ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ನಗರಸಭೆಗೆ ಫೆ. 28ರಂದು ಜರುಗಿದ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹುದ್ದೆಗಳಿಗೆ ಆಯ್ಕೆ ಮಾಡಿ ಘೋಷಣೆ ಮಾಡಿದ ಪ್ರಕ್ರಿಯೆಯನ್ನು ಅದೇ ದಿನ ತಡೆಹಿಡಿಯಲಾಗಿದೆ ಎಂದು ಉಪವಿಭಾಗಾಧಿಕಾರಿಗಳು ತಿಳುವಳಿಕೆ ಪತ್ರ ಹೊರಡಿಸಿದ್ದಾರೆಂದು ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಅಧ್ಯಕ್ಷರಾದ ರಾಜು ಕುರಡಗಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚುನಾವಣೆ ಪ್ರಕ್ರಿಯೆ ನಂತರ ಘೋಷಣೆ ಮಾಡಿದ ಅಧ್ಯಕ್ಷ ಕೃಷ್ಣಾ ಪರಾಪೂರ, ಉಪಾಧ್ಯಕ್ಷೆ ಶಕುಂತಲಾ ಅಕ್ಕಿ ಇವರುಗಳಿಗೆ ಮಾನ್ಯ ಉಚ್ಛ ನ್ಯಾಯಾಲಯ ಧಾರವಾಡ ಪೀಠವು ಹೊರಡಿಸಿದ ಮುಂದಿನ ಆದೇಶದವರೆಗೆ ನಗರಸಭೆಯ ಅಧಿಕಾರಭಾರ ಮತ್ತು ಯಾವುದೇ ಕಾರ್ಯಕಲಾಪ ನಡೆಸದಂತೆ ಸೂಚಿಸಿ ತಿಳುವಳಿಕೆ ಪತ್ರದಲ್ಲಿ ತಿಳಿಸಿದ್ದಾರೆ.
ಮಾನ್ಯ ಉಚ್ಛನ್ಯಾಯಾಲಯ ಧಾರವಾಡ ಪೀಠವು ಫೆ.28ರಂದು ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗವ ಮೊದಲೇ ಮದ್ಯಾಹ್ನ 2 ಗಂಟೆ ಪೂರ್ವದಲ್ಲಿ, ಚುನಾವಣೆಯನ್ನು ಬುಧವಾರ 05-03-2025ಕ್ಕೆ ಮುಂದೂಡಲು ನಿರ್ದೇಶಿಸಿದ್ದರೂ ಕೂಡ ಕಾನೂನು ಸಚಿವರು ಚುನಾವಣಾ ಅಧಿಕಾರಿಗಳ ಒತ್ತಡ ಹೇರಿ ಉಚ್ಛ ನ್ಯಾಯಾಲಯದ ನಿರ್ದೇಶನವನ್ನು ಉಲ್ಲಂಘನೆ ಮಾಡಿ ಚುನಾವಣೆ ನಡೆಸಿದ್ದು, ನ್ಯಾಯಾಲಯಕ್ಕೆ ಅಗೌರವ ಮತ್ತು ಅಪಮಾನ ಮಾಡಿದಂತಾಗಿದೆ ಎಂದು ರಾಜು ಕುರಡಗಿ ಹಾಗೂ ವಿ.ಪ ಸದಸ್ಯ ಎಸ್.ವಿ. ಸಂಕನೂರ ತಿಳಿಸಿದ್ದಾರೆ.