ವಿಜಯಸಾಕ್ಷಿ ಸುದ್ದಿ, ಗದಗ
ಹಾದೀ ಬೀದಿಯಲ್ಲಿ ಹೊಡೆದಾಟ ಮಾಡುವ ಪುಂಡ ಪೋಕರಿಗಳಿಗೆ ಇನ್ಮುಂದೆ ಬಿಸಿ ತಟ್ಟಲಿದೆ. ಗದಗ ಜಿಲ್ಲಾ ಪೊಲೀಸರು, ಇಂತಹ ಪುಂಡಾಟಿಕೆ ಮಾಡುವ ಜನರ ಮೇಲೆ ಕೇಸ್ ಹಾಕಿ ಅವರ ಮೇಲೆ ನಿಗಾ ಇರಿಸಲಿದ್ದಾರೆ.
ಇಂತಹದ್ದೇ ಪ್ರಕರಣವೊಂದು ಮೊನ್ನೆ ರಾಜೀವಗಾಂಧಿ ನಗರದ ಗ್ರಂಥಾಲಯದ ಬಳಿ ಅದೂ ಕೂಗಳತೆಯಲ್ಲಿಯೇ ಪೊಲೀಸ್ ಠಾಣೆ ಇದ್ದರೂ ಅದರ ಅರಿವೇ ಇಲ್ಲದ ಇಬ್ಬರು ರೌಡಿ ಶೀಟರ್ ಸೇರಿದಂತೆ ಏಳು ಜನ ಯುವಕರು, ಪರಸ್ಪರ ಹೊಡೆದಾಟ, ಚೀರಾಟ ಮಾಡುತ್ತಾ, ಸಾರ್ವಜನಿಕರಿಗೆ ತೊಂದರೆ ಮಾಡಿದ ಆರೋಪದಲ್ಲಿ ಬಡಾವಣೆ ಪೊಲೀಸರು ಕೇಸ್ ಬುಕ್ ಮಾಡಿದ್ದಾರೆ.
ರಾಜೀವ್ ಗಾಂಧಿ ನಗರದ ನಿವಾಸಿಗಳಾದ ಹನಮಂತ ಫಕ್ಕೀರಪ್ಪ ಚಿಮ್ಮಲಗಿ, ಶಶಿಕುಮಾರ್ ಮಾರುತೆಪ್ಪ ಹಕ್ಕರಕಿ, ಕಿಶೋರಕುಮಾರ್ ವಿಠ್ಠಲರಾವ್ ಶಿಂಧೆ, ಅಶೋಕ್ ಹುಲಗೆಪ್ಪ ಚಿಮ್ಮಲಗಿ, ಭರತ್ ಗಿರೀಶ್ ಪೂಜಾರ್, ಸೆಟ್ಲಮೆಂಟ್ ಏರಿಯಾದ ಯುವರಾಜ್ ಯಲ್ಲಪ್ಪ ಕೊರವರ್ ಹಾಗೂ ಅನಿಲ ಹನಮಂತಪ್ಪ ಮುಟಗಾರ ಎಂಬುವವರೇ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಹೊಡೆದಾಡಿಕೊಳ್ಳುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಕುರಿತು ಬಡಾವಣೆ ಪೊಲೀಸ್ ಠಾಣೆ ಪಿಎಸ್ಐ ಉಮಾ ವಗ್ಗರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.