ನೀರು ಕೊಡಿ……ಇಲ್ಲವೇ ಅಧಿಕಾರ ಬಿಡಿ! ನಗರಸಭೆ ವಿರುದ್ಧ ಸಾರ್ವಜನಿಕರ ಪ್ರತಿಭಟನೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಸಾರ್ವಜನಿಕರಿಗೆ ಕುಡಿಯುವ ನೀರಿನ ಪೂರೈಕೆಗಾಗಿ ಮನವಿ ಸಲ್ಲಿಸಿದರೂ ಯಾರೂ ಇತ್ತ ಗಮನ ಹರಿಸದೇ ಇರುವುರಿಂದ ಆಕ್ರೋಶಗೊಂಡ ಬೆಟಗೇರಿ ೫ನೇ ವಾರ್ಡ್‌ನ ಸದಸ್ಯೆ ಲಕ್ಷ್ಮೀ ಖಾಕಿ ಅವರ ವಿರುದ್ಧ ಅದೇ ವಾರ್ಡಿನ ಸಾರ್ವಜನಿಕರು ಮಂಗಳವಾರ ಖಾಲಿ ಕೊಡ ಹಿಡಿದು, ಭಿಕ್ಷಾಟನೆ ಮಾಡುವ ಮೂಲಕ ಪ್ರತಿಭಟಿಸಿದರು.

ಹು-ಧಾ ನೀರು ಸರಬರಾಜು ವಿಭಾಗದ ಪಾಲಿಕೆಯ ಗುತ್ತಿಗೆ ಕಾರ್ಮಿಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯಿಂದ ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ವಾರಕ್ಕೊಮ್ಮೆ ಬರುತ್ತಿದ್ದ ನೀರು ಇಂದು ತಿಂಗಳಿಗೊಮ್ಮೆ ಬರುವಂತಾಗಿದೆ. ಸಮಸ್ಯೆಯ ಗಂಭೀರತೆ ಅರಿತು ಅದನ್ನು ನಿವಾರಿಸಬೇಕಾದ ನಗರಸಭೆ ಅಧಿಕಾರಿಗಳು ಹಾಗೂ ರಾಜ್ಯ ಸರಕಾರ ಕಣ್ಣುಮುಚ್ಚಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ನೀರು ಸರಬರಾಜು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಿ, ಸಮಯಕ್ಕೆ ಸರಿಯಾಗಿ ನೀರು ಸರಬರಾಜು ಆಗುವಂತೆ ನೋಡಿಕೊಳ್ಳಬೇಕು. ಇಲ್ಲದೇ ಹೋದಲ್ಲಿ ಮತ್ತೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಕುಡಿಯುವ ನೀರು ಪೂರೈಸುವಲ್ಲಿ ನಗರಸಭೆ ಸಂಪೂರ್ಣ ವಿಫಲವಾಗಿದ್ದು, ಸರ್ಕಾರ ಆಡಳಿತ ಮಂಡಳಿಯನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದರು. ರಸ್ತೆ ತಡೆ ಮಾಡಲು ಅಡ್ಡಿಪಡಿಸಿದ ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸಿದ ನಗರಸಭೆ ಮಾಜಿ ಸದಸ್ಯ ಮಂಜುನಾಥ ಮುಳಗುಂದ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವುದು ಸರಿಯಲ್ಲ. ಪೊಲೀಸರು ಸಚಿವರು ಹೇಳಿದಂತೆ ಕೇಳುವ ಕೈಗೊಂಬೆಗಳಾಗಿದ್ದಾರೆ ಎಂದು ಟೀಕಿಸಿದರು.

ವಾಹನ ಸಂಚಾರಕ್ಕೆ ಅಡಚಣೆ

ಲಕ್ಷ್ಮೀಸಿಂಗನಕೆರಿ ಹಾಗೂ ಜನ್ನತ್‌ನಗರಕ್ಕೆ ಕುಡಿಯಲು ನೀರು ಸರಬರಾಜು ಮಾಡುವವರೆಗೂ ರಸ್ತೆ ತಡೆ ನಡೆಸುವುದಾಗಿ ಪ್ರತಿಭಟನಾಕಾರರು ಪಟ್ಟು ಹಿಡಿದರು. ಸಾರ್ವಜನಿಕರು ಗದಗ-ರೋಣ ರಸ್ತೆಯ ಮೇಲೆ ಕುಳಿತು ರಸ್ತೆ ತಡೆ ಮಾಡಿದ್ದರಿಂದ ರಸ್ತೆ ಸಂಚಾರಕ್ಕೆ ತಡೆ ಉಂಟಾಯಿತು. ಅದರಿಂದಾಗಿ ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ನೂರಾರು ವಾಹನಗಳು ಕಾಯ್ದು ನಿಂತವು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಂಚಾರ ಹಾಗೂ ಬೆಟಗೇರಿ ಠಾಣೆಯ ಪೊಲೀಸರು ಪ್ರತಿಭಟನಾಕಾರರನ್ನು ಮನವೊಲಿಸಲು ಪ್ರಯತ್ನಿಸಿದರು. ಅದಕ್ಕೂ ಸ್ಪಂದಿಸದ ಪ್ರತಿಭಟನಾಕಾರರು, ನೀರು ಬಿಡುವವರೆಗೂ ರಸ್ತೆತಡೆ ಮುಂದುವರಿಸುವುದಾಗಿ ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಕೆಲ ಕಾಲ ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು.

ಈ ಸಂದರ್ಭದಲ್ಲಿ ಕರ್ನಾಟಕದ ರಕ್ಷಣಾ ವೇದಿಕೆಯ ಹನಮಂತಪ್ಪ ಅಬ್ಬಿಗೇರಿ ಹಾಗೂ ನಗರಸಭೆ ಮಾಜಿ ಅಧ್ಯಕ್ಷರಾದ ಪೀರಸಾಬ ಕೌತಾಳ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ನೀಡಿದರು.

ಸೋಮನಾಥ ಬಿದರೂರ, ರಂಗಪ್ಪ ನಾರಾಯಣಕಿ, ಸುಮಾನಂದ ಶಾವಿ, ಮುತ್ತಪ್ಪ ಮೆಳಾ, ಗೋವಿಂದ ಚುಂಚಾ, ರಮೇಶ ತಳವಾರ, ವಿಜಯಲಕ್ಷ್ಮೀ ಗಟ್ಟಿ, ಬಸವ್ವ ಕೋಣಿ, ಶಂಕ್ರಮ್ಮ ಬಿದರುರ, ಸುಮಿತ್ರ ಮೇಳಾ, ಜ್ಯೋತಿ ಇಂಡಿ, ಬೂದಪ್ಪ ಮ್ಯಾಳ, ಮಂಜು ಕೋಣಿ, ಪಾಂಡು ಕೋಣಿ, ಸುಭಾಸ ಬಿದರೂರ, ಮಂಜುನಾಥ ಗೋಟೂರ, ಕವಿತಾ ಗೋಟೂರ, ಸವಿತಾ ಮ್ಯಾಳ, ನಾಜೀರಾ ಮುಲ್ಲಾ, ಶಿವಾನಂದ ಶ್ಯಾವಿ, ರಮೇಶ ಗೌಡರ, ವೆಂಕಟೇಶ ಚುಂಚಾ, ಮಂಜುನಾಥ ಹಾದಿಮನಿ, ರಾಜು ಹಾದಿಮನಿ ಮುಂತಾದವರು ಇದ್ದರು.

ಕಳೆದ ೩ ತಿಂಗಳಿಂದ ಕುಡಿಯಲು ನೀರು ಸಿಗದೇ ಸಂಕಷ್ಟವಾಗಿದೆ. ಈ ಹಿಂದೆ ಸುರಿದ ಮಳೆಗೆ ಮನೆಯ ಕಾಳು, ದವಸ ಧಾನ್ಯ, ಮನೆ ವಸ್ತುಗಳು ಸಂಪೂರ್ಣ ನಾಶವಾಗಿವೆ. ಆದರೂ ಕೂಡ ಯಾವ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ಇತ್ತ ತಲೆ ಹಾಕಿಲ್ಲ. ನಗರಸಭೆಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಗರಸಭೆಯಲ್ಲಿ ಹಣವಿಲ್ಲವೆಂದು ಅಧಿಕಾರಿಗಳು ಹೇಳುತ್ತಿದ್ದಾರೆ. ನಗರಸಭೆಯಲ್ಲಿ ಕಾಮಗಾರಿ ಹೆಸರಿನಲ್ಲಿ ಹಣ ಲೂಟಿಯಾಗುತ್ತದೆ. ಹೀಗಾಗಿ ನಾವು ಕುಡಿವ ನೀರಿಗಾಗಿ ಭಿಕ್ಷಾಟನೆ ಮಾಡುವ ಮೂಲಕ ನಗರಸಭೆಗೆ ಹಣ ಕೂಡಿಸಿ ಕೊಡುತ್ತಿದ್ದೇವೆ.

ಮಂಜುನಾಥ್ ಮುಳಗುಂದ, ನಗರಸಭೆ ಮಾಜಿ ಸದಸ್ಯ

ಕುಡಿಯುವ ನೀರಿಗಾಗಿ ನಗರಸಭೆಗೆ ಮುಂದೆ ಸಾಕಷ್ಟು ಬಾರಿ ಪ್ರತಿಭಟನೆ ಮಾಡಲಾಗಿದೆ. ಆದರೂ ನಗರಸಭೆ ಅಧಿಕಾರಿಗಳು ಜನಪ್ರತಿನಿಧಿಗಳು ಕ್ಯಾರೆ ಅಂದಿಲ್ಲ. ಕೂಡಲೇ ಸಮಯಕ್ಕೆ ಸರಿಯಾಗಿ ನೀರು ಸರಬರಾಜು ಆಗುವಂತೆ ನೋಡಿಕೊಳ್ಳಬೇಕು. ಇಲ್ಲದೇ ಹೋದಲ್ಲಿ ಮತ್ತೆ ಪ್ರತಿಭಟನೆ ಮಾಡಲಾಗುವುದು.

ಜಯಮ್ಮ, ಸ್ಥಳೀಯ ಮಹಿಳೆ

Spread the love

LEAVE A REPLY

Please enter your comment!
Please enter your name here