
ಡಿಡಿಪಿಯು ರಾಜೂರಿಗೆ ನೋಟಿಸ್; ಭೂಪಟ ಝರಾಕ್ಸ್ ಮಾಡಿಸಿ, ಉಪನ್ಯಾಸಕರಿಂದ ಪ್ರಶ್ನೆ ಬರೆಸಿದ್ದೇವೆ ಎಂದ ಡಿಡಿಪಿಯು * ಪಿಯು ಮಂಡಳಿ ಜೆಡಿ ಶೈಲಜಾ ಮಾಹಿತಿ
ವಿಜಯಸಾಕ್ಷಿ ಸುದ್ದಿ, ಗದಗ:
‘ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಮಧ್ಯಂತರ ಪರೀಕ್ಷೆಯ ಇತಿಹಾಸ, ಕನ್ನಡ ವಿಷಯಗಳ ಪರೀಕ್ಷೆಗಳನ್ನು ಗದಗ ಜಿಲ್ಲೆಯಲ್ಲಿ ಯಾವ ರೀತಿ ನಡೆಸಿದ್ದೀರಿ. ಕೆಲವು ವಿಷಯಗಳ ಪ್ರಶ್ನೆಗಳು ಯಾಕೆ ಪ್ರಶ್ನೆಪತ್ರಿಕೆಯಲ್ಲಿ ಇರಲಿಲ್ಲ ಎಂಬುವುದರ ಕುರಿತು ಸಂಪೂರ್ಣ ಮಾಹಿತಿ ಒದಗಿಸಿ ಎಂದು ಪಿಯು ಮಂಡಳಿಯ ನಿರ್ದೇಶಕಿ ಸ್ನೇಹಲತಾ ಅವರು ಸೋಮವಾರ (ಡಿ.13) ಗದಗ ಡಿಡಿಪಿಯು ಅವರಿಗೆ ಪತ್ರದ ಮೂಲಕ ಮಾಹಿತಿ ಕೇಳಿದ್ದಾರೆ ಎನ್ನಲಾಗಿದೆ.
ಡಿ.12ರಂದು ‘ವಿಜಯಸಾಕ್ಷಿ ಜಿಲ್ಲೆಯಲ್ಲಿ ನಡೆಯುತ್ತಿರುವ ದ್ವಿತೀಯ ಪಿಯುಸಿ ಮಧ್ಯಂತರ ಪರೀಕ್ಷೆಯ ಕುರಿತು ‘ಪಿಯುಸಿ: ‘ಕಾಟಾಚಾರದ ಮಧ್ಯಂತರ ಪರೀಕ್ಷೆ ಬೇಕೇ? ಎಂಬ ಶೀರ್ಷಿಕೆಯಡಿ ಪ್ರಶ್ನೆಪತ್ರಿಕೆಗಳಲ್ಲಾದ ಲೋಪದೋಷ ಹಾಗೂ ಡಿಡಿಪಿಯು ರಾಜೂರು ಅವರು ಪರೀಕ್ಷಾ ಪಾವಿತ್ರ್ಯಕ್ಕೆ ಧಕ್ಕೆಯನ್ನುಂಟು ಮಾಡಿರುವ ಕುರಿತು ಸವಿಸ್ತಾರವಾದ ಸುದ್ದಿ ಪ್ರಕಟಿಸಿತ್ತು. ಅಲ್ಲದೆ, ಈ ಬಗ್ಗೆ ಪಿಯು ಮಂಡಳಿ ನಿರ್ದೇಶಕರು ಹಾಗೂ ಜಂಟಿ ನಿರ್ದೇಶಕ(ಪರೀಕ್ಷೆ)ರ ಗಮನಕ್ಕೂ ತರಲಾಗಿತ್ತು. ಈ ಬೆನ್ನಲ್ಲೇ ಪಿಯು ಮಂಡಳಿ ಕೇಂದ್ರ ಕಚೇರಿಯಿಂದ ಡಿಡಿಪಿಯು ಅವರಿಗೆ ಪತ್ರ ಬಂದಿದೆ.

ದ್ವಿತೀಯ ಪಿಯುಸಿ ಮಧ್ಯಂತರ ಪರೀಕ್ಷೆಯ ಹಿನ್ನೆಲೆಯಲ್ಲಿ ಡಿ.9ರಂದು ಗದಗ ಜಿಲ್ಲೆಯಲ್ಲಿ ನಡೆದ ಇತಿಹಾಸ ವಿಷಯದ ಪ್ರಶ್ನೆಪತ್ರಿಕೆಯಲ್ಲಿ ಭೂಪಟ ಬಂದಿರಲಿಲ್ಲ. ಕನ್ನಡ ವಿಷಯದ ಪ್ರಶ್ನೆ ನಂ.27 ಮತ್ತು 28 ಮುದ್ರಣ ಆಗಿರಲಿಲ್ಲ ಎಂಬ ಮಾಹಿತಿ ಸಿಕ್ಕಿದ್ದು, ವರದಿ ತರಿಸಿಕೊಂಡಿದ್ದೇವೆ. ಈ ಬಗ್ಗೆ ಕ್ರಮ ಕೈಗೊಂಡಿರುವ ಕುರಿತು ಗದಗ ಡಿಡಿಪಿಯುಗೆ ಕೇಳಿದ್ದೇವೆ. ಅವರು ‘ಪರೀಕ್ಷಾ ಸಮಯದಲ್ಲಿಯೇ ಕುರ್ತಕೋಟಿಯ ಸರ್ಕಾರಿ ಕಾಲೇಜಿನಿಂದ ಭೂಪಟವನ್ನು ಝರಾಕ್ಸ್ ಮಾಡಿಸಿ ಎಲ್ಲ ಕಾಲೇಜುಗಳಿಗೂ ಕೊಟ್ಟಿದ್ದೇವೆ. ಕನ್ನಡ ಉಪನ್ಯಾಸಕರನ್ನು ಕರೆಸಿ ಪ್ರಶ್ನೆ ಪತ್ರಿಕೆಯಿಂದ ಬಿಟ್ಟು ಹೋಗಿದ್ದ 27 ಮತ್ತು 28ನೇ ಪ್ರಶ್ನೆಗೆ ವಿದ್ಯಾರ್ಥಿಗಳಿಗೆ ಬೇರೆ ಪ್ರಶ್ನೆಗಳನ್ನು ಕೊಟ್ಟು ಪರೀಕ್ಷೆ ಬರೆಸಿದ್ದೇವೆ ಎಂದು ಪತ್ರ ಕಳುಹಿಸಿದ್ದಾರೆ ಎಂದು ಪಿಯು ಮಂಡಳಿಯ ಪರೀಕ್ಷಾಂಗದ ಜಂಟಿ ನಿರ್ದೇಶಕಿ ಶೈಲಜಾ ‘ವಿಜಯಸಾಕ್ಷಿಗೆ ತಿಳಿಸಿದರು.
ಇತಿಹಾಸ ವಿಷಯದಲ್ಲಿ ಕಣ್ಮರೆಯಾಗಿದ್ದ ಭೂಪಟ ಹಾಗೂ ಕನ್ನಡ ವಿಷಯದಲ್ಲಿ ನಾಪತ್ತೆಯಾಗಿದ್ದ ಎರಡು ಪ್ರಶ್ನೆಗಳನ್ನು ಡಿಡಿಪಿಯು ಎಚ್.ಎಸ್. ರಾಜೂರು ಅವರು ಕೇವಲ ಮೂರು ಗಂಟೆಗಳ ಪರೀಕ್ಷಾ ಅವಧಿಯಲ್ಲಿ ಪ್ರಶ್ನೆಗಳನ್ನು ಮುದ್ರಣ ಮಾಡಿಸಿ ಜಿಲ್ಲೆಯ ಎಲ್ಲ ಕಾಲೇಜುಗಳಿಗೂ ಸರಬರಾಜು ಮಾಡಲು ಸಾಧ್ಯವಿಲ್ಲ. ಕನ್ನಡ ವಿಷಯದಲ್ಲಿ ಬಿಟ್ಟು ಹೋಗಿದ್ದ ಎರಡೂ ಪ್ರಶ್ನೆ ಹಾಗೂ ಇತಿಹಾಸದ ಭೂಪಟವನ್ನು ವಾಟ್ಸ್‌ಆಪ್ ಮೂಲಕ ಶೇರ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಪರೀಕ್ಷಾ ಕೊಠಡಿಗಳಲ್ಲಿ ಮೊಬೈಲ್ ನಿಷಿದ್ಧವಾಗಿದ್ದರೂ, ಪರೀಕ್ಷಾ ಪಾವಿತ್ರ್ಯ ಕಾಪಾಡಬೇಕಿರುವ ಡಿಡಿಪಿಯು ಮೊಬೈಲ್‌ಗಳ ಮೂಲಕ ಪ್ರಶ್ನೆಗಳನ್ನು ಹರಿಬಿಟ್ಟಿದ್ದೇಕೆ? ಇದು ಪ್ರಶ್ನೆ ಪತ್ರಿಕೆ ಸೋರಿಕೆ ಅಲ್ಲವೇ? ಪರೀಕ್ಷಾ ನಿಯಮಗಳನ್ನು ಉಲ್ಲಂಘಿಸಿದ ಅಧಿಕಾರಿಯ ವಿರುದ್ಧ ಕ್ರಮ ಯಾವಾಗ? ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರ ಲಭಿಸಿಲ್ಲ.
ಪ್ರಶ್ನೆಪತ್ರಿಕೆಗಳ ಮುದ್ರಣ ಎಲ್ಲಿ?
ಪ್ರತಿ ಜಿಲ್ಲೆಯ ಪ್ರಶ್ನೆ ಪತ್ರಿಕೆಗಳಲ್ಲಿ ವ್ಯತ್ಯಾಸ ಇರುವುದರಿಂದ ಪಿಯು ಮಂಡಳಿ ನಿಯಮದ ಪ್ರಕಾರ ಜಿಲ್ಲೆಯಲ್ಲಿ ಪ್ರಶ್ನೆಪತ್ರಿಕೆಗಳ ಮುದ್ರಣ ಮಾಡಿಸುವಂತಿಲ್ಲ. ಪ್ರಶ್ನೆಪತ್ರಿಕೆಗಳ ಮುದ್ರಣಕ್ಕೆ ಟೆಂಡರ್ ಆಗಿರುವ ಪ್ರಿಂಟಿಂಗ್ ಪ್ರೆಸ್‌ನವರಿಗೆ ಪ್ರಭಾವಿ ವ್ಯಕ್ತಿಗಳು ಆಮಿಷವೊಡ್ಡಿ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗುವಂತೆ ಮಾಡಬಹುದು. ಪರೀಕ್ಷಾ ಪಾವಿತ್ರ್ಯ ಕಾಪಾಡುವ ಹಿತದೃಷ್ಟಿಯಿಂದ ಪಕ್ಕದ ಜಿಲ್ಲೆಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಮುದ್ರಣ ಮಾಡಿಸಿ ತರಬೇಕು. ಆದರೆ, ಗದಗ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಮುದ್ರಣ ಕಾಶಿ ಎಂದು ಖ್ಯಾತಿ ಹೊಂದಿರುವ ಗದಗದಲ್ಲಿಯೇ ಪ್ರಶ್ನೆ ಪತ್ರಿಕೆಗಳನ್ನು ಮುದ್ರಣ ಮಾಡಿಸಿದ್ದಲ್ಲದೆ, ಡಿಡಿಪಿಯು ಅವರು ಪರೀಕ್ಷಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎನ್ನಲಾಗುತ್ತಿದೆ.
ಫ್ರೂಪ್ ರೀಡ್ ಮಾಡಿದ್ದು ಯಾರು?
ಪಿಯು ಮಂಡಳಿ ಕೇಂದ್ರ ಕಚೇರಿಯಿಂದ ಕಳುಹಿಸಿದ ಪ್ರತಿ ವಿಷಯದ ಪ್ರಶ್ನೆ ಪತ್ರಿಕೆಗಳು ಮುದ್ರಣಗೊಳ್ಳುವ ಮುನ್ನ ನೈಪುಣ್ಯ ಹೊಂದಿರುವ ಆಯಾ ವಿಷಯಗಳ ಶಿಕ್ಷಕರು, ತಜ್ಞರನ್ನೊಳಗೊಂಡ ಒಂದು ಸಮಿತಿ ರಚಿಸಬೇಕು. ಸಮಿತಿಯ ಸಂಪನ್ಮೂಲ ವ್ಯಕ್ತಿಗಳು ಪ್ರತಿ ಪ್ರಶ್ನೆಪತ್ರಿಕೆಗಳನ್ನು ಫ್ರೂಫ್ ರೀಡ್ ಮಾಡಿ ಎಲ್ಲವೂ ಸರಿಯಾಗಿದೆ ಎಂದು ಒಪ್ಪಿಗೆ ಸೂಚಿಸಿದ ಬಳಿಕವಷ್ಟೇ ಅಂತಿಮವಾಗಿ ಪ್ರಶ್ನೆಪತ್ರಿಕೆಗಳನ್ನು ಮುದ್ರಣ ಮಾಡಿಸಬೇಕು. ಆದರೆ, ಗದಗ ಡಿಡಿಪಿಯು ಎಚ್.ಎಸ್.ರಾಜೂರು ಅವರ ನಿರ್ಲಕ್ಷ್ಯದಿಂದಾಗಿ ಅದ್ಯಾವುದು ನಡೆದಿಲ್ಲ ಎನ್ನಲಾಗುತ್ತಿದೆ. ಪಿಯು ಮಂಡಳಿಯ ನಿಯಮಾನುಸಾರ ಪರೀಕ್ಷೆಗಳು ನಡೆದಿದ್ದರೆ ಜಿಲ್ಲೆಯಲ್ಲಿ ಇಂತಹ ಅವಘಡಗಳು ಸಂಭವಿಸುತ್ತಿರಲಿಲ್ಲ ಎನ್ನಲಾಗಿದೆ.
ಜಿಲ್ಲೆಯಲ್ಲಿ ಯಾವ ರೀತಿಯ ಪರೀಕ್ಷೆ ನಡೆಸಲಾಗಿದೆ ಎಂಬುವುದರ ಕುರಿತು ತನಿಖೆ ಕೈಗೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ಪರೀಕ್ಷೆಯ ಬಗ್ಗೆ ಸಂಪೂರ್ಣ ವರದಿ ಕೊಡುವಂತೆ ಡಿಡಿಪಿಯುಗೆ ಕೇಳಿದ್ದೇವೆ. ಈಗಾಗಲೇ ಒಂದು ಪತ್ರ ಕೊಟ್ಟಿದ್ದು, ಪಿಯು ಮಂಡಳಿಯಿಂದ ಮತ್ತೊಂದು ಪತ್ರ ಕಳುಹಿಸುತ್ತಿದ್ದೇವೆ. ಎಲ್ಲ ಕಾಲೇಜುಗಳಿಗೂ ಭೂಪಟ, ಪ್ರಶ್ನೆಗಳನ್ನು ಸರಬರಾಜು ಮಾಡಿರುವ ಬಗ್ಗೆ ಖಚಿತಪಡಿಸಿಕೊಂಡು ಕ್ರಮ ಕೈಗೊಳ್ಳುವ ಕುರಿತು ತೀರ್ಮಾನಿಸಲಾಗುವುದು. ಅಲ್ಲದೇ, ಪ್ರಶ್ನೆಪತ್ರಿಕೆ ಮುದ್ರಿಸುವುದಕ್ಕಿಂತ ಮುನ್ನ ಅವರು ಗಮನಿಸಬೇಕಿತ್ತು. ಕೇಂದ್ರ ಕಚೇರಿಯಿಂದ ಕೊಟ್ಟಿರುವ ಪ್ರಶ್ನೆಪತ್ರಿಕೆ ಮುದ್ರಣ ಮಾಡಿಸಬೇಕಿರುವುದು ಅವರ ಜವಾಬ್ದಾರಿಯಾಗಿದ್ದು, ಇದರಲ್ಲಿ ಡಿಡಿಪಿಯು ತಪ್ಪಿದೆ. ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ನೋಟಿಸ್ ಜಾರಿ ಮಾಡಲಾಗುವುದು.
ಶೈಲಜಾ, ಜಂಟಿ ನಿರ್ದೇಶಕರು (ಪರೀಕ್ಷೆ)
‘ಪಿಯು ಮಂಡಳಿ ನಿರ್ದೇಶಕರು ಮಾಹಿತಿ ಒದಗಿಸುವಂತೆ ಕೇಳಿದ್ದಾರೆ. ಏನಾಗಿದೆ ಎಂದು ಉತ್ತರ ಬರೆದು ಹೇಳುತ್ತೇನೆ ಎಂದು ಡಿಡಿಪಿಯು ಎಚ್.ಎಸ್.ರಾಜೂರು ಅವರು ಪ್ರತಿಕ್ರಿಯಿಸಲು ಹಿಂದೇಟು ಹಾಕಿದರು.