‘ನಮ್ಮ ನಗರ, ಸ್ವಚ್ಛ ನಗರಕ್ಕೆ ಎಲ್ಲರ ಸಂಕಲ್ಪ’

0
Spread the love

ಘನ ತ್ಯಾಜ್ಯ, ಕಟ್ಟಡ ನಿರ್ಮಾಣ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಕುರಿತ ಪರಿಶೀಲನಾ ಸಭೆ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

Advertisement

ನಮ್ಮ ನಗರ ಸ್ವಚ್ಛ ನಗರ ಮಾಡಲು ಎಲ್ಲರೂ ಸಂಕಲ್ಪ ಮಾಡಬೇಕು. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಶಾಲಾ ಕಾಲೇಜು ಸಂಸ್ಥೆಗಳನ್ನು ಹಸಿರು ಆವರಣ (ಗ್ರೀನ್ ಕ್ಯಾಂಪಸ್) ಮಾಡಲು ಮುಂದಾಗಬೇಕಾಗಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ರಾಜ್ಯಮಟ್ಟದ ಸಮಿತಿ ಅಧ್ಯಕ್ಷ ನಿವೃತ್ತ ನ್ಯಾ. ಸುಭಾಸ ಆಡಿ ಅವರು ಹೇಳಿದರು.

ಅವರು ಸೋಮವಾರ ಸರ್ಕ್ಯೂಟ್ ಹೌಸ್‌ನಲ್ಲಿ ಘನ ತ್ಯಾಜ್ಯ, ಕಟ್ಟಡ ನಿರ್ಮಾಣ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳು ೨೦೧೬ರ ನಿಯಮಾವಳಿಗಳನ್ನು ಅನುಷ್ಠಾನಗೊಳಿಸುವ ಕುರಿತ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನಿಲ್ದಾಣಗಳಲ್ಲಿ ಹಸಿ ಕಸ, ಒಣ ಕಸ ಹಾಕಲು ಕಸದ ಡಬ್ಬಿಗಳನ್ನು ಅಳವಡಿಸಬೇಕು. ಜಿಲ್ಲಾ ಪಂಚಾಯತಿಯ ಐಇಸಿ ಕಾರ್ಯಕ್ರಮವನ್ನು ಸಮರ್ಪಕವಾಗಿ ಕಾರ್ಯಗತಗೊಳಿಸಲು ಮುಂದಾಗಬೇಕಾಗಿದೆ.

ರೈಲ್ವೆ ಬೋಗಿ ಹಾಗೂ ಬಸ್‌ಗಳಲ್ಲಿ ಕಸದ ಡಬ್ಬಗಳನ್ನು ಅಳವಡಿಸಬೇಕು. ಪ್ರಯಾಣಿಕರು ಕಸವನ್ನು ಕಡ್ಡಾಯವಾಗಿ ಡಬ್ಬಿಗಳಲ್ಲಿ ಹಾಕುವಂತೆ ನಿರ್ವಾಹಕರು ನಿರ್ದೇಶನ ನೀಡಬೇಕು. ಕಸವನ್ನು ಬಸ್ಸಿನ ಕಸದ ಡಬ್ಬಗಳಲ್ಲಿ ಹಾಕದಿದ್ದಲ್ಲಿ ನಿರ್ವಾಹಕರು ದಂಡ ವಿಧಿಸಬಹುದು. ಅಲ್ಲದೇ ಕಿಟಕಿಗಳಲ್ಲಿ ಉಗುಳುವುದನ್ನು ನಿಷೇಧೀಸಬೇಕು. ಎಲ್ಲ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಬೇಕಾಗಿದೆ. ವಾರ್ಡ್ ಸದಸ್ಯರು ತಮ್ಮ ವಾರ್ಡ್ ಗಳನ್ನು ಸ್ವಚ್ಛವಾಗಿಡಲು ಮುಂದಾಗಬೇಕು. ಆ ನಿಟ್ಟಿನಲ್ಲಿ ಮುನ್ನಡೆದಾಗ ಮಾತ್ರ ಇಂದೋರ್ ನಗರದಂತೆ ನಮ್ಮ ಅವಳಿ ನಗರಗಳು ಸ್ವಚ್ಛಂದವಾಗಲಿವೆ ಎಂದು ತಿಳಿಸಿದರು.

ಆಸ್ಪತ್ರೆ, ಬಸ್ ನಿಲ್ದಾಣ, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಶಾಲಾ ಕಾಲೇಜು, ಸಂಸ್ಥೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ನಮ್ಮ ನಗರದ ತ್ಯಾಜ್ಯ ನಿರ್ವಹಣೆ ನಮ್ಮ ಕರ್ತವ್ಯ ಎಂಬ ಧ್ಯೇಯವಾಕ್ಯದೊಂದಿಗೆ ಎಲ್ಲರೂ ತ್ಯಾಜ್ಯ ನಿರ್ವಹಣೆಗೆ ಆದ್ಯತೆ ನೀಡಬೇಕಾಗಿದೆ ಎಂದರು.

ಉಪಮೇಯರ್ ಉಮಾ ಮುಕುಂದ ಮಾತನಾಡಿ, ವಾರ್ಡ್ಗಳಲ್ಲಿ ರಂಗೋಲಿ ಬಿಡಿಸಿ, ಕಸ ಹಾಕದಂತೆ ಜಾಗೃತಿ ಮೂಡಿಸಲಾಗಿದೆ. ಕಸ ಹಾಕಿದವರಿಗೆ ದಂಡ ವಿಧಿಸಲಾಗುವುದು. ನಗರವನ್ನು ಸ್ವಚ್ಛವಾಗಿಸಲು ಪಾಲಿಕೆ ಅಧಿಕಾರಿಗಳು ಮತ್ತು ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ. ಈ ಹಿಂದೆ ಫುಟಪಾತ ತೆರವುಗೊಳಿಸಿದರೂ ಸಹ ಪುನಃ ಮೊದಲಿನ ಸ್ಥಿತಿಯಲ್ಲಿ ಅಂಗಡಿಗಳನ್ನು ತೆರೆಯಲಾಗಿದೆ ಎಂದು ದೂರಿದರು.

ನೈರುತ್ಯ ರೈಲ್ವೆಯ ಸಹಾಯಕ ಮುಖ್ಯ ವ್ಯವಸ್ಥಾಪಕ ಪಿ.ಕೆ. ಮಿಶ್ರಾ, ಹಿರಿಯ ಪರಿಸರ ಅಧಿಕಾರಿ ಸಯ್ಯದ್ ಖಾಜಿ, ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಬಿ.ಎಸ್. ಮೂಗನೂರಮಠ, ಪರಿಸರ ಅಧಿಕಾರಿ ಶೋಭಾ ಪೋಳ, ಬಿಆರ್ ಟಿಸಿ ಸಂಸ್ಥೆಯ ಸಹಾಯಕ ಮುಖ್ಯ ಇಂಜಿನಿಯರ್ ಮುಸ್ತಾಕ ಬಿಜಾಪುರಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ವಿಶ್ವಜ್ಞ, ಎಸ್.ಬಿ. ಚನ್ನಪ್ಪಗೌಡರ, ಟಿ.ಎಲ್. ಶ್ರೀನಾಥ್, ಕಿರಣಕುಮಾರ ಬಸಾಪುರ, ಪ್ರವೀಣ, ಮುಖ್ಯ ಕಾಮಗಾರಿ ಅಭಿಯಂತರಾದ ಪ್ರಕಾಶ ಕಬಾಡಿ, ಸೋಮಶೇಖರ ಹಿರೇಗೌಡ್ರ, ಎಸ್.ಆರ್. ಪಾಟೀಲ, ಆನಂದ ಕಲ್ಲೋಳಿಕರ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಿವಿಧ ವಲಯಗಳ ಆಯುಕ್ತರು, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸೇರಿದಂತೆ ವಿವಿಧ ಸಂಸ್ಥೆಗಳ ಅಧಿಕಾರಿಗಳು ಭಾಗವಹಿಸಿದ್ದರು.

30 ದಿನಗಳಲ್ಲಿ ಬ್ಯಾನರ್, ಫ್ಲಕ್ಸ್ ಗಳನ್ನು ತೆರವುಗೊಳಿಸಲಾಗುವುದು. ಮಾರುಕಟ್ಟೆಯನ್ನು ದಿನಕ್ಕೆ ಎರಡು ಬಾರಿ ಸ್ವಚ್ಛಗೊಳಿಸಲಾಗುವುದು. ಕಸ ಸಂಗ್ರಹಣೆ ಮಾಡಲು ಹೊರಗುತ್ತಿಗೆ ಆಧಾರದ ಮೇಲೆ ಟ್ರ‍್ಯಾಕ್ಟರ್‌ಗಳನ್ನು ತೆಗೆದುಕೊಳ್ಳಲಾಗುವುದು. ಡಿಜಿಟಲ್ ಬೋರ್ಡ್ ಮೂಲಕ ಜಾಹೀರಾತು ಬಿತ್ತರಿಸಲು ಕ್ರಮ ವಹಿಸಲಾಗುವುದು.

ಶಂಕರಾನಂದ ಬನಶಂಕರಿ, ಹೆಚ್ಚುವರಿ ಆಯುಕ್ತ, ಹು-ಧಾ ಮಹಾನಗರ ಪಾಲಿಕೆ

Spread the love

LEAVE A REPLY

Please enter your comment!
Please enter your name here