ವಿಜಯಸಾಕ್ಷಿ ಸುದ್ದಿ, ಗದಗ
ಜಿಲ್ಲೆಯಲ್ಲಿ ವರುಣನ ಅಬ್ಬರ ಜೋರಾಗಿದೆ. ಜಿಲ್ಲೆಯ ನರಗುಂದ ತಾಲೂಕಿನಲ್ಲಿ ನಿನ್ನೆಯಿಂದ ಭಾರೀ ಮಳೆ ಸುರಿಯುತ್ತಿದ್ದು, ಸಿಡಲಿಗೆ ಓರ್ವ ಸಾವನ್ನಪ್ಪಿದ್ದು, ಮೂರು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ನರಗುಂದ ಸಮೀಪದ ಇಂಜನಿಯರಿಂಗ್ ಕಾಲೇಜು ಬಳಿಯ ಮರದ ಕೆಳಗೆ ನಾಲ್ವರು ಆಶ್ರಯ ಪಡೆದಿದ್ದರು. ಆ ಸಂದರ್ಭದಲ್ಲಿ ಸಿಡಿಲು ಬಡಿದು ಅಶೋಕ ಎಂಬವರು ಮೃತಪಟ್ಟಿದ್ದಾರೆ. ಮಗು ಸಮೇತ ಮಹಿಳೆ ಹಾಗೂ ಇನ್ನೊಬ್ಬ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲು ಮಾಡಲಾಗಿದೆ. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿನ್ನೆ ಸಂಜೆ ನರಗುಂದ ತಾಲೂಕಿನ ಚಿಕ್ಕನರಗುಂದ ಗ್ರಾಮದ ಮಹಿಳೆ ಜಮೀನಿನಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ಮೃತಪಟ್ಟಿದ್ದಳು.
ರೋಣ ತಾಲೂಕಿನ ಬೆನಹಾಳ ಗ್ರಾಮದಲ್ಲಿ ಮಳೆಯ ಅಬ್ಬರಕ್ಕೆ ಸರಕಾರಿ ಶಾಲೆ ಸೇರಿದಂತೆ ಹಲವು ಮನೆಗಳಿಗೆ ನೀರು ನುಗ್ಗಿದೆ.
1ರಿಂದ 7ನೇ ತರಗತಿಗಳ ಕೊಠಡಿಗಳಿಗೆ ನೀರು ನುಗ್ಗಿದ್ದರಿಂದ ಮಕ್ಕಳು ಪರದಾಡಿದರು. ಅಡುಗೆ ಕೊಠಡಿಯಲ್ಲಿ ಇದ್ದ ಬಿಸಿಯೂಟ ಸಾಮಾಗ್ರಿಗಳು ನೀರಲ್ಲಿ ನಿಂತಿವೆ. ಸರಿಯಾಗಿ ನೀರು ಹರಿದು ಹೋಗಲು ಚರಂಡಿ ಇಲ್ಲದ ಕಾರಣ ಈ ಅವಾಂತರ ಸೃಷ್ಟಿಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಯಾವಗಲ್ ಗ್ರಾಮದ ಬಳಿಯ ಬಡಗಿ ಹಳ್ಳ ಉಕ್ಕಿ ಹರಿಯುತ್ತದೆ. ಬೈಕ್ ಸವಾರನೊಬ್ಬ ಉಕ್ಕಿ ಹರಿಯುತ್ತಿರುವ ಹಳ್ಳ ದಾಟಲು ಮುಂದಾಗಿದ್ದ ವೇಳೆ ಬೈಕ್ ಕೊಚ್ಚಿ ಹೋಗಿದ್ದು, ಸವಾರ ಬಚಾವ್ ಆಗಿದ್ದಾನೆ. ರೈತ ಕುಮಾರ್ ಎಂಬಾತ ಜಮೀನಿನಲ್ಲಿ ಕೆಲಸ ಮಾಡಿ ಮನೆಗೆ ವಾಪಾಸು ಬರುವಾಗ ಈ ಘಟನೆ ಜರುಗಿದೆ.
ಕೊಚ್ಚಿಕೊಂಡು ಹೋಗಿದ್ದ ಬೈಕ್ ಅನ್ನು ಗ್ರಾಮಸ್ಥರು ಪತ್ತೆ ಹಚ್ಚಿ ದಡಕ್ಕೆ ಸೇರಿಸಿದ್ದಾರೆ.