ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ವಿಕಲ್ಪ’ ಸಿನಿಮಾ ಇದೀಗ ಬಿಡುಗಡೆ ಹಂತದತ್ತ ವೇಗವಾಗಿ ಸಾಗುತ್ತಿದೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತ ತಲುಪಿದ್ದು, ಸೆನ್ಸಾರ್ ಮಂಡಳಿಗೆ ಸಲ್ಲಿಸಲಾಗಿದೆ. ಇದೇ ವೇಳೆ ಸಿನಿಮಾದ ಪ್ರಚಾರ ಚಟುವಟಿಕೆಗಳು ಆರಂಭವಾಗಿವೆ.
ಇತ್ತೀಚೆಗೆ ಬಿಡುಗಡೆಯಾದ ‘ವಿಕಲ್ಪ’ ಚಿತ್ರದ ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ವರ್ಚ್ಯುವಲ್ ಮೂಲಕ ಟೀಸರ್ ಬಿಡುಗಡೆ ಮಾಡಿದರು. ಲೇಖಕ ಜೋಗಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಹೊಸ ಪ್ರಯತ್ನದ ಈ ಸಿನಿಮಾವನ್ನು ಶ್ಲಾಘಿಸಿದರು.
“ಕನ್ನಡದಲ್ಲಿ ಇಂಥ ಹೊಸ ಪ್ರಯೋಗಗಳು ಆಗಬೇಕು. ಕಥೆ ಮತ್ತು ನಿರೂಪಣೆ ಭರವಸೆ ಮೂಡಿಸುತ್ತಿವೆ. ತುಡಿತ ಇರುವ ತಂಡದ ಪ್ರಯತ್ನ ಇದು” ಎಂದು ಜೋಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಕಲ್ಪ ಎಂದರೆ ವಾಸ್ತವ ಮತ್ತು ಕಲ್ಪನೆಗಳ ನಡುವಿನ ಸ್ಥಿತಿ. ಮಾನವನ ಮನಸ್ಸಿನ ಅಂತರಾಳದಲ್ಲಿ ನಡೆಯುವ ಸಂಘರ್ಷ, ಮಾನಸಿಕ ಆರೋಗ್ಯ ಮತ್ತು ತಲ್ಲಣಗಳನ್ನು ಥ್ರಿಲ್ಲರ್ ರೂಪದಲ್ಲಿ ಹೇಳುವ ಪ್ರಯತ್ನ ಈ ಸಿನಿಮಾದ ವಿಶೇಷ. ಕಥೆಯೇ ಚಿತ್ರದ ಹೀರೋ ಎಂದು ನಿರ್ದೇಶಕ-ನಟ ಪೃಥ್ವಿರಾಜ್ ಪಾಟೀಲ್ ಹೇಳಿದ್ದಾರೆ.
ಹವ್ಯಾಸಿ ರಂಗಭೂಮಿಯಿಂದ ಬಂದಿರುವ ಪೃಥ್ವಿರಾಜ್ ಪಾಟೀಲ್ ಅವರ ಪರಿಕಲ್ಪನೆಯಲ್ಲಿ ಸಿನಿಮಾ ಮೂಡಿಬಂದಿದ್ದು, ಅವರು ನಾಯಕನಾಗಿ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಹರಿಣಿ ಶ್ರೀಕಾಂತ್ ಅವರು ಸೈಕಿಯಾಟ್ರಿಸ್ಟ್ ಪಾತ್ರದಲ್ಲಿ ನಟಿಸಿದ್ದು, ಮನೋವೈದ್ಯರ ಸಲಹೆಯ ಮೇರೆಗೆ ಹಲವು ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.
ಬೆಂಗಳೂರು, ಸಾಗರ, ತೀರ್ಥಹಳ್ಳಿ, ಶಿರಸಿ, ಯಲ್ಲಾಪುರ, ಕುಂದಾಪುರ ಜೊತೆಗೆ ಸಿಂಗಾಪುರ ಮತ್ತು ನೆದರ್ಲ್ಯಾಂಡ್‌ನಲ್ಲೂ ಚಿತ್ರೀಕರಣ ನಡೆಸಲಾಗಿದೆ. ಅಭಿರಾಮ್ ಗೌಡ ಅವರ ಛಾಯಾಗ್ರಹಣ, ಸುರೇಶ್ ಆರುಮುಗಮ್ ಅವರ ಸಂಕಲನ ಹಾಗೂ ಸಂವತ್ಸರ ಅವರ ಸಂಗೀತ ಚಿತ್ರಕ್ಕಿದೆ.



