ವಿಜಯಸಾಕ್ಷಿ ಸುದ್ದಿ, ನವಲಗುಂದ:
ಸ್ಥಳೀಯ ವಿಧಾನಸಭಾ ಕ್ಷೇತ್ರದಲ್ಲಿ ಜವಳಿ ಪಾರ್ಕ ನಿರ್ಮಾಣ ಮಾಡಲು ಸರ್ಕಾರದಿಂದ ಅನುಮತಿ ಸಿಕ್ಕಿದ್ದು, ಇನ್ನೇನು ಮೂರು ತಿಂಗಳ ಒಳಗಾಗಿ ಕೆಲಸ ಪ್ರಾರಂಭಿಸಿ ಸುಮಾರು ಐದು ಸಾವಿರ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದ್ದು, ಜೊತೆಗೆ ತರಬೇತಿಯನ್ನು
ನೀಡಲಾಗುವುದೆಂದು ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ
ಭರವಸೆ ನೀಡಿದರು.
ಸೋಮವಾರ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ
ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಎಂಟು ವರ್ಷದಲ್ಲಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದು ಯಶಸ್ವಿಗೊಳಿಸಿದ್ದಾರೆ. ರೈತರ ಆದಾಯವನ್ನು ದ್ವಿಗುಣಗೊಳಿಸಲು ಸಾಕಷ್ಟು
ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.
ನವಲಗುಂದ ಕ್ಷೇತ್ರದಲ್ಲಿಯೂ ಪ್ರಧಾನಿ ನರೇಂದ್ರ ಮೋದಿಯವರ ಯೋಜನೆಗಳನ್ನು
ಪರಿಣಾಮಕಾರಿಯಾಗಿ ಭ್ರಷ್ಟಾಚಾರ ಹಾಗೂ ಕಳಂಕ ರಹಿತವಾಗಿ ಅನುಷ್ಠಾನ ಮಾಡಲಾಗುತ್ತಿದೆ.
ದೇಶದ ಪ್ರತಿಯೊಬ್ಬ ಪ್ರಜೆಯೂ ನಮ್ಮವರು ಎನ್ನುವಂತೆ ಬಿಜೆಪಿ ನಡೆದುಕೊಂಡು ಬರುತ್ತಿದ್ದು ಮೇಕ್ ಇನ್ ಇಂಡಿಯಾ ಮೂಲಕ ಯುವಕರಿಗೆ ಸಾಕಷ್ಟು ಅನುಕೂಲ ಮಾಡಿಕೊಡಲಾಗಿದೆ ಎಂದರು.
ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕೊರೊನಾ ಸಂದರ್ಭದಲ್ಲಿ ಧಾರವಾಡ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಆಕ್ಷಿಜನ್ ಘಟಕಗಳನ್ನು ನಿರ್ಮಾಣ ಮಾಡಿ ರೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಂಡಿದ್ದೇವೆ.
ಬಸವಣ್ಣನವರ ಇತಿಹಾಸವನ್ನು ಪ್ರಪಂಚಕ್ಕೆ ಗುರಿತಿಸುವ ಹಾಗೆ ರೂ.612 ಕೋಟಿ ಹಣವನ್ನು
ಖರ್ಚು ಮಾಡಲಾಗುತ್ತಿದ್ದು ನಾಡಿನಲ್ಲಿ ಉತ್ತುಮ ಕಾರ್ಯಗಳು ನಡೆಯುತ್ತಿರುವುದದಕ್ಕೆ
ಜನರ ಆಶೀರ್ವಾದವೆ ಸಾಕ್ಷಿಯಾಗಿದೆ. ಕಳೆದ ಎಂಟು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಬ್ ಕೇ ಸಾಥ್ ಸಬ್ ಕಾ ವಿಕಾಸ ಜೊತೆಗೆ ಎಲ್ಲರ ಜೊತೆಗಿದ್ದು ಪ್ರಪಂಚವೇ ಮೆಚ್ಚುವಂತ ಕಾರ್ಯವನ್ನು ಮಾಡಿರುವ ಕಿರು ಹೊತ್ತಿಗೆಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಅವರು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.
ಧಾರವಾಡ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಬಸವರಾಜ ಕುಂದಗೋಳಮಠ, ತಾಲ್ಲೂಕಾ ಬಿಜೆಪಿ ಅಧ್ಯಕ್ಷ ಶರಣಪ್ಪಗೌಡ ದಾನಪ್ಪಗೌಡರ, ಎನ್.ಪಿ.ಕುಲಕರ್ಣಿ, ಬಸಣ್ಣ ಬೆಳವಣಕಿ, ಶಂಕರಗೌಡ ರಾಯನಗೌಡರ, ಮಹೇಶ ತೊಗಲಂಗಿ, ಮಹಾಂತೇಶ ಕಲಾಲ, ಬಸವರಾಜ ಕಟ್ಟಿಮನಿ, ವಿನಾಯಕ ದಾಡಿಬಾವಿ, ಪ್ರಭು ಇಬ್ರಾಹಿಂಪೂರ ಇತರರು ಉಪಸ್ಥಿತರಿದ್ದರು.