ಬೆಳಗಾವಿ:- ವಿಜಯೇಂದ್ರ ಓರ್ವ ಭ್ರಷ್ಟ, ಅವನು ನಮ್ಮ ನಾಯಕ ಅಲ್ಲ ಎಂದು ಹೇಳುವ ಮೂಲಕ ಏಕವಚನದಲ್ಲೇ ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ರಮೇಶ್ ಜಾರಕಿಹೊಳಿ ಕಿಡಿಕಾರಿದರು.
ವಿಜಯೇಂದ್ರ ರಾಜ್ಯಾಧ್ಯಕ್ಷ ಎಂದು ನಾನು ಒಪ್ಪೋದಿಲ್ಲ. ಮುಂದಿನ ಅಧ್ಯಕ್ಷ ಯಾರು ಎಂಬುದು ಪಕ್ಷದ ವರಿಷ್ಠರು ತೀರ್ಮಾನ ಮಾಡಬೇಕು. ವಿಜಯೇಂದ್ರ ಬಿಜೆಪಿ ಪಕ್ಷದಲ್ಲಿ ಇನ್ನೂ ಜೂನಿಯರ್, ಅವನಿಗೆ ಯಾವುದೇ ಐಡಿಯಾಲಜಿ ಇಲ್ಲ. ಬಿಜೆಪಿಯ ಭ್ರಷ್ಟ ಎಂಬ ಲೇಬಲ್ ವಿಜಯೇಂದ್ರ ಮೇಲಿದೆ ಎಂದು ರಮೇಶ್ ಜಾರಕಿಹೊಳಿ ಹರಿ ಹಾಯ್ದರು.
ವಿಜಯೇಂದ್ರ ಅಧ್ಯಕ್ಷ ಆಗಿದ್ದಕ್ಕೆ ನನ್ನ ವಿರೋಧವಿದೆ. ಹಾಗಂತ ನಾನೆಂದೂ ಯಡಿಯೂರಪ್ಪನವರಿಗೆ ವಿರೋಧಿ ಅಲ್ಲ. ಯಡಿಯೂರಪ್ಪ ನಮ್ಮ ಪಕ್ಷಕ್ಕೆ ಪ್ರಶ್ನಾತೀತ ನಾಯಕ. ಯಡಿಯೂರಪ್ಪರ ಬಗ್ಗೆ ನಮಗೆ ತುಂಬಾ ಗೌರವವಿದೆ. ಆದರೆ, ವಿಜಯೇಂದ್ರ ನಮ್ಮ ಪಕ್ಷದ ನಾಯಕನಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಆರ್ ಎಸ್ ಎಸ್ ಪ್ರಮುಖ ನಾಯಕರು, ಬಿಜೆಪಿ ನಾಯಕರ ಸಭೆಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ರಮೇಶ್ ಜಾರಕಿಹೊಳಿ, ಸಭೆಯಲ್ಲಿ ಏನು ಚರ್ಚೆಯಾಯಿತು ಎಂದು ಹೇಳುವುದಕ್ಕೆ ಆಗುವುದಿಲ್ಲ. ತಪ್ಪು ಮಾಡಿದವರನ್ನು ಸಭೆಯಲ್ಲಿ ಮುಖಂಡರು ಬೈದಿದ್ದಾರೆ ಅಷ್ಟೇ ಎಂದರು.