ದೊಡ್ಡಹಳ್ಳದಲ್ಲಿ ಕೊಚ್ಚಿಹೋಗಿದ್ದ ಕುರಿ, ಮೇಕೆ ಮರಿಗಳು ಪತ್ತೆ; ಇದೊಂದು ಮನಕಲಕುವ ದೃಶ್ಯ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಕಳೆದೆರಡು ದಿನಗಳಿಂದ ಸುರಿದ ಭೀಕರ ಮಳೆ ಇಡೀ ಜಿಲ್ಲೆಯನ್ನು ಕಣ್ಣೀರಲ್ಲಿ ಮುಳುಗಿಸಿದೆ. ಒಂದೆಡೆ ಮಳೆಯ ನೀರು ಮನೆಗಳಿಗೆ ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದ್ದರೆ, ಇನ್ನೊಂದೆಡೆ ಪ್ರವಾಹದಲ್ಲಿ ಸಿಲುಕಿ ಕಣ್ಮರೆಯಾದವರ ಪತ್ತೆ ಕಾರ್ಯ ಇನ್ನೂ ನಡೆಯುತ್ತಿದೆ.

ರೈತರು ಬೆಳೆದ ಬೆಳೆಗಳಿಗೂ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಈ ನಡುವೆ ನೀಲಗುಂದ ಗ್ರಾಮದ ದೊಡ್ಡ ಹಳ್ಳದಲ್ಲಿ ಕೊಚ್ಚಿಹೋಗಿದ್ದ ಹಲವು ಕುರಿ, ಮೇಕೆ ಮರಿಗಳು ಹಳ್ಳದ ಬದಿಯಲ್ಲಿ ಪತ್ತೆಯಾಗಿವೆ. ಇದೊಂದು ಮನಕಲಕುವ ದೃಶ್ಯವಾಗಿದ್ದು, ನೋಡುಗರ ಕರುಳು ಚುರುಕು ಎನ್ನಿಸುವಂತಿದೆ.

ಗದಗ ತಾಲೂಕಿನ ಕಲ್ಲೂರು ಗ್ರಾಮದ ಹನುಮಪ್ಪ ಹರಿಜನ ಎಂಬುವರು ತಾವು ಸಾಕಿದ್ದ 200 ಕುರಿಗಳನ್ನು ಮೇಯಿಸುತ್ತ ನೀಲಗುಂದ ವ್ಯಾಪ್ತಿಯ ಜಮೀನುಗಳಿಗೆ ಬಂದಿದ್ದರು. ಸೋಮವಾರ ರಾತ್ರಿ ರಣರೌದ್ರ ಮಳೆ ಸುರಿದ ಹಿನ್ನೆಲೆಯಲ್ಲಿ, ಮಳೆಯ ನೀರು ಜಮೀನಲ್ಲಿಯೂ ಹರಿದು ಬರುತ್ತಿತ್ತು. ಈ ಕಾರಣಕ್ಕೆ ನೀಲಗುಂದದ ಬಳಿ ರಸ್ತೆ ಮಧ್ಯದಲ್ಲಿಯೇ ಹನುಮಪ್ಪ ಕುರಿಗಳನ್ನು ನಿಲ್ಲಿಸಿದ್ದರು.

ಹರಿದುಬಂದ ಮಳೆ ನೀರಿನೊಂದಿಗೆ ಇವುಗಳ ಪೈಕಿ 30ಕ್ಕೂ ಹೆಚ್ಚು ಮರಿಗಳು ಕೊಚ್ಚಿಹೋಗಿದ್ದವು. ಇದೀಗ 17 ಕುರಿ ಮರಿಗಳ ದೇಹ ಹಳ್ಳದ ಬದಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಮುಳಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಒಟ್ಟಿನಲ್ಲಿ, ಮಳೆ ಮನುಷ್ಯರನ್ನಷ್ಟೇ ಅಲ್ಲದೆ, ಮೂಕ ಪ್ರಾಣಿಗಳನ್ನೂ ಬಲಿ ತೆಗೆದುಕೊಳ್ಳತೊಡಗಿದ್ದು, ಆತಂಕ ಉಂಟುಮಾಡಿದೆ.


Spread the love

LEAVE A REPLY

Please enter your comment!
Please enter your name here