ಕಾರವಾರ: ವಿದೇಶಿ ಪ್ರವಾಸಿಗರು ಹೋಂಸ್ಟೇನಲ್ಲಿ ತಂಗಿರುವ ಬಗ್ಗೆ ಕಡ್ಡಾಯ ಮಾಹಿತಿ ನೀಡದೇ ನಿಯಮ ಉಲ್ಲಂಘಿಸಿರುವ ಆರೋಪದ ಮೇರೆಗೆ ಗೋಕರ್ಣದಲ್ಲಿ ಪೊಲೀಸರು ಹೋಂಸ್ಟೇ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಗೋಕರ್ಣದ ಭೀಮಕೊಂಡದಲ್ಲಿರುವ ‘ವೈಲ್ಡ್ ವಿಲೇಜ್’ ಹೋಂಸ್ಟೇ ಮಾಲೀಕ ಸೋಮಾ ಗಣಪು ಗೌಡ ಹಾಗೂ ವ್ಯವಸ್ಥಾಪಕ ಗಣೇಶ ಸೋಮಾ ಗೌಡ ವಿರುದ್ಧ ಪ್ರಕರಣ ದಾಖಲಾಗಿದೆ.
ಅರ್ಜೆಂಟೈನಾದ ಪ್ರವಾಸಿಗರಾದ ಸ್ಯಾಂಟಿಗೋ ಆಸ್ಕರ್ ಲ್ಯುಕೆ ಮೆರ್ಲೊ ಮತ್ತು ಅವರ ತಾಯಿ ಕಳೆದ ಎರಡು ದಿನಗಳಿಂದ ಹೋಂಸ್ಟೇನಲ್ಲಿ ತಂಗಿದ್ದರು ಎಂದು ತಿಳಿದುಬಂದಿದೆ. ವಿದೇಶಿ ಪ್ರಜೆಗಳು ತಂಗಿದಲ್ಲಿ, ಸಂಬಂಧಿತ ಮಾಹಿತಿಯನ್ನು ‘ಸಿ’ ಫಾರ್ಮ್ ಮೂಲಕ ಪೊಲೀಸ್ ಠಾಣೆಗೆ ಸಲ್ಲಿಸುವುದು ಕಡ್ಡಾಯವಾಗಿದೆ. ಆದರೆ ಈ ನಿಯಮವನ್ನು ಪಾಲಿಸದೆ ವಿದೇಶಿ ಪ್ರಜೆಗಳಿಗೆ ವಸತಿ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಇಮಿಗ್ರೇಶನ್ ಮತ್ತು ಫಾರಿನರ್ಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಠಾಣೆಯ ಪಿಎಸ್‌ಐ ಬಿ.ಎಂ. ಅನಿಲ್ ತನಿಖೆ ಕೈಗೊಂಡಿದ್ದಾರೆ.



