ವಿಜಯಸಾಕ್ಷಿ ಸುದ್ದಿ, ನವಲಗುಂದ:
ಸ್ಥಳೀಯ ಪುರಸಭೆಯಲ್ಲಿ ನಡೆಯುತ್ತಿದ್ದ ಸಾಮಾನ್ಯ ಸಭೆಗೆ ಬಿಜೆಪಿ ಸದಸ್ಯರು ಅಡ್ಡಿ ಪಡಿಸಿ ಯಾವುದೇ ಕಾರಣಕ್ಕೂ ಸಾಮಾನ್ಯ ಸಭೆ ನಡೆಸುವಂತಿಲ್ಲ, ನಮ್ಮ ಬೆಂಬಲದಿಂದ ಚುನಾಯಿತರಾಗಿರುವ ಉಪಾಧ್ಯಕ್ಷರು ರಾಜೀನಾಮೆ ಕೊಡಬೇಕೆಂದು ಏರು ಧ್ವನಿಯಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ಸೋಮವಾರ ನಡೆದಿದೆ.
ಅಧ್ಯಕ್ಷ ಮಂಜುನಾಥ ಜಾಧವ ಈಗಾಗಲೇ ರಾಜೀನಾಮೆ ನೀಡಿದ್ದು ಸಾಮಾನ್ಯ ಸಭೆ ನಡೆಸುವಂತಿಲ್ಲ. ಉಪಾಧ್ಯಕ್ಷೆ ಖೈರುನಬಿ ನಾಶಿಪುಡಿ ರಾಜೀನಾಮೆ ಕೊಡುವಂತೆ ಬಿಜೆಪಿ ಸದಸ್ಯರು ಬಿಗಿ ಪಟ್ಟು ಹಿಡಿದು ಖೈರುನಬಿ ವಿರುದ್ಧ ಹರಿಹಾಯ್ದರು.

ಸಿಟ್ಟಿಗೆದ್ದ ಖೈರುನಬಿ ನಾನು ಕಾಂಗ್ರೆಸ್ ಪಕ್ಷದಿಂದ ಉಪಾಧ್ಯಕ್ಷೆನಾಗಿದ್ದೇನೆ, ಬಿಜೆಪಿ ಸದಸ್ಯರ ಮಾತು ಕೇಳುವ ಅವಶ್ಯಕತೆಯಿಲ್ಲವೆಂದು ಬಿಜೆಪಿ ಸದಸ್ಯ ಮಹಾಂತೇಶ ಕಲಾಲ ವಿರುದ್ಧ ಏರು ಧ್ವನಿಯಲ್ಲಿಯೇ ತರಾಟೆಗೆ ತೆಗೆದುಕೊಂಡರು.

ಸಮುಜಾಯಿಸಿದ ಹಂಗಾಮಿ ಅಧ್ಯಕ್ಷ ಮಂಜು ಜಾಧವ, ನಮ್ಮನ್ನು ಬೆಂಬಲಿಸುವಂತೆ ಯಾವುದೆ ಬಿಜೆಪಿ ಸದಸ್ಯರ ಮನೆಗಾಗಲಿ, ಆ ಪಕ್ಷದ ಹಿರಿಯರ ಮನೆಗಾಗಲಿ ಹೋಗಿರಲಿಲ್ಲ, ನಿಮಗೆ ಜೆಡಿಎಸ್ ಪಕ್ಷವನ್ನು ಹೊರಗಿಡಬೇಕೆಂಬ ಕಾರಣದಿಂದ ಬಾಹ್ಯ ಬೆಂಬಲ ಕೊಟ್ಟಿದ್ದೀರಿ, ನಾವೇನು ನಿಮಗೆ ನಮ್ಮ ಪರವಾಗಿ ಮತ ಚಲಾಯಿಸುವಂತೆ ಹೇಳಿರಲಿಲ್ಲ, ಒಳ ಒಪ್ಪಂದವನ್ನು ಮಾಡಿರಲಿಲ್ಲವೆಂದು ಹೇಳುತ್ತಿದ್ದಂತೆಯೇ ಆಕ್ರೋಶಗೊಂಡ ಬಿಜೆಪಿ ಸದಸ್ಯರು ಪ್ರತಿಭಟನೆಗೆ ಮುಂದಾಗಿ ಸಾಮಾನ್ಯ ಸಭೆ ನಡೆಸದಂತೆ ಬಿಗಿಪಟ್ಟು ಹಿಡಿದಿದ್ದಾರೆ.
17 ಸದಸ್ಯರ ಬೆಂಬಲವಿದ್ದು ಕೋರಂ ಭರ್ತಿಯಾಗಿದೆ. ನಾವು ಸಾಮಾನ್ಯ ಸಭೆಯನ್ನು ನಡೆಸಿಯೇ ತೀರುತ್ತೇವೆ, ಸಭೆಯಲ್ಲಿ ಗದ್ದಲ ಮಾಡುತ್ತಿರುವ ಬಿಜೆಪಿ ಸದಸ್ಯರನ್ನು ಹೋರಹಾಕುವಂತೆ ಕಾಂಗ್ರೆಸ್ ಸದಸ್ಯರು ಮುಖ್ಯಾಧಿಕಾರಿ ಈರಪ್ಪ ಹಸಬಿಯವರೊಂದಿಗೆ ವಾಗ್ವಾದ ಮುಂದುವರೆಸಿದ್ದಾರೆ.
ಸಾಮಾನ್ಯ ಸಭೆಯ ಹಾಜರಾತಿ ಪುಸ್ತಕಕ್ಕೆ ಬಿಜೆಪಿ ಸದಸ್ಯರು ಸಹಿ ಮಾಡದ ಕಾರಣ ಹೊರಹಾಕಬೇಕೆಂದು ಮಾತಿನ ಚಕಮಕಿಯೇ ನಡೆಯುತ್ತಿದ್ದು, ಪಟ್ಟಣದ ಅಭಿವೃದ್ಧಿ ಪರ ಚಿಂತನೆ ಮಾಡದ ಎರಡು ರಾಷ್ಟ್ರೀಯ ಪಕ್ಷದ ಸದಸ್ಯರು ಕುರಿಗಳ ಸಂತೆಯಂತೆ ಜಾತ್ರೆ ಮಾಡುತ್ತಿದ್ದಾರೆ, ಕಳೆದೊಂದು ತಿಂಗಳಿಂದ ಕಚ್ಚಾಟ ಮುಂದುವರೆಸಿರುವುದು ಸಾಮಾನ್ಯ ಪ್ರಜೆಗಳಿಗೆ ತಲೆಬಿಸಿ ಮಾಡಿದ್ದು, ಇಂತವರಿಗೆ ಮುಂದಿನ ದಿನದಲ್ಲಿ ತಕ್ಕಪಾಠ ಕಲಿಸಬೇಕೆಂಬ ಮಾತುಗಳು ಕೇಳಿಬರುತ್ತಿವೆ.