ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಮಹಾತ್ಮ ಗಾಂಧೀಜಿ ಅವರ ಗ್ರಾಮ ರಾಜ್ಯದ ಕನಸು ಸಾಕಾರಗೊಳ್ಳುವಲ್ಲಿ ಗ್ರಾಮ ಪಂಚಾಯಿತಿಯ ವ್ಯವಸ್ಥೆ ಪೂರಕವಾಗಿದೆ. ಗ್ರಾಮ ಪಂಚಾಯಿತಿಗಳು ಗ್ರಾಮೀಣ ಜನರ ಸರ್ವತೋಮುಖ ಅಭಿವೃದ್ಧಿಯ ಶಕ್ತಿ ಕೇಂದ್ರಗಳಾಗಿವೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಬುಧವಾರ ತಾಲೂಕಿನ ದೊಡ್ಡೂರ ಗ್ರಾಮದಲ್ಲಿ ಜಿಲ್ಲಾ ಪಂಚಾಯತ ಗದಗ, ತಾ.ಪಂ ಲಕ್ಮೇಶ್ವರ ಹಾಗೂ ಗ್ರಾ.ಪಂ ದೊಡ್ಡೂರ ಸಹಯೋಗದಲ್ಲಿ 2024-25ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 20 ಲಕ್ಷ ಅಂದಾಜು ವೆಚ್ಚದಲ್ಲಿ ದೊಡ್ಡೂರ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ನಿರ್ಮಾಣ ಹಾಗೂ ವಿವಿಧ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಅಧಿಕಾರ ವಿಕೇಂದ್ರೀಕರಣದಿಂದ ಗ್ರಾಮೀಣ ಆಶೋತ್ತರಗಳನ್ನು ಈಡೇರಿಸುವಲ್ಲಿ ಗ್ರಾ.ಪಂಗಳ ಪಾತ್ರ ಮಹತ್ವದ್ದಾಗಿವೆ. ಕ್ಷೇತ್ರದಲ್ಲಿನ ಗ್ರಾ.ಪಂಗಳು ಸ್ವಂತ ಕಟ್ಟಡ ಹೊಂದಬೇಕಾಗಿದ್ದು, ಈ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸಲಾಗುವುದು. ಕಾರಣಾಂತರಗಳಿಂದ ಲಕ್ಮೇಶ್ವರ ತಾಲೂಕಿನ ಮಾಡಳ್ಳಿ, ಗೋವನಾಳ ಸೇರಿ ಕೆಲ ಕಡೆ ಅರ್ಧಕ್ಕೆ ನಿಂತಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳು ಗಮನ ಹರಿಸಬೇಕು. ಜನರ ಬೇಡಿಕೆಯಂತೆ ಆದಷ್ಟು ಬೇಗ ಗ್ರಾಮದ ಹತ್ತಿರದ ಸೇತುವೆ, ದೊಡ್ಡೂರ-ಬೆಳ್ಳಟ್ಟಿ ರಸ್ತೆ ಅಭಿವೃದ್ಧಿ ಕಾರ್ಯ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಹೂವಿನಶಿಗ್ಲಿ ವೀರಕ್ತಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳು, ಮಾಜಿ ಶಾಸಕ ರಾಮಣ್ಣ ಲಮಾಣಿ, ತಹಸೀಲ್ದಾರ ವಾಸುದೇವ ಸ್ವಾಮಿ, ತಾ.ಪಂ ಇಓ ಕೃಷ್ಣಪ್ಪ ಧರ್ಮರ, ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ಈಳಗೇರ, ಉಪಾಧ್ಯಕ್ಷೆ ಸುಶೀಲಾ ಲಮಾಣಿ, ಟೊಪಣ್ಣ ಲಮಾಣಿ, ಬಿ.ಎಸ್. ಈಳಗೇರ, ಪುಂಡಲೀಕ ಲಮಾಣಿ, ಜಗದೀಶ್ ಈಳಗೇರ, ಅಮರಪ್ಪ ಗುಡಗುಂಟಿ, ಪಿಡಿಓ ಎಸ್.ಎಫ್. ಮಾಳವಾಡ ಗ್ರಾ.ಪಂ ಕಾರ್ಯದರ್ಶಿ ಗುರುವಿನ ಸೇರಿದಂತೆ ಗ್ರಾ.ಪಂ ಸರ್ವ ಸದಸ್ಯರು, ಸಿಬ್ಬಂದಿಗಳು, ಗ್ರಾ.ಪಂ ವ್ಯಾಪ್ತಿಯ ಮುಖಂಡರು ಇದ್ದರು. ಪಿಡಿಓ ಎಸ್.ಎಫ್. ಮಾಳವಾಡ ನಿರೂಪಿಸಿದರು.