ವಿಜಯಸಾಕ್ಷಿ ಸುದ್ದಿ, ಗದಗ
ಮೊಹರಂ ಕೊನೆಯ ದಿನವಾದ ನಿನ್ನೆ ತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ನಡೆದಿದ್ದ ಚಾಕು ಇರಿತದ ಪ್ರಕರಣದಲ್ಲಿ ಶ್ರೀರಾಮ ಸೇನಾ ಕಾರ್ಯಕರ್ತ ಸೇರಿ ಮೂವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ ಮೊಹರಂ ಮೆರವಣಿಗೆ; ಶ್ರೀರಾಮ ಸೇನಾ ಕಾರ್ಯಕರ್ತನಿಂದ ಇಬ್ಬರಿಗೆ ಚಾಕು ಇರಿತ; ಒಬ್ಬ ಗಂಭೀರ
ಈ ಕುರಿತು ಎಸ್ಪಿ ಶಿವಪ್ರಕಾಶ್ ದೇವರಾಜು ಮಾಹಿತಿ ನೀಡಿದ್ದು, ಸೋಮು ಗುಡಿ, ಯಲ್ಲಪ್ಪ ಮಲ್ಲಾಪೂರ ಹಾಗೂ ಯಲ್ಲಪ್ಪನ ಸ್ನೇಹಿತ ಸಲ್ಮಾನ್ ಅಲಿಯಾಸ್ ಸಲೀಂ ಬಡೇಖಾನ್ ಎಂಬುವರನ್ನು ಇರಿತದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.
ಯಲ್ಲಪ್ಪ ಮಲ್ಲಾಪೂರ ಹಾಗೂ ಸ್ನೇಹಿತ ಸಲ್ಮಾನ್ ಸೇರಿ ಮುಸ್ಲಿಂ ಯುವಕರೊಂದಿಗೆ ಜಗಳವಾಡಿದ್ದರು. ಆಗ ತೌಶೀಫ್ ಹಾಗೂ ಮುಷ್ತಾಕ್ ಸೇರಿ ಅನೇಕರು, ಸಲ್ಮಾನ್ ಹಾಗೂ ಯಲ್ಲಪ್ಪನ ಮೇಲೆ ಏರಿಹೋಗಿದ್ದರು ಎನ್ನಲಾಗಿದೆ.
ಇದರಿಂದಾಗಿ ಆಕ್ರೋಶಗೊಂಡ ಸೋಮು ಗುಡಿ, ತೌಶೀಫ್ ಹಾಗೂ ಮುಷ್ತಾಕ್ ಗೆ ಚಾಕುವಿನಿಂದ ಇರಿದಿದ್ದಾನೆ. ತೀವ್ರ ಗಾಯಗೊಂಡ ತೌಶೀಫ್ ನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಜಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ತೌಶೀಫ್ ನ ಆರೋಗ್ಯದ ಬಗ್ಗೆ ವೈದ್ಯರ ಹಾಗೂ ಅವರ ಕುಟುಂಬ ಸದಸ್ಯರು ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು, ಘಟನೆಯ ಮಾಹಿತಿ ಪಡೆಯುತ್ತಿದ್ದೇವೆ ಎಂದು ಎಸ್ಪಿ ಹೇಳಿದ್ದಾರೆ.
ಈ ಘಟನೆ ಕುರಿತು ಯಾರೂ, ಯಾವುದೇ ವದಂತಿ ಹಬ್ಬಿಸಬಾರದು ಎಂದು ಎಚ್ಚರಿಕೆ ನೀಡಿರುವ ಎಸ್ಪಿ ಶಿವಪ್ರಕಾಶ್ ದೇವರಾಜು, ಈ ಬಗ್ಗೆ ನಿಷ್ಪಕ್ಷಪಾತವಾಗಿ ವಿಚಾರಣೆ ನಡೆಸಿ, ಘಟನೆಯಲ್ಲಿ ಭಾಗಿಯಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗವುದು ಎಂದು ಭರವಸೆ ನೀಡಿದ್ದಾರೆ.

ಪೊಲೀಸರ ಸರ್ಪಗಾವಲು
ನಿನ್ನೆ ಸಂಜೆ ನಡೆದ ಘಟನೆಯಿಂದ ಇಡೀ ಗ್ರಾಮದಲ್ಲೀಗ ಆತಂಕದ ವಾತಾವರಣ ನಿರ್ಮಾಣವಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಎರಡು ತುಕಡಿಗಳು, ಪೊಲೀಸ್ ಅಧಿಕಾರಿಗಳು ಸೇರಿದಂತೆ ಪೊಲೀಸರು ಸರ್ಪಗಾವಲು ಹಾಕಿದ್ದಾರೆ. ಗುಂಪು- ಗುಂಪಾಗಿ ಸೇರುವ ಜನರನ್ನು ಪೊಲೀಸರು ಚದುರಿಸುತ್ತಿದ್ದು, ಗುಂಪಾಗಿ ಸೇರದಂತೆ ಎಚ್ಚರಿಕೆ ನೀಡುತ್ತಿದ್ದಾರೆ.
ಆರೋಪಿ ಮನೆ ಗಾಜು ಪುಡಿ ಪುಡಿ
ನಿನ್ನೆ ಸಂಜೆ ಸೋಮು ಗುಡಿ, ತೌಶೀಫ್ ಹಾಗೂ ಮುಷ್ತಾಕ್ ಗೆ ಚಾಕು ಇರಿದ ಘಟನೆಯ ನಂತರ ಉದ್ರಿಕ್ತ ಕುಟುಂಬದ ಸದಸ್ಯರು ಹಾಗೂ ಸಂಬಂಧಿಕರು ಸೋಮು ಗುಡಿ ಮನೆಗೆ ಹೊಕ್ಕು ಕಿಡಕಿ ಗಾಜುಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಹುಡುಗನಿಗೆ ಏನಾದರೂ ಹೆಚ್ಚು ಕಮ್ಮಿಯಾದರೆ ನಾವು ಸುಮ್ಮನಿರಲ್ಲ ಎಂದು ಆಕ್ರೋಶ ಹೊರಹಾಕಿದರು. ಅಷ್ಟರಲ್ಲೇ ಪೊಲೀಸರು ಸ್ಥಳಕ್ಕೆ ಬಂದಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ ಎಂದು ಹೇಳಲಾಗುತ್ತಿದೆ.
