ದಳಪತಿ ವಿಜಯ್ ಅವರ ಬಹುನಿರೀಕ್ಷಿತ ಹಾಗೂ ಕೊನೆಯ ಸಿನಿಮಾ ಎಂದು ಹೇಳಲಾಗುತ್ತಿರುವ ‘ಜನ ನಾಯಗನ್’ ಜನವರಿ 9ರಂದು ತೆರೆಗೆ ಬರಲಿದೆ. ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಮಾತ್ರ ಬಿಡುಗಡೆಯಾಗುತ್ತಿರುವ ಈ ಸಿನಿಮಾಕ್ಕೆ ಭಾರಿ ಹೈಪ್ ಸೃಷ್ಟಿಯಾಗಿದೆ. ಇದೇ ಕಾರಣಕ್ಕೆ ಅಡ್ವಾನ್ಸ್ ಬುಕಿಂಗ್ ಕೂಡ ಜೋರಾಗಿದೆ.
ಆದರೆ ಅಡ್ವಾನ್ಸ್ ಬುಕಿಂಗ್ ಆರಂಭವಾದ ಬೆನ್ನಲ್ಲೇ ಬೆಂಗಳೂರಿನ ಸಿನಿಪ್ರೇಮಿಗಳಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಕಾರಣ, ಬೆಂಗಳೂರಿನಲ್ಲಿ ‘ಜನ ನಾಯಗನ್’ ಟಿಕೆಟ್ ದರ ಅಕ್ಷರಶಃ ದೋಚಾಟದಂತಿದೆ. ಜನವರಿ 9ರ ಬೆಳಿಗ್ಗೆ 6 ಗಂಟೆಯ ವಿಶೇಷ ಶೋಗೆ ಸಾಮಾನ್ಯ ಟಿಕೆಟ್ ₹800, ಬಾಲ್ಕನಿ ಟಿಕೆಟ್ ₹1000 ರಿಂದ ₹1200 ವರೆಗೆ ಮಾರಾಟವಾಗುತ್ತಿದೆ.
ಇದಕ್ಕೆ ಹೋಲಿಸಿದರೆ ಕೇರಳದ ಕೊಚ್ಚಿಯಲ್ಲಿ ಪರಿಸ್ಥಿತಿ ಸಂಪೂರ್ಣ ವಿಭಿನ್ನವಾಗಿದೆ. ಅಲ್ಲಿಯೂ ವಿಶೇಷ ಬೆಳಗಿನ ಶೋ ಇದ್ದರೂ, ಟಿಕೆಟ್ ದರ ಕೇವಲ ₹120 ರಿಂದ ಆರಂಭವಾಗುತ್ತದೆ. ಕೆಲವು ಚಿತ್ರಮಂದಿರಗಳಲ್ಲಿ ₹190 ಇದ್ದರೆ, ಗರಿಷ್ಠ ದರ ₹350 ಮಾತ್ರ. ವಿಶೇಷ ಶೋ ಮತ್ತು ಸಾಮಾನ್ಯ ಶೋಗಳ ನಡುವೆ ದರ ವ್ಯತ್ಯಾಸವೂ ಇಲ್ಲ – ಎಲ್ಲ ಶೋಗಳಿಗೆ ಒಂದೇ ಬೆಲೆ.
ಬೆಂಗಳೂರಿನಲ್ಲಿ ಮಾತ್ರವೇ ಮೂರರಿಂದ ನಾಲ್ಕು ಪಟ್ಟು ಹೆಚ್ಚು ದರ ನಿಗದಿಪಡಿಸಿರುವುದು ಅನ್ಯಾಯ ಎಂಬ ಪ್ರಶ್ನೆ ಈಗ ಸಿನಿಮಾ ಪ್ರೇಮಿಗಳಲ್ಲಿ ಕೇಳಿಬರುತ್ತಿದೆ. ಸದ್ಯ ಅಡ್ವಾನ್ಸ್ ಬುಕಿಂಗ್ ಬೆಂಗಳೂರು ಮತ್ತು ಕೊಚ್ಚಿಯಲ್ಲಿ ಮಾತ್ರವೇ ಓಪನ್ ಆಗಿದ್ದು, ಚೆನ್ನೈ, ಹೈದರಾಬಾದ್ ಹಾಗೂ ಮುಂಬೈನಲ್ಲಿ ಇನ್ನಷ್ಟೆ ಆರಂಭವಾಗಬೇಕಿದೆ. ಅಲ್ಲಿ ಟಿಕೆಟ್ ದರ ಕಡಿಮೆಯೇ ಇರಲಿದೆ ಎನ್ನಲಾಗುತ್ತಿದೆ.
ಈ ಎಲ್ಲ ಬೆಳವಣಿಗೆಗಳನ್ನು ನೋಡಿದರೆ, ‘ಜನ ನಾಯಗನ್’ ನಿರ್ಮಾಪಕರು ಹಾಗೂ ವಿತರಕರು ಹಣ ದೋಚಿಕೊಳ್ಳಲು ಬೆಂಗಳೂರಿನ ಪ್ರೇಕ್ಷಕರನ್ನೇ ಗುರಿ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.



