ವಿಜಯಸಾಕ್ಷಿ ಸುದ್ದಿ, ಗದಗ
ಶ್ರೀರಾಮ ಸೇನೆಯ ರಾಜ್ಯ ಸಂಚಾಲಕರಾದ ಪ್ರಮೋದ್ ಮುತಾಲಿಕ್ ಅವರ ಗದಗ ಜಿಲ್ಲೆಯ ಪ್ರವೇಶವನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಗಳಾದ ವೈಶಾಲಿ ಎಮ್ ಎಲ್ ಅವರು, ಕಲಂ ೧೪೪ ರ ಅಡಿ ಗುರುವಾರ ಪ್ರತಿಬಂಧಕಾಜ್ಞೆ ಜಾರಿಗೊಳಿಸಿದ್ದಾರೆ.
ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ಮಂಗಳವಾರ ನಡೆದ ಗಲಾಟೆ ಪ್ರಕರಣದಲ್ಲಿ
ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ಸೋಮಪ್ಪ ಹನುಮಪ್ಪ ಗುಡಿ ಎಂಬ ವ್ಯಕ್ತಿ ಹಾಗೂ ಆತನ ಸಂಬಂಧಿಗಳನ್ನು ಭೇಟಿಯಾಗಲು ಪ್ರಮೋದ್ ಮುತಾಲಿಕ್ ಅವರು ಶುಕ್ರವಾರ ಮಲ್ಲಸಮುದ್ರ ಗ್ರಾಮಕ್ಕೆ ಹಾಗೂ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಹೀಗಾಗಿ ಈ ಸಂದರ್ಭದಲ್ಲಿ ಸಹಜವಾಗಿ ನಗರದಲ್ಲಿ ಹಿಂದೂ ಸಂಘಟನೆಗಳು ಕಾನೂನು ಸುವ್ಯವಸ್ಥೆಗೆ ಭಂಗ ತರುವ ಸಾಧ್ಯತೆಗಳಿರುವುದರಿಂದ ಶಾಂತಿ, ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ದಂಡ ಪ್ರಕ್ರಿಯಾ ಸಂಹಿತೆ ೧೯೭೩ರ ಕಲಂ ೧೪೪ ರಡಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.
ಈ ಗಾಗಲೇ ಮಲ್ಲಸಮುದ್ರ ಗ್ರಾಮದಲ್ಲಿ ತ್ವೇಷಮಯ ಹಾಗೂ ಪ್ರಕ್ಷುಬ್ಧ ವಾತಾವರಣ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಮೋದ ಮುತಾಲಿಕ್ ನಗರ ಪ್ರವೇಶ ಮಾಡಿದಾಗ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು ಈಗಾಗಲೇ ಆದೇಶ ನೀಡಲಾಗಿದ್ದು, ಶುಕ್ರವಾರ ಬೆಳಿಗ್ಗೆ ೭ ಗಂಟೆಯಿಂದ ಭಾನುವಾರ ಮಧ್ಯರಾತ್ರಿ ೧೨ ಗಂಟೆಯವರೆಗೆ ಈ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾ ದಂಡಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.
ಈ ಆದೇಶವನ್ನು ಉಲ್ಲಂಘಿಸಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಶ್ರೀ ರಾಮ ಸೇನೆ ಖಂಡನೆ
ಶ್ರೀ ರಾಮ ಸೇನೆಯ ರಾಜ್ಯ ಸಂಚಾಲಕರಾದ ಪ್ರಮೋದ್ ಮುತಾಲಿಕ್ ಅವರ ಗದಗ ಜಿಲ್ಲಾ ಪ್ರವೇಶಕ್ಕೆ ಸರಕಾರ ನಿರ್ಬಂಧ ವಿಧಿಸಿದ್ದನ್ನು ಶ್ರೀ ರಾಮ ಸೇನಾದ ಉತ್ತರ ಕರ್ನಾಟಕ ಉಸ್ತುವಾರಿ ರಾಜು ಖಾನಪ್ಪನವರ ಖಂಡಿಸಿದ್ದಾರೆ. ಸರಕಾರ ಹಿಂದೂಗಳ ಭಾವನೆಗಳ ಜೊತೆಗೆ ಚೆಲ್ಲಾಟವಾಡುತ್ತಿದ್ದು, ಮುಂದಿನ ದಿನಗಳಲ್ಲಿ ತಕ್ಕ ಬೆಲೆ ತೆರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.