ಬಸ್‌ಗಾಗಿ ಕಾಯುವುದೇ ಸಾಹಸ; ಗೋಳು ತಪ್ಪಿಸುವರೇ ಸಚಿವ ಬಿ. ಶ್ರೀರಾಮುಲು?
ದುರಗಪ್ಪ ಹೊಸಮನಿ
ವಿಜಯಸಾಕ್ಷಿ ಸುದ್ದಿ, ಗದಗ:

ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರ ಕರ್ಮಭೂಮಿ ಗದಗ ಜಿಲ್ಲೆಯಾದ್ಯಂತ ವಿದ್ಯಾರ್ಥಿಗಳು ಬಸ್‌ಗಾಗಿ ಒಂಟಿಗಾಲಲ್ಲಿ ನಿಲ್ಲಬೇಕಾದ ದುಸ್ಥಿತಿ ಇದೆ. ಶಾಲೆ-ಕಾಲೇಜುಗಳ ಸಮಯಕ್ಕೆ ಬಸ್‌ಗಳು ಬಾರದೆ ವಿದ್ಯಾರ್ಥಿಗಳು ತರಗತಿಗಳನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಶಾಲೆ, ಕಾಲೇಜಿನಿಂದ ಮರಳಿ ಮನೆಗೆ ಬರಲೂ ಸಮಸ್ಯೆ ಎದುರಿಸುತ್ತಿದ್ದಾರೆ.

ಹೌದು, ಮುಳಗುಂದ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಹಾಗೂ ಅಂಜುಮನ್ ಕಾಲೇಜು ಸೇರಿ ಬಹುತೇಕ ಕಾಲೇಜು ವಿದ್ಯಾರ್ಥಿಗಳ ದಿನನಿತ್ಯದ ಗೋಳಾಟವಿದು. ಈ ಎರಡು ಕಾಲೇಜುಗಳು ಗದಗ-ಮುಳಗುಂದ ರಸ್ತೆಯ ಪಕ್ಕದಲ್ಲಿದ್ದು, ನಿತ್ಯ ನೂರಾರು ವಿದ್ಯಾರ್ಥಿಗಳು ಇಲ್ಲಿಗೆ ವ್ಯಾಸಂಗ ಮಾಡಲು ಬರುತ್ತಿದ್ದಾರೆ. ಆದರೆ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಹೊರೆಗಿಂತ ಬಸ್ ಏರಿ ಕಾಲೇಜಿಗೆ ಬಂದು ಹೋಗುವುದೇ ಬಹುದೊಡ್ಡ ಸಾಹಸವಾಗಿದೆ.

ಗ್ರಾಮೀಣ ಪ್ರದೇಶಗಳಿಂದ ನಗರದ ಕಾಲೇಜುಗಳಿಗೆ ಸಾವಿರಾರು ವಿದ್ಯಾರ್ಥಿಗಳು ಬರುತ್ತಿದ್ದಾರೆ. ಆದರೆ, ಸೂಕ್ತ ಬಸ್‌ಗಳಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಪ್ರತಿದಿನ ಬಸ್‌ಪಾಸ್ ಇರುವ ವಿದ್ಯಾರ್ಥಿಗಳು ಕಂಡರೆ ಸಾಕು ಸಾರಿಗೆ ಸಂಸ್ಥೆಯ ಬಸ್‌ನ ಚಾಲಕರು ಹಾಗೂ ನಿರ್ವಾಹಕರು ಬಸ್ ನಿಲ್ಲಿಸದೆ ಶರವೇಗದಲ್ಲಿ ಚಲಿಸುತ್ತಿದ್ದಾರೆ. ಅಪ್ಪಿತಪ್ಪಿ ಬಸ್ ನಿಲ್ಲಿಸಿದರೆ ಅದು ಖಾಲಿ ಇರಲಿ, ತುಂಬಿರಲಿ ಸಂಪ್ರದಾಯಕ್ಕೆ ಎಂಬಂತೆ ಒಬ್ಬಿಬ್ಬರು ವಿದ್ಯಾರ್ಥಿಗಳನ್ನು ಮಾತ್ರ ಹತ್ತಿಸಿಕೊಂಡು ಹೋಗುತ್ತಿದ್ದಾರೆ. ಆದರೆ, ಹಣ ಕೊಟ್ಟು ಸಂಚರಿಸುವ ಪ್ರಯಾಣಿಕರು ಇದ್ದರೆ ಬಸ್ ತುಂಬಿ ತುಳುಕುತ್ತಿದ್ದರೂ, ಉಸಿರುಗಟ್ಟುವ ರೀತಿಯಲ್ಲಿ ಪ್ರಯಾಣಿಕರನ್ನು ತುಂಬಿಕೊಂಡು ಸಾಗುತ್ತಿದ್ದಾರೆ.
ಗೋಳಾಟಕ್ಕೆ ಕೊನೆ ಇಲ್ಲವೇ?
ನಗರದ ಹೊರವಲಯದಲ್ಲಿರುವ ಕಾಲೇಜುಗಳ ಮುಂದೆ ಕೆಎಸ್‌ಆರ್‌ಟಿಸಿಯೇ ಕೋರಿಕೆಯ ಬಸ್ ನಿಲುಗಡೆ ನಾಮಫಲಕ ಹಾಕಿದ್ದರೂ ಸಾರಿಗೆ ಸಂಸ್ಥೆಯ ಸಿಬ್ಬಂದಿ ಬಸ್ ನಿಲ್ಲಿಸುತ್ತಿಲ್ಲ. ನಿಲ್ಲಿಸಿದರೂ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳುತ್ತಿಲ್ಲ. ಬಸ್‌ಗಾಗಿ ವಿದ್ಯಾರ್ಥಿಗಳ ಗೋಳು ಕೇಳುವವರು ಯಾರು? ಕಾಲೇಜು ಮುಂದಿರುವ ಕೋರಿಕೆಯ ನಿಲುಗಡೆಯ ಸ್ಥಳಗಳಲ್ಲಿ ಬಸ್‌ಗಳನ್ನು ನಿಲ್ಲಿಸಿ ಅನುಕೂಲ ಮಾಡಿಕೊಡುವಂತೆ ವಿದ್ಯಾರ್ಥಿಗಳು ಅಂಗಲಾಚುತ್ತಿದ್ದಾರೆ.
ಸತ್ತರೆ ಹೊಣೆ ಯಾರು?
ಗದಗ-ಹೊನ್ನಾಳ್ಳಿ ರಸ್ತೆ ಸುಧಾರಣಾ ಕಾಮಗಾರಿ ನಡೆಯುತ್ತಿದ್ದು, ನಾಗಾವಿ ಕ್ರಾಸ್‌ವರೆಗೆ ರಸ್ತೆ ಅಗಲೀಕರಣವಾಗಿದೆ. ಇದರಿಂದ ಕೋರಿಕೆಯ ನಿಲುಗಡೆ ನಾಮಫಲಕ ಇಲ್ಲವಾಗಿದೆ. ಹೀಗಾಗಿ ಸರ್ಕಾರಿ ಹಾಗೂ ಅಂಜುಮನ್ ಕಾಲೇಜು ಬಿಟ್ಟ ಬಳಿಕ ವಿದ್ಯಾರ್ಥಿಗಳು ಬಸ್‌ಗಾಗಿ ಕಾಯುತ್ತಾ ರಸ್ತೆಯ ಮೇಲೆ, ಪಕ್ಕವೇ ನಿಂತುಕೊಳ್ಳುತ್ತಿದ್ದಾರೆ. ಇದರಿಂದ ರಸ್ತೆ ಇಕ್ಕಾಟ್ಟಾಗುತ್ತಿದೆ. ಮುಳಗುಂದ ರಸ್ತೆಯಲ್ಲಿ ವಾಹನ ದಟ್ಟನೆ ಹೆಚ್ಚಿದ್ದು, ಶರವೇಗದಲ್ಲಿ ಬರುವ ವಾಹನಗಳಿಂದ ಅವಘಡ ಸಂಭವಿಸಿದರೆ ಯಾರು ಹೊಣೆ? ಕೂಡಲೇ ಇವೆರಡೂ ಕಾಲೇಜುಗಳ ಹತ್ತಿರ ಬಸ್ ನಿಲ್ದಾಣ ನಿರ್ಮಿಸುವ ಮೂಲಕ ವಿದ್ಯಾರ್ಥಿಗಳ ಜೀವ ಉಳಿಸಬೇಕು.
ಈ ಮಾರ್ಗದಲ್ಲಿ ಬರುವ ಪ್ರತಿ ಬಸ್‌ಗಳನ್ನು ನಿಲ್ಲಿಸುವಂತೆ ಚಾಲಕರು ಹಾಗೂ ನಿರ್ವಾಹಕರಿಗೆ ಕಟ್ಟುನಿಟ್ಟಾಗಿ ಸೂಚಿಸಬೇಕು. ಸಾರಿಗೆ ಸಚಿವರಾದ ಬಿ. ಶ್ರೀರಾಮುಲು ಅವರು ತಮ್ಮ ಕರ್ಮಭೂಮಿಯಾಗಿರುವ ಗದಗ ಜಿಲ್ಲೆಯ ಎಲ್ಲ ಗ್ರಾಮಗಳಿಗೂ ನೇರ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ರಸ್ತೆಯ ಅಭಿವೃದ್ಧಿ ಕಾರ್ಯ ನಡೆಯುತ್ತಿರುವುದರಿಂದ ಪ್ರತಿನಿತ್ಯ ಕಾಲೇಜು ಬಿಟ್ಟ ಬಳಿಕ ವಿದ್ಯಾರ್ಥಿಗಳು ಬಸ್ ನಿಲ್ದಾಣ ಹಾಗೂ ಊರುಗಳಿಗೆ ತೆರಳಲು ಬಸ್‌ಗಾಗಿ ಕಾಯುತ್ತಾ ರಸ್ತೆಯ ಮೇಲೆ ನಿಂತುಕೊಳ್ಳುತ್ತಿದ್ದಾರೆ. ಬಸ್ ನಿಲ್ಲಿಸುವಂತೆ ವಿದ್ಯಾರ್ಥಿಗಳು ಕೈ ಮಾಡಿದರೂ ಸಾರಿಗೆ ಸಂಸ್ಥೆಯ ಸಿಬ್ಬಂದಿ ಬಸ್ ನಿಲ್ಲಿಸದ ಕಾರಣ ಕೆಲವು ವಿದ್ಯಾರ್ಥಿಗಳು ನಡೆದುಕೊಂಡೇ ಬಸ್ ನಿಲ್ದಾಣಕ್ಕೆ ಹೋಗುತ್ತಿದ್ದಾರೆ. ದಯವಿಟ್ಟು ಬಸ್ ನಿಲ್ಲಿಸಿ ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು ಹೋಗಿ.
ಪೂರ್ಣಿಮಾ ಹೊಸಮನಿ, ಪ್ರಚಾರ್ಯರು
ಜಿಲ್ಲೆಯ ಬಹುತೇಕ ಗ್ರಾಮಗಳಿಗೆ ಬಸ್ ಸೌಲಭ್ಯವಿಲ್ಲ. ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ನಿತ್ಯ ಪರದಾಡುತ್ತಿದ್ದಾರೆ. ಸೂಕ್ತ ಬಸ್ ಸೌಕರ್ಯ ಒದಗಿಸುವಂತೆ ಅನೇಕ ಬಾರಿ ಹೋರಾಟಗಳನ್ನು ಮಾಡಿ, ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಶೀಘ್ರವೇ ಪ್ರತಿ ಹಳ್ಳಿಗಳಿಗೂ ಬಸ್ ಸೌಲಭ್ಯ ಕಲ್ಪಿಸದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವುದು.
ಗಿರೀಶ್ ನರಗುಂದಕರ್, ಎಬಿವಿಪಿ ಧಾರವಾಡ ವಿಭಾಗದ ಪ್ರಮುಖ್