ಕಿಂಗ್ ಪಿನ್ ಸೈಫನ್ ಪರಾರಿ
ವಿಜಯಸಾಕ್ಷಿ ಸುದ್ದಿ, ಕಲಬುರಗಿ
ಕಲಬುರಗಿಯ ಜಿಲ್ಲೆಯ ಪೊಲೀಸರು ಭರ್ಜರಿ ಬೇಟೆ ನಡೆಸಿದ್ದಾರೆ. ಈ ಕಾರ್ಯಾಚರಣೆ ಮೂಲಕ ಮಧ್ಯಪ್ರದೇಶದಿಂದ ಅಕ್ರಮವಾಗಿ ನಾಡ ಪಿಸ್ತೂಲ್ ಗಳನ್ನು ತಂದು ಕಲಬುರಗಿಯಲ್ಲಿ ಮಾರಾಟ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ವಿಚಾರಣೆಯ ವೇಳೆ ಹೊರಬಿದ್ದ ವಿಷಯಗಳು ಪೊಲೀಸ್ ಇಲಾಖೆಯ ಅಧಿಕಾರಿಗಳನ್ನೇ ದಂಗುಬಡಿಸಿದೆ. ಅಲ್ಲಿಗೆ, ಉತ್ತರ ಕರ್ನಾಟಕದ ಅಕ್ರಮ ಪಿಸ್ತೂಲ್ ದಂಧೆಯ ಮೂಲಬೇರು ಮಧ್ಯಪ್ರದೇಶದಲ್ಲಿ ಹರಡಿಕೊಂಡಿರುವ ವಿಷಯ ಹೊರಬಿದ್ದದ್ದೂ ಅಷ್ಟೇ ರೋಚಕವಾಗಿದೆ.
ಘಟನೆಯ ವಿವರ
ಮಧ್ಯಪ್ರದೇಶದಲ್ಲಿ ಸಿದ್ಧವಾಗುತ್ತಿದ್ದ ನಾಡ ಪಿಸ್ತೂಲುಗಳನ್ನು 20 ಸಾವಿರ ರೂ.ಗಳಿಗೆ ಖರೀದಿಸಿ ಉತ್ತರ ಕರ್ನಾಟಕ ಭಾಗಗಳಲ್ಲಿ 80 ಸಾವಿರ ರೂ.ಗಳವರೆಗೂ ಮಾರಾಟ ಮಾಡುತ್ತಿದ್ದರು.
ಈ ಸಂಬಂಧ ಖಚಿತ ಮಾಹಿತಿಯ ಬೆನ್ನುಬಿದ್ದ ಕಲಬುರಗಿ ಪೊಲೀಸ್ ಅಧಿಕಾರಿಗಳು, ಕಲಬುರಗಿಯಲ್ಲಿ ನಾಡ ಪಿಸ್ತೂಲ್ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮತ್ತು ಅಕ್ರಮವಾಗಿ ಖರೀದಿ ಮಾಡಿದ ಮೂರು ಜನರನ್ನು ಬಂಧಿಸಿದ್ದಾರೆ. ಬಂಧಿತರಿಂದ ನಾಲ್ಕು ನಾಡ ಪಿಸ್ತೂಲ್, 18 ಜೀವಂತ ಗುಂಡುಗಳನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಕಲಬುರಗಿ ಪೋಲೀಸ್ ವರಿಷ್ಠಾಧಿಕಾರಿ ಇಷಾ ಪಂತ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಈ ಅಕ್ರಮ ದಂಧೆಗೆ ಸಂಬಂಧಿಸಿದಂತೆ ಅಫಜಲಪುರ ಮೂಲದ ನಾಲ್ವರು ಆರೋಪಿಗಳಾದ ಭೀಮಣ್ಣಾ, ಸಿದ್ದಪ್ಪ, ಸಲೀಂ ಹಾಗೂ ಪರಸಯ್ಯರನ್ನು ಬಂಧಿಸಲಾಗಿದ್ದು, ಮಧ್ಯವರ್ತಿ ಆರೋಪಿ ಸೈಫನ್ ಎಂಬ ವ್ಯಕ್ತಿ ತಲೆಮರೆಸಿಕೊಂಡಿದ್ದು, ಖಾಕಿ ಪಡೆ ಈತನ ಪತ್ತೆಗೆ ಬಲೆಬೀಸಿದೆ.
ಬಂಧಿತ ಆರೋಪಿ ಭೀಮಣ್ಣ ಮಧ್ಯಪ್ರದೇಶದಿಂದ ನಾಡ ಪಿಸ್ತೂಲ್ ಗಳನ್ನು 20 ಸಾವಿರಕ್ಕೆ ಖರೀದಿಸಿ, ಇಲ್ಲಿ 65 ರಿಂದ 80 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ ಎಂಬ ವಿಷಯ ತಿಳಿದುಬಂದಿದೆ. ಬಂಧಿತ ಆರೋಪಿಗಳು ಒಬ್ಬರಿಗಿಂತ ಇನ್ನೊಬ್ಬರು ಭಯಂಕರ ಕ್ರಿಮಿನಲ್ ಗಳಾಗಿದ್ದು, ತಲೆಮರೆಸಿಕೊಂಡಿರುವ ಕಿಂಗ್ ಪಿನ್ ಸೈಫನ್ ಅಕ್ರಮ ಪಿಸ್ತೂಲ್ ದಂಧೆಯ 10 ಪ್ರಕರಣಗಳಲ್ಲಿ ಭಾಗಿಯಾಗಿದ್ದ.
ಇನ್ನೊಬ್ಬ ಬಂಧಿತ ಆರೋಪಿ ಸಲೀಂ ದುಡ್ಡು ಪಡೆದು, ಗುಪ್ತ ನಿಧಿ ಇರುವ ಜಾಗದ ಬಗ್ಗೆ ಮಾಹಿತಿ ನೀಡುತ್ತಿದ್ದ ಎನ್ನಲಾಗಿದೆ. ನಿಧಿ ಇರುವ ಜಾಗದ ಬಗ್ಗೆ ತಪ್ಪಾಗಿ ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ಈ ಹಿಂದೆ ಹಲವು ಬಾರಿ ಜನರಿಂದ ಒದೆ ತಿಂದಿದ್ದ ಎಂದು ಹೇಳಲಾಗುತ್ತದೆ. ಇದೇ ಹಿನ್ನೆಲೆಯಲ್ಲಿ ನಾಡ ಪಿಸ್ತೂಲ್ ಖರೀದಿಸಿ ಸದಾ ಜೊತೆಗೇ ಇಟ್ಟುಕೊಳ್ಳುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನೊಬ್ಬ ಬಂಧಿತ ಆರೋಪಿ ಪರಸಯ್ಯ, ಆಸ್ತಿ ವಿಚಾರದಲ್ಲಿ ಸಾಕಷ್ಟು ಗಲಾಟೆ ಮಾಡಿಕೊಂಡಿದ್ದು, ಈ ವಿಷಯಕ್ಕಾಗಿ ಪಿಸ್ತೂಲ್ ಖರೀದಿ ಮಾಡಿದ್ದ ಎಂದು ಎಸ್ಪಿ ಹೇಳಿದರು. ಈ ದಂಧೆಯ ಹಿಂದಿರುವ ಮುಖ್ಯ ಕಿಂಗ್ ಪಿನ್ ಸೈಫನ್ ತಪ್ಪಿಸಿಕೊಂಡಿದ್ದು, ಈತನ ಪತ್ತೆಗಾಗಿ ಕಲಬುರಗಿ ಪೊಲೀಸರು ವ್ಯಾಪಕ ಶೋಧ ನಡೆಸಿದ್ದಾರೆ.