ವಿಜಯಸಾಕ್ಷಿ ಸುದ್ದಿ, ಗದಗ : ಲೋಕಸಭಾ ಚುನಾವಣೆಗೆ ಈಗಾಗಲೇ ಚುನಾವಣಾ ಆಯೋಗದಿಂದ ವೇಳಾಪಟ್ಟಿ ಪ್ರಕಟಿಸಲಾಗಿದೆ. ಆಯೋಗದ ಮಾರ್ಗಸೂಚಿಯಡಿಯಲ್ಲಿ ಜಿಲ್ಲೆಯ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಚುನಾವಣಾ ಪ್ರಚಾರದ ಸಾಮಗ್ರಿಗಳ ಮುದ್ರಣ ಕಾರ್ಯ ಮಾಡಬೇಕು. ತಪ್ಪಿದಲ್ಲಿ ಶಿಸ್ತು ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ವೈಶಾಲಿ ಎಂ.ಎಲ್ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಜರುಗಿದ ಪ್ರಿಂಟಿಂಗ್ ಪ್ರೆಸ್ ಮಾಲೀಕರ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚುನಾವಣಾ ಆಯೋಗವು ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸಿ ಮುದ್ರಕರು ಕಾರ್ಯನಿರ್ವಹಿಸಬೇಕು. ಜೊತೆಗೆ ಎಲ್ಲರೂ ಮಾದರಿ ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಪ್ರಿಂಟಿಂಗ್ ಪ್ರೆಸ್ ಮಾಲೀಕರಿಗೆ ಆಯೋಗವು ನೀಡಿರುವ ಮಾರ್ಗಸೂಚಿಗಳ ಉಲ್ಲಂಘನೆಯಾದಲ್ಲಿ ಆರು ತಿಂಗಳ ಜೈಲು ವಾಸ ಅಥವಾ 2 ಸಾವಿರ ರೂ.ಗಳ ದಂಡ ಇಲ್ಲವೇ ಎರಡೂ ಶಿಕ್ಷೆಗಳನ್ನು ವಿಧಿಸಲು ಕಾನೂನಿನಲ್ಲಿ ಅವಕಾಶ ನೀಡಲಾಗಿದೆ. ಪ್ರಿಂಟಿಂಗ್ ಪ್ರೆಸ್ ಮಾಲೀಕರೆಲ್ಲರೂ ಆಯೋಗದ ನಿರ್ದೇಶನಗಳಂತೆ ಚುನಾವಣಾ ಪ್ರಚಾರ ಸಾಮಗ್ರಿಗಳ ಮುದ್ರಣವನ್ನು ಮಾಡಬೇಕೆಂದು ಸೂಚಿಸಿದರು.
ಕರಪತ್ರ, ಪೋಸ್ಟರ್ ಅಲ್ಲದೇ ಶಾಲು, ಕ್ಯಾಪ್, ಬಟ್ಟೆ ಮೇಲೆ ಪಕ್ಷದ ಹೆಸರು, ಚಿಹ್ನೆ ಹಾಗೂ ಅಭ್ಯರ್ಥಿಗಳ ಫೋಟೋ ಮುದ್ರಿಸುವ ಬಗ್ಗೆಯೂ ನಿಗಾವಹಿಸಲಾಗುತ್ತಿದೆ. ಎಲ್ಲಿಯೂ ಸಹ ಚುನಾವಣಾ ಅಕ್ರಮಕ್ಕೆ ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಸ್ಪಷ್ಟಪಡಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸುರೇಖಾ, ಚುನಾವಣಾ ಶಾಖೆಯ ತಹಸೀಲ್ದಾರ ಪ್ರಕಾಶ ನಾಶಿ, ಜಿಲ್ಲಾ ವಾರ್ತಾಧಿಕಾರಿ ವಸಂತ ಮಡ್ಲೂರ, ಜಿಲ್ಲಾಧಿಕಾರಿಗಳ ಕಚೇರಿಯ ಶಿರಸ್ತೇದಾರರಾದ ಎಂ.ಎಸ್. ಮೇಲ್ಮನಿ, ಎಸ್.ಪಿ. ಸಾವಳಗಿಮಠ, ವಿನಾಯಕ ಸಾಲಿಮಠ ಸೇರಿದಂತೆ ಜಿಲ್ಲೆಯ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಹಾಜರಿದ್ದರು.
ಕರಪತ್ರ, ಭಿತ್ತಿಪತ್ರ, ಮುದ್ರಣ ಮಾಡುವಾಗ ಅವುಗಳಲ್ಲಿ ಪ್ರಿಂಟಿಂಗ್ ಪ್ರೆಸ್ ಹೆಸರು ಹಾಗೂ ಮುದ್ರಿತ ಪ್ರತಿಗಳ ಸಂಖ್ಯೆ ನಮೂದಿಸುವುದನ್ನು ಮರೆಯಬಾರದು. ಮುದ್ರಕರು ಆಯೋಗವು ನಿಗದಿಪಡಿಸಿದ ಅರ್ಜಿ ನಮೂನೆಯಲ್ಲಿ ಪ್ರಕಾಶಕರಿಂದ ವಿವರಗಳನ್ನು ಪಡೆದು ಮುದ್ರಣ ಕಾರ್ಯ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.