾಜ್ಯದ ಜನರಿಗೆ ತೋರಿಸಲಿ’ ಎಂದು 40 ಪರ್ಸಂಟೇಜ್ ಸರ್ಕಾರ ಎಂಬ ಕಾಂಗ್ರೆಸ್ ನವರ ಆರೋಪಕ್ಕೆ ತಿರುಗೇಟು ನೀಡಿದರು.
ಶಾಲೆಯಲ್ಲಿ ಮೊಟ್ಟೆ ಕೊಡುವ ವಿಚಾರಕ್ಕೆ ‘ಯಾರಿಗೆ ಮೊಟ್ಟೆ ಬೇಕೋ ಅವರು ಮೊಟ್ಟೆ ತಿನ್ನುತ್ತಾರೆ’ ಎಂದು ಒಂದು ವಾಕ್ಯದಲ್ಲಿ ಉತ್ತರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಅನಿಲ ಮೆಣಸಿನಕಾಯಿ ಇದ್ದರು.
ಮತಾಂತರ ಮಸೂದೆ ಬಗ್ಗೆ ನನಗೆ ಗೊತ್ತಿಲ್ಲ. ಹೀಗಾಗಿ ನೋಡಿ ಮಾತನಾಡುತ್ತೇನೆ. ನಾನು ಬಿಲ್ ನೋಡಿಲ್ಲ. ಆದರೆ, ಮತಾಂತರ ಕಾಯ್ದೆ ಕುರಿತು ಚರ್ಚೆಯಾಗುತ್ತಿದೆ.
ಬಿ. ಶ್ರೀರಾಮುಲು, ಸಾರಿಗೆ ಸಚಿವ