ಉಸ್ತುವಾರಿ ಸಚಿವ ಬಿ.ಸಿ.ಪಾಟೀಲರಿಂದ ಅತಿವೃಷ್ಠಿ ಹಾನಿ ಪ್ರದೇಶಗಳಿಗೆ ಭೇಟಿ, ಪರಿಶೀಲನೆ
ವಿಜಯಸಾಕ್ಷಿ ಸುದ್ದಿ, ಗದಗ
ಜಿಲ್ಲೆಯಲ್ಲಿ ಅತಿವೃಷ್ಠಿ ಹಾಗೂ ಪ್ರವಾಹದಿಂದ ಅಧಿಕ ಪ್ರಮಾಣದ ಬೆಳೆ, ಮನೆ, ಸರ್ಕಾರಿ ಆಸ್ತಿ ಹಾನಿಗೊಳಗಾಗಿದ್ದು ಹಾನಿಯ ಪ್ರಮಾಣವನ್ನು 811.26 ಕೋಟಿ ಎಂದು ಅಂದಾಜಿಸಲಾಗಿದೆ. ಹಾನಿಯ ಸಮೀಕ್ಷಾ ಕಾರ್ಯ ಇನ್ನೂ ಪ್ರಗತಿಯಲ್ಲಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಅವರು ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ರವಿವಾರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ ಹಾಗೂ ಅತಿವೃಷ್ಠಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ಸಂತ್ರಸ್ಥ ಕುಟುಂಬಗಳಿಗೆ ಸರ್ಕಾರದ ಪರಿಹಾರ ಸೌಲಭ್ಯ ದೊರಿಕಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಕಳೆದ ತಿಂಗಳು ಜಿಲ್ಲೆಗೆ ಆಗಮಿಸಿದಾಗ ಜಿಲ್ಲೆಯಲ್ಲಿ 93 ಸಾವರಿ ಹೆಕ್ಟೇರ ಕೃಷಿ ಜಮೀನಿನಲ್ಲಿ ಬೆಳೆದ ಬೆಳೆ ಹಾನಿಯಾಗಿದೆ ಎಂದು ವರದಿಯಾಗಿತ್ತು. ಇದರಲ್ಲಿ 76 ಸಾವಿರ ಹೆಕ್ಟೇರ ಪ್ರದೇಶದ ಬೆಳೆಗಳ ವಿವರವನ್ನು ಪರಿಹಾರ ತಂತ್ರಾಂಶದಲ್ಲಿ ನೋಂದಾಯಿಸಲಾಗಿದೆ.
ಸೆಪ್ಟೆಂಬರ 12ರ ನಂತರ ಪರಿಹಾರ ಮೊತ್ತವನ್ನು ಅರ್ಹರಿಗೆ ನೀಡಲು ಮುಖ್ಯ ಮಂತ್ರಿಗಳು ಸೂಚಿಸಿದ್ದಾರೆ ಎಂದರು. ಜಿಲ್ಲೆಯಲ್ಲಿ ಈ ವರೆಗೆ 7 ಮಾನವ ಜೀವ ಹಾನಿ ಸಂಭವಿಸಿದ್ದು ಇದರಲ್ಲಿ 4 ಕುಟುಂಬಗಳಿಗೆ ತಲಾ 5 ಲಕ್ಷದಂತೆ ಪರಿಹಾರ ವಿತರಿಸಲಾಗಿದೆ. ಜೊತೆಗೆ ಇಬ್ಬರು ಕರ್ತವ್ಯ ನಿರತ ಪೋಲಿಸರ ಪೇದೆಗಳ ಜೀವ ಹಾನಿ ಸಂಭವಿಸಿದ್ದು ಆ ಕುಟುಂಬಗಳಿಗೆ ಶೀಘ್ರವೇ ಸರ್ಕಾರದಿಂದ ದೊರೆಯುವ ಪರಿಹಾರ ಮೊತ್ತವನ್ನು ದೊರಕಿಸಲು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು.
ಒಟ್ಟು 59 ಜಾನುವಾರುಗಳ ಜೀವಹಾನಿಯಾಗಿದ್ದು, 1601 ಹಾನಿಯಾದ ಮನೆಗಳ ಪೈಕಿ 655 ಮನೆಗಳಿಗೆ ಮಾರ್ಗಸೂಚಿಗಳನ್ವಯ ಪರಿಹಾರ ನೀಡಲಾಗಿದೆ. ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ, ಲೋಕೊಪಯೋಗಿ ಇಲಾಖೆ ರಸ್ತೆಗಳು ಅಧಿಕ ಹಾನಿಗೊಳಗಾಗಿದ್ದು ಜೊತೆಗೆ ಕೆರೆಗಳು ಸಹ ಹಾನಿಗೊಳಗಾಗಿವೆ. ಹಾನಿಯಾದ ಬೆಳೆ, ಮನೆಗಳಿಗೆ ಸರ್ಕಾರದ ನೆರವನ್ನು ಪಕ್ಷಪಾತ ಮಾಡದೆ ವಿತರಣೆಗೆ ತಿಳಿಸಲಾಗಿದೆ ಎಂದರು.
ಕೃಷಿ ಹಾಗೂ ತೋಟಗಾರಿಕೆ ಪ್ರದೇಶಗಳ ಹಾನಿ ಪ್ರಮಾಣ ಅಪಾರವಾಗಿದ್ದು ಈ ಕುರಿತು ಸಮೀಕ್ಷಾ ಪ್ರಗತಿಯಲ್ಲಿದೆ. ರಾಜ್ಯ ಮತ್ತು ಜಿಲ್ಲಾ ಮುಖ್ಯ ರಸ್ತೆಗಳು ಸೇರಿ 612 ಕೀ.ಮಿ. ರಸ್ತೆ ಹಾನಿಗೊಳಗಾಗಿದ್ದು 96 ಕೋಟಿ ಹಾನಿ ಪ್ರಮಾಣ ಅಂದಾಜಿಸಲಾಗಿದೆ. ಅದರಂತೆ 94 ಸೇತುವೆಗಳು ಹಾನಿಯಾಗಿದದ 34 ಕೋಟಿ ನಷ್ಟವಾಗಿದೆ. ಕುಡಿಯುವ ನೀರಿನ ಹಾನಿ ಪ್ರಮಾಣ 26 ಲಕ್ಷ ಎಂದು ಅಂದಾಜಿಸಲಾಗಿದೆ.
ಸಣ್ಣ ನೀರಾವರಿ ಇಲಾಖೆಯ 5 ಕೆರೆಗಳು ಹಾನಿಗಿಡಾಗಿದ್ದು ಅಂದಾಜು 1 ಕೋಟಿ ರೂ. ಹಾನಿಯಾಗಿದೆ ಎಂದು ವರದಿಯಾಗಿದೆ. 241 ವಿದ್ಯುತ್ ಕಂಬಗಳ ಹಾನಿಯ ಪ್ರಮಾಣ 28 ಲಕ್ಷ, ಪ್ರಾಥಮಿಕ ಶಾಲಾ ಕೊಠಡಿಗಳು 174 ಹಾನಿಯಾಗಿದ್ದು 5.6 ಕೋಟಿ ರೂ ಹಾಗೂ 122 ಅಂಗನವಾಡಿ ಕೊಠಡಿಗಳು ಹಾನಿಯಾಗಿದ್ದು 2.44 ಕೋಟಿ ರೂ. ಹಾನಿಯಾದ ಬಗ್ಗೆ ಈವರೆಗೆ ವರದಿಯಾಗಿದ್ದು ಅಧಿಕಾರಿಗಳು ಸಂತ್ರಸ್ಥರಿಗೆ ತಕ್ಷಣವೇ ಸ್ಪಂದಿಸುವ ಕಾರ್ಯ ಮಾಡಬೇಕು. ನಿಖರ ಹಾನಿಯ ಪ್ರಮಾಣ ಅಂದಾಜಿಸಿ ಪರಿಹಾರ ಕಾರ್ಯ ಚುರುಕುಗೊಳಿಸಲು ತಿಳಿಸಲಾಗಿದೆ ಎಂದು ಸಚಿವ ಬಿ.ಸಿ.ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ ಸದಸ್ಯ ಎಸ್.ವಿ.ಸಂಕನೂರ, ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿದ್ದಪ್ಪ ಪಲ್ಲೇದ, ಜಿಲ್ಲಾಧಿಕಾರಿ ವೈಶಾಲಿ. ಎಂ.ಎಲ್, ಜಿ.ಪಂ. ಸಿ.ಇ.ಓ. ಡಾ.ಸುಶೀಲಾ ಬಿ, ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಉಪವಿಭಾಗಾಧಿಕಾರಿ ಅನ್ನಪೂರ್ಣ, ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಕೆ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ತದನಂತರ ಅತಿವೃಷ್ಠಿ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವ ಬಿ.ಸಿ.ಪಾಟೀಲ, ಮೊದಲಿಗೆ ಕುರ್ತಕೋಟಿಯಲ್ಲಿ ಹಳ್ಳದ ನೀರಿನಿಂದ ಹಾನಿಗೊಳಗಾದ ಸೇತುವೆ, ರಸ್ತೆ ವೀಕ್ಷಿಸಿದರು. ನಂತರ ಅತಿಯಾದ ಮಳೆಯಿಂದಾಗಿ ಹಾನಿಗೊಳಗಾದ ಶೇಂಗಾ ಬೆಳೆದ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಂತೂರ-ಬೆಂತೂರ ಗ್ರಾಮದಲ್ಲಿ ಹಳ್ಳದ ನೀರು ಜಮೀನುಗಳಿಗೆ ನುಗ್ಗಿ ಹಾನಿಯಾದ ಬಗ್ಗೆ ಪರಿಶೀಲನೆ ನಡೆಸಿದ ಅವರು ಕಳಸಾಪುರದಲ್ಲಿ ಪಂಚಾಯತರಾಜ್ ಇಲಾಖೆಯ ಹಾನಿಗೊಳಗಾದ ರಸ್ತೆಯನ್ನು ವೀಕ್ಷಿಸಿದರು. ನಾಗಾವಿಯಲ್ಲಿ ಅತಿಯಾದ ಮಳೆಯಿಂದ ರಸ್ತೆ ಕೊಚ್ಚಿ ಹೋಗಿರುವದನ್ನು ಪರಿಶೀಲಿನೆ ನಡೆಸಿದರು. ಗದಗ ನಗರದ ದೋಬಿ ಘಾಟನ ಸೇತುವೆ ಹಾಗೂ ಮಕಾನ ಗಲ್ಲಿಯಲ್ಲಿ ಹಾನಿಯಾದ ಮನೆಗಳನ್ನು ವೀಕ್ಷಿಸಿದರು. ನಂತರ ಬೆಟಗೇರಿಯ ವಾರ್ಡ ನಂ.3 ಬಣ್ಣದ ನಗರಕ್ಕೆ ಭೇಟಿ ನೀಡಿ ಅಗತ್ಯದ ಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.