ಶಿಗ್ಲಿ ಗ್ರಾಮದಲ್ಲಿ ಸ್ವಾತಂತ್ರ್ಯ ಯೋಧರ ಭವನ ನಿರ್ಮಾಣಕ್ಕೆ ಗ್ರಾಮಸ್ಥರ ಬೇಡಿಕೆ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಸವಿನೆನಪಿಗಾಗಿ ಹಾಗೂ ಸ್ವಾತಂತ್ರ್ಯ ಯೋಧರ ಸ್ಮರಣೆಗಾಗಿ ಶಿಗ್ಲಿ ಗ್ರಾಮದಲ್ಲಿ ಸ್ವಾತಂತ್ರ್ಯ ಯೋಧರ ಭವನ ನಿರ್ಮಾಣ ಮಾಡಬೇಕೆಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ. ಅದಕ್ಕಾಗಿ ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಸರ್ಕಾರ ಭವನ ನಿರ್ಮಾಣಕ್ಕೆ ೧ ಕೋಟಿ ರೂ ಅನುದಾನ ಕಲ್ಪಿಸಬೇಕೆಂದು ಜಿಪಂ ಮಾ.ಜಿ ಅಧ್ಯಕ್ಷ, ನ್ಯಾಯವಾದಿ ಎಸ್.ಪಿ. ಬಳಿಗಾರ ಆಗ್ರಹಿಸಿದ್ದಾರೆ.

Advertisement

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿ, ನೂರು ವರ್ಷಗಳ ಹಿಂದೆ ಮಹಾತ್ಮ ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ್ದ ಐತಿಹಾಸಿಕ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ತಾಲೂಕಿನ ಶಿಗ್ಲಿ ಗ್ರಾಮದ ಲಿಂ.ಗುರುಬಸಪ್ಪಜ್ಜ ಯಾಗಂಟಿ ಅವರು ಭಾಗವಹಿಸಿದ್ದರು. ಅಲ್ಲಿಂದ ಬಂದ ಮೇಲೆ ಗಾಂಧೀಜಿಯವರ ರಾಷ್ಟ್ರೀಯ ವಿಚಾರಧಾರೆಗಳನ್ನು ಜನರಲ್ಲಿ ತುಂಬುತ್ತಾ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಚ್ಚಿದ ಪರಿಣಾಮವಾಗಿ ಗ್ರಾಮದಲ್ಲಿ ೩೬ಕ್ಕೂ ಹೆಚ್ಚು ಸ್ವಾತಂತ್ರ್ಯ ಯೋಧರ ಕುಟುಂಬಗಳಿರುವುದು ನಮ್ಮೂರ ಹೆಮ್ಮೆ.

ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಚ್ಚಿದ ಪರಿಣಾಮವಾಗಿ ಗ್ರಾಮದ ಬಸವಕುಮಾರ ಮುಳಗುಂದಮಠ, ಆದಯ್ಯ ಹಿರೇಮಠ ಮತ್ತಿತತರು ಬ್ರಿಟೀಷರ ವಿರುದ್ಧ ಭಾಷಣ ಮಾಡಿ ಜೈಲು ಸೇರಿದರು. ಬಿಡುಗಡೆಯಾಗಿ ಬಂದ ಮೇಲೆ ಮತ್ತೆ ಗ್ರಾಮದಲ್ಲಿ ಸ್ವಾತಂತ್ರ್ಯ ಯೋಧರ ದೊಡ್ಡ ತಂಡವೇ ಹುಟ್ಟಿಕೊಂಡಿತು. ಸ್ವಾತಂತ್ರ್ಯ  ಹೋರಾಟದಲ್ಲಿ ಹುತಾತ್ಮರಾದ ಹಾವೇರಿಯ ಹೊಸರಿತ್ತಿಯ ಮೈಲಾರ ಮಹಾದೇವಪ್ಪರ ಜೊತೆಯಲ್ಲಿ ಶಿರಹಟ್ಟಿ ತಾಲೂಕಿನ ಕೋಗನೂರಿನ ವೀರಯ್ಯ ಹಿರೇಮಠ, ತಿರಕಪ್ಪ ಮಡಿವಾಳ ಅವರು ಬ್ರಿಟೀಷರ ಗುಂಡಿಗೆ ಬಲಿಯಾದಾಗ ಶಿಗ್ಲಿ ಗ್ರಾಮದಿಂದ ವೀರಭದ್ರಪ್ಪ ಬಿದರಳ್ಳಿ ಅವರ ಜೊತೆಗೆ ಅನೇಕ ಯೋಧರು ಸೆರೆಮನೆ ವಾಸ ಅನುಭವಿಸಿದ್ದರು.

ಇಂದು ಶಿಗ್ಲಿ ಗ್ರಾಮದಲ್ಲಿ ಒಟ್ಟು ೩೬ ಸ್ವಾತಂತ್ರ್ಯ ಯೋಧರ ಕುಟುಂಬಗಳಿದ್ದು ಈ ಬಗ್ಗೆ ಖ್ಯಾತ ಸಾಹಿತಿ ಆರ್.ಎಂ. ಹೊನಕೇರಿ ತಮ್ಮ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಈ ಸಂದರ್ಭದಲ್ಲಿ ಗ್ರಾಮದ ಎಲ್ಲಾ ಸ್ವಾತಂತ್ರ್ಯ ಯೋಧರ ಸ್ಮರಣೆಗಾಗಿ ಒಂದು ಕೋಟಿ ರೂ ವೆಚ್ಚದಲ್ಲಿ ಸ್ವಾತಂತ್ರ್ಯ ಯೋಧರ ಭವನ ನಿರ್ಮಾಣ ಮಾಡಬೇಕೆಂಬ ಗ್ರಾಮಸ್ಥರ ಮನವಿ ಸರ್ಕಾರ ಸ್ಪಂದಿಸಬೇಕೆAದು ಬಳಿಗಾರ ತಿಳಿಸಿದ್ದಾರೆ.

ಇಂಡಿ ತಾಲೂಕಿನ ತಾಂಬೆಯಿಂದ ಬಟ್ಟೆ ವ್ಯಾಪಾರಕ್ಕಾಗಿ ಶಿಗ್ಲಿ ಗ್ರಾಮಕ್ಕೆ ಕುಟುಂಬ ಸಮೇತ ರಾಷ್ಟ್ರ ಭಕ್ತರು, ಆಧ್ಯಾತ್ಮಿಕ, ಧಾರ್ಮಿಕ ಪುರುಷರೂ ಆದ ಲಿಂ.ಗುರುಬಸಪ್ಪಜ್ಜ ಯಾಗಂಟಿ ಬಂದು ನೆಲೆಸಿದರು. ಅವರು ಬೆಳಗಾವಿ ಅಧಿವೇಶನಕ್ಕೆ ಹೋಗಿ ಬಂದ ಮೇಲೆ ಶಿಗ್ಲಿ ಗ್ರಾಮದಲ್ಲಿ ಆಶ್ರಮ ಕಟ್ಟಿಕೊಂಡು ಮಡದಿಯೊಂದಿಗೆ ಕಾಯಕ ಹಾಗೂ ಆಧ್ಯಾತ್ಮ ಸಾಧನೆಯಲ್ಲಿ ತೊಡಗಿಸಿಕೊಂಡು ಗ್ರಾಮದ ಜನರಲ್ಲಿ ಗಾಂಧೀಜಿಯವರ ರಾಷ್ಟ್ರೀಯ ವಿಚಾರಧಾರೆಗಳನ್ನು ತುಂಬಿದರು.


Spread the love

LEAVE A REPLY

Please enter your comment!
Please enter your name here