ಅರಣ್ಯ ಇಲಾಖೆಯ ನಿರಂತರ ಕಾರ್ಯಾಚರಣೆ; ಸಿಗದ ಚಿರತೆ, ಭಯದಲ್ಲಿ ಜನತೆ..!

0
Spread the love

ವಿಜಯಸಾಕ್ಷಿ ಸುದ್ದಿ, ರೋಣ

Advertisement

ಇಲ್ಲಿಗೆ ಸಮೀಪದ ನಾಗೇಂದ್ರಗಡ ಗುಡ್ಡದಲ್ಲಿ ಹಲವಾರು ತಿಂಗಳುಗಳಿಂದ ಕಾಣಿಸಿಕೊಳ್ಳುತ್ತಿರುವ ಚಿರತೆ ಜನರನ್ನು ಭಯಭೀತರನ್ನಾಗಿ ಮಾಡಿದ್ದು, ನಿರಂತರ ಕಾರ್ಯಾಚರಣೆ ನಡೆಸಿದರೂ ಇನ್ನೂ ಸಿಕ್ಕಿಲ್ಲ. ಇದರಿಂದ ಗ್ರಾಮಸ್ಥರು ಭಯದಲ್ಲಿ ದಿನಗಳನ್ನು ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು  ಜನರು ಆರೋಪಿಸಿದ್ದಾರೆ.

ನಾಗೇಂದ್ರಗಡ ಗುಡ್ಡವು ಹಲವಾರು ವಿಶಿಷ್ಟತೆಗಳಿಂದ  ಕೂಡಿದ್ದು, ವಿಶಾಲವಾದ ನೀರಿನ ಕೆರೆಯನ್ನು ಹೊಂದಿದೆ.
ವರ್ಷದ ಸುಮಾರು ೬-೮ ತಿಂಗಳು ಹಚ್ಚ ಹಸಿರಿನಿಂದ ಕೂಡಿಕೊಂಡಿರುವ ಗ್ರಾಮವಾಗಿದ್ದು, ಪ್ರವಾಸಿಗರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಅಲ್ಲದೆ ಗ್ರಾಮ ಸಂಪರ್ಕಿಸುವ ಮೊದಲು ಘಾಟ್‌ನಲ್ಲಿ ಸಾಗುವ ಅನುಭವ ಕೂಡ ಆಗುತ್ತದೆ. ಅನೇಕ ಕಡೆಗಳಲ್ಲಿ ಜಲಪಾತದಂತೆ ಬೆಟ್ಟದ ಮೇಲಿಂದ ಬೀಳುವ ನೀರು ಹಸಿರಿನಿಂದ ಕೂಡಿದ ದಟ್ಟ ಅರಣ್ಯ ಇದು ನಾಗೇಂದ್ರಗಡ ಗುಡ್ಡದ ವಿಶೇಷತೆಯಾದರೂ ಸಹ ಇಲ್ಲಿ ನಾಗರಿಕ ಸಮುದಾಯಕ್ಕೆ ಕಂಟಕ ತರುವ ವನ್ಯ ಜೀವಿಗಳಿವೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ.

ಇದೇ ಮೊದಲಲ್ಲ

ನಾಗೇಂದ್ರಗಡ ಗುಡ್ಡದಲ್ಲಿ ಚಿರತೆ ಸದ್ದು ಕೇಳಿ ಬರುತ್ತಿರುವುದು ಇದೇ ಮೊದಲೇನಲ್ಲ. ಹಲವಾರು ಬಾರಿ ಇಂಥ ಘಟನೆಗಳು ನಡೆದಿವೆ. ಚಿರತೆ ಅಲ್ಲದೆ ಕರಡಿ, ಜಿಂಕೆ, ಕಾಡು ಬೆಕ್ಕು, ಮುಳ್ಳ್ಳು ಹಂದಿ, ಕಾಳಿಂಗ ಸರ್ಪ, ಸೀಳುನಾಯಿ, ತೋಳ, ನರಿಗಳ ಜೊತೆಗೆ ವಿವಿಧ ರೀತಿಯ ಪ್ರಾಣಿಗಳು ಈ ಬೆಟ್ಟದಲ್ಲಿವೆ ಎಂದು ಜನರು ಹೇಳುತ್ತಾರೆ. 

ಚಿರತೆ ಹೊರತು ಪಡಿಸಿ ಇಲ್ಲಿಯವರೆಗೆ ಯಾವ ಪ್ರಾಣಿಗಳು ಸುತ್ತ ಮುತ್ತಲಿನ ಗ್ರಾಮಗಳ ಜನರಲ್ಲಿ ಭಯ ಮೂಡಿಸಿದ್ದಿಲ್ಲ. ಚಿರತೆ ಮಾತ್ರ ಆಗಾಗ ಕಾಣಿಸಿಕೊಂಡು ಕರು ಹಾಗೂ ಹಸುಗಳು ಜೀವ ತೆಗೆಯುತ್ತಿದೆ ಎಂದು ಜನರು ಹೇಳುತ್ತಾರೆ.

ನಿರಂತರ ಕಾರ್ಯಚರಣೆ

ನಾಗೇಂದ್ರಗಡ ಗುಡ್ಡದಲ್ಲಿ ಹಲವಾರು ದಿನಗಳಿಂದ ನಿರಂತರವಾಗಿ ಚಿರತೆ ಸೆರೆಹಿಡಿಯಲು ಕಾರ್ಯಾಚರಣೆ ನಡೆಯುತ್ತಿದ್ದರೂ ಚಿರತೆ ಮಾತ್ರ ಬೋನಿಗೆ ಬೀಳುತ್ತಿಲ್ಲ. ಅರಣ್ಯದಲ್ಲಿ ಸಿಸಿ ಕೆಮರಾ ಅಳವಡಿಸಿ ಮತ್ತೊಂದು ಬೋನನ್ನು ಇಡಲಾಗಿದೆ. ಒಟ್ಟಿನಲ್ಲಿ ಚಿರತೆ ಬೋನಿಗೆ ಬಿದ್ದು ಗ್ರಾಮಸ್ಥರ ಆತಂಕ ದೂರವಾಗಲಿ ಎಂಬುದು ಅರಣ್ಯ ಸಿಬ್ಬಂದಿಗಳ ಹಾಗೂ ಸಾರ್ವಜನಿಕರ ಒತ್ತಾಸೆಯಾಗಿದೆ.

ಚಿರತೆ ಬೋನಿನ ಸಮೀಪ ಬಂದು ಹೋಗಿದೆ. ಹೀಗಾಗಿ ಅರಣ್ಯದಲ್ಲಿ ಮತ್ತೊಂದು ಬೋನನ್ನು ಇಡಲಾಗಿದೆ. ಒಂದು ಶಿಫ್ಟ್ ಗೆ 13 ಜನ ಸಿಬ್ಬಂದಿಗಳಂತೆ ದಿನದ 24 ಗಂಟೆ ಕಾರ್ಯಾಚರಣೆ ನಡೆಯುತ್ತಿದೆ. ಚಿರತೆ ದಾಳಿಗೆ ಆಕಳುಗಳು ಜೀವ ತೆತ್ತಿದ್ದು ಪರಿಶೀಲನೆ ನಡೆಸಲಾಗುತ್ತಿದೆ.

ಮಂಜುನಾಥ್ ಮೇಗಲಮನಿ, ಅರಣ್ಯಾಧಿಕಾರಿ, ಗದಗ

Spread the love

LEAVE A REPLY

Please enter your comment!
Please enter your name here