ಸ್ಮಶಾನದಲ್ಲಿ ಮುನ್ನೂರು ಮನೆಗಳ ನಿರ್ಮಾಣ, ಯಾರಿಗೂ ಗೊತ್ತಿಲ್ಲ!!

0
Spread the love

ಮೊಹರ್ ಬಿಟ್ಟು ಬಂದ ಸಿಬ್ಬಂದಿ; ತಹಸೀಲ್ದಾರ್ ಸಿಡಿಮಿಡಿ

Advertisement

ವಿಜಯಸಾಕ್ಷಿ ಸುದ್ದಿ, ರೋಣ


ತಾಲೂಕಿನ ಸೋಮನಕಟ್ಟಿ ಗ್ರಾಮದ ಸ್ಮಶಾನದಲ್ಲಿ ಮುನ್ನೂರಕ್ಕೂ ಹೆಚ್ಚು ಮನೆಗಳು ನಿರ್ಮಾಣಗೊಂಡಿದ್ದು ಅದರ ಬಗ್ಗೆ ಯಾರಿಗೂ ತಿಳಿದಿಲ್ಲ. ಹೀಗಾಗಿ ತಹಸೀಲ್ದಾರ್ ವಾಣಿ ಉಂಕಿ ಎದುರು ನಂಗೊತ್ತಿಲ್ಲ, ನಿಂಗೊತ್ತಿಲ್ಲ ಎಂಬ ಉತ್ತರವೇ ಬಂದವು.

ಶನಿವಾರ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಎಂಬ ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಸೋಮನಕಟ್ಟಿ ಗ್ರಾಮದಲ್ಲಿ ತಹಸೀಲ್ದಾರ್ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಈ ವಿಷಯ ಬಯಲಿಗೆ ಬಂತು.

ತಾಲೂಕಿನ ಸೋಮನಕಟ್ಟಿ ಗ್ರಾಮದ ೩\೧ ಸರ್ವೆ ನಂ ಆಸ್ತಿಯ ೭ ಎಕರೆ ೩೦ ಗುಂಟೆ ಸ್ಮಶಾನ ಭೂಮಿಯಾಗಿದೆ. ಆದರೆ ಇಲ್ಲಿನ ಗ್ರಾಮಸ್ಥರು ಕಳೆದ ೩೦ ವರ್ಷಗಳಿಂದ ವಾಸ ಮಾಡುವ ಮೂಲಕ ಮನೆಗಳನ್ನು ನಿರ್ಮಿಸಿಕೊಂಡಿದ್ದು, ಈಗ ಮನೆಯ ಆಸ್ತಿ ಬಗ್ಗೆ ಹಕ್ಕು ಪತ್ರ ಬೇಕಾಗಿದೆ.

ಆದರೆ ಗ್ರಾಪಂನವರು ಮಾತ್ರ ನೀಡುತ್ತಿಲ್ಲ. ಹೀಗಾಗಿ ವಾಸ ಮಾಡುವ ನಾಗರಿಕರು ಗ್ರಾಮ ವಾಸ್ತವ್ಯದಲ್ಲಿ ವಾಸಿಸುವ ಮನೆಗಳಿಗೆ ಹಕ್ಕು ಪತ್ರ ನೀಡುವಂತೆ ಒತ್ತಾಯಿಸುತ್ತಿದ್ದಂತೆ ಸ್ಥಳದಲ್ಲಿ ಪಿಡಿಒಗೆ ತಹಸೀಲ್ದಾರ್ ಹಕ್ಕು ಪತ್ರಗಳನ್ನು ನೀಡುವಂತೆ ತಿಳಿಸಿದರು. ಆಗ ಪಿಡಿಒರವರು ಇದು ಸ್ಮಶಾನ ಭೂಮಿಯಾಗಿದ್ದು, ಹಕ್ಕು ಪತ್ರಗಳನ್ನು ನೀಡಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಸ್ಮಶಾನವಾದರೆ ಅಲ್ಲಿ ಸರಕಾರಿ ಮನೆಗಳನ್ನು ಕಟ್ಟಲು ಯಾಕೆ ಅವಕಾಶ ಯಾಕೆ ನೀಡಿದಿರಿ. ವಿದ್ಯುತ್ ಪೂರೈಕೆ, ಕುಡಿಯುವ ನೀರು ಸೇರಿದಂತೆ ಸಿಸಿ ರಸ್ತೆಗಳನ್ನು ಯಾಕೆ ಮಾಡಿದ್ದೀರಿ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಪಿಡಿಒರವರು ಹಿಂದಿನವರು ಏನು ಮಾಡಿದ್ದಾರೆ ಎನ್ನುವುದು ನನಗೆ ಬೇಕಿಲ್ಲ. ಕಾನೂನಿನ ಪ್ರಕಾರ ಹಕ್ಕು ಪತ್ರಗಳನ್ನು ನೀಡಲು ಬರುವುದಿಲ್ಲ. ಆದರೂ ಸಹ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಿ ಠರಾವು ಮಾಡುವ ಮೂಲಕ ಹಿರಿಯ ಅಧಿಕಾರಿಗಳಿಗೆ ಕಳುಹಿಸಲಾಗಿದ್ದು, ಈ ಸಭೆಯಲ್ಲಿ ಮತ್ತೊಂದು ಅರ್ಜಿಯನ್ನು ನೀಡಿ ಎಂದರು.

ಇದಕ್ಕೆ ಸಮ್ಮತಿಸಿದ ನಿವಾಸಿಗಳು ದ್ವಿಪ್ರತಿಯಲ್ಲಿ ಅರ್ಜಿಯನ್ನು ಸಲ್ಲಿಸಿ, ಒಂದಕ್ಕೆ ಮೊಹರ್ ಹಾಕಿ ವಾಪಸ್ಸು ಕೊಡಿ ಎಂದರು. ಆಗ ತಹಸೀಲ್ದಾರ್‌ರು ಮೊಹರ್[ಶೀಲ್] ತರುವಂತೆ ಸಿಬ್ಬಂದಿಗೆ ಸೂಚಿಸಿದರು. ಇದಕ್ಕೆ ಸಿಬ್ಬಂದಿಗಳು ತಂದಿಲ್ಲ ಎನ್ನುತ್ತಿದ್ದಂತೆ ಸಿಡಿಮಿಡಿಗೊಂಡ ಅವರು, ಕಚೇರಿಯಿಂದ ಮೊಹರ್ ತರಿಸಿಕೊಂಡು ನಂತರ ಇವರಿಗೆ ಪ್ರತಿಯನ್ನು ನೀಡಿ ಎಂದು ವಿವಾದಕ್ಕೆ ತೆರೆ ಎಳೆದರು.

ಇನ್ನು ಗ್ರಾಮದಲ್ಲಿ ತಹಸೀಲ್ದಾರ್ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ಚರಂಡಿಯ ಅವ್ಯವ್ಯವಸ್ಥೆ ಬಗ್ಗೆ ದೂರಿದರು. ಇಂತಹ ಮಳೆಯಲ್ಲಿ ನಮ್ಮ ಸ್ಥಿತಿ ಹೇಳಬಾರದಾಗಿದೆ. ಹೀಗಾಗಿ ನಮಗೆ ಶಾಶ್ವತ ಯೋಜನೆಗಳನ್ನು ರೂಪಿಸಿ ನೆಮ್ಮದಿಯಿಂದ ಬದುಕನ್ನು ಕಟ್ಟಿಕೊಳ್ಳಲು ಸಹಾಯ ಮಾಡಿ ಎಂದರು.

ಆಗ ಮಧ್ಯ ಪ್ರವೇಶಿಸಿದ ಗ್ರಾಪಂನವರು ಇದು ಶಾಸಕರ ಅನುದಾನದಿಂದ ಆಗುವ ಕೆಲಸ. ಗ್ರಾಪಂನಿಂದ ಹಂತ ಹಂತವಾಗಿ ಕೆಲಸ ಮಾಡುತ್ತೇವೆ ಎಂದರು. ತಹಸೀಲ್ದಾರ್ ವಾಣಿ ಸಹ ಈ ವಿಷಯವನ್ನು ಶಾಸಕರ ಗಮನಕ್ಕೆ ತರಲಾಗುವುದು ಎಂದರು. ಸಭೆಯಲ್ಲಿ ೯ ಅರ್ಜಿಗಳು ಸ್ವೀಕರಿಸಲ್ಪಟ್ಟಿದ್ದವು.

ಗ್ರಾಪಂ ಅಧ್ಯಕ್ಷೆ ನಂದಾ ಪರಡ್ಡಿ, ವಿಜಯಲಕ್ಷ್ಮಿ ಹುಬ್ಬಳ್ಳಿ, ಬಸವರಾಜ ಅವದಾರಿ, ಬಿಸಿಎಂ ವಿಸ್ತರಣಾಧಿಕಾರಿ ಎಸ್.ಎಲ್.ಉಪ್ಪಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.


Spread the love

LEAVE A REPLY

Please enter your comment!
Please enter your name here