ವಿಜಯಸಾಕ್ಷಿ ಸುದ್ದಿ, ಗದಗ: ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಜಾರಿಗೊಳಿಸುವ ಹಕ್ಕನ್ನು ಆಯಾ ರಾಜ್ಯಗಳಿಗೆ ನೀಡಿದೆ. ಅದರಂತೆ ಹರಿಯಾಣ, ಪಂಜಾಬ್, ತೆಲಂಗಾಣ ಸೇರಿ ನಾಲ್ಕು ರಾಜ್ಯಗಳಲ್ಲಿ ಈಗಾಗಲೇ ಒಳ ಮೀಸಲಾತಿ ಜಾರಿಯಾಗಿದೆ. ಆದರೆ, ಕರ್ನಾಟಕದಲ್ಲಿ ಇದೂವರೆಗೂ ಜಾರಿಗೆ ಬಂದಿಲ್ಲ. ಮಾದಿಗ ಸಮುದಾಯಕ್ಕೆ ಶೇ.6ರಷ್ಟು ಒಳ ಮಿಸಲಾತಿ ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವದು ಎಂದು ಸಮುದಾಯದ ಮುಖಂಡ ಉಡಚಪ್ಪ ಹಳ್ಳಿಕೇರಿ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ್ಯಾ. ಚಂದ್ರಚೂಡ ಅವರು ಒಳ ಮೀಸಲಾತಿ ಆದೇಶ ಮಾಡಿ ಒಂದು ವರ್ಷ ಕಳೆದಿದೆ. ದೇಶದ ನಾಲ್ಕು ರಾಜ್ಯಗಳಲ್ಲಿ ಈಗಾಗಲೇ ಅನಷ್ಠಾನ ಮಾಡಿ ಶೋಷಿತರ ಬೆಂಬಲಕ್ಕೆ ನಿಲ್ಲಲಾಗಿದೆ. ರಾಜ್ಯ ಸರಕಾರ ದತ್ತಾಂಶದ ನೆಪ ಇಟ್ಟುಕೊಂಡು ಇದುವರೆಗೂ ಒಳ ಮೀಸಲಾತಿ ಜಾರಿ ಮಾಡಿಲ್ಲ. ಸಿಎಂ ಸಿದ್ದರಾಮಯ್ಯ ನಾನು ಶೋಷಿತರ ಪರ ಎಂದು ಭಾಷಣ ಮಾಡಿ ಈಗ ಅಧಿಕಾರ ಅನುಭವಿಸುತ್ತಿದ್ದಾರೆ. ಆ.16ರಂದು ನಡೆಯಲಿರುವ ಅಧಿವೇಶನದಲ್ಲಿ ಒಳ ಮೀಸಲಾತಿ ಘೋಷಿಸಬೇಕು ಎಂದು ಒತ್ತಾಯಿಸಿದರು.
ಯುವ ಮುಖಂಡ ಚಂದ್ರಶೇಖರ ಹರಿಜನ ಮಾತನಾಡಿ, ರಾಜ್ಯ ಸರಕಾರ ದಲಿತರನ್ನು ತುಳಿಯುವ ಕೆಲಸ ಮಾಡುತ್ತಿದೆ. ಒಳ ಮೀಸಲಾತಿ ಜಾರಿಗೋಳಿಸುವ ಕುರಿತು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಲಾಗಿತ್ತು. ಈಗ ದಲಿತರ ಮತ ಪಡೆದು ಅಧಿಕಾರ ನಡೆಸುತ್ತಿದ್ದಾರೆ. ಎಲ್ಲ ವರದಿಗಳು ಮಾದಿಗರು ಬಹುಸಂಖ್ಯಾತರರು ಎಂದು ಸ್ಪಷ್ಟವಾಗಿ ಹೇಳಿವೆ. ಆದರೂ ಮೀಸಲಾತಿ ಜಾರಿಗೋಳಿಸಲು ಹಿಂದೇಟು ಹಾಕುತ್ತಿದ್ದಾರೆ. ವಿರೋಧದ ನಡುವೆಯೂ ಹಾವನೂರ ವರದಿಯನ್ನು ಅಂದಿನ ಸರಕಾರ ಜಾರಿಗೊಳಿಸಿದೆ ಎಂದರು.
ಈ ಸಂದರ್ಭದಲ್ಲಿ ಪ್ರೊ. ಸತೀಶ, ಬಸವರಾಜ ಮುಳ್ಳಾಳ, ಶೇಖಪ್ಪ ಮಾದರ, ಗಣೇಶ ಹುಬ್ಬಳ್ಳಿ, ರಾಘವೇಂದ್ರ ಪರಾಪೂರ, ಸದಾನಂದ ಬಾರಿಗಿಡದ, ಮಂಜುನಾಥ ಗಜಾಕೋಶ, ರಾಘವೇಂದ್ರ ಗುತ್ತೆಮ್ಮನವರ ಇದ್ದರು.
ಬೆಂಗಳೂರಿನಲ್ಲಿ ಮೀಸಲಾತಿಗಾಗಿ ಸೋಮವಾರದಿಂದ ಪ್ರತಿಭಟನೆ ನಡೆಯುತ್ತಿದೆ. ಜಿಲ್ಲೆಯಿಂದ ನೂರಾರು ಸಂಖ್ಯೆಯಲ್ಲಿ ಸಮಾಜ ಬಾಂಧವರು ಪ್ರತಿಭಟನೆಯಲ್ಲಿ ಭಾಗವಹಿಸುತ್ತೇವೆ. ಅಧಿವೇಶನದಲ್ಲಿ ಕಾನೂನು ಸಚಿವ ಎಚ್.ಕೆ. ಪಾಟೀಲ ಮೀಸಲಾತಿ ಬಗ್ಗೆ ಪ್ರಸ್ತಾಪಿಸಬೇಕು. ಇಲ್ಲದಿದ್ದರೆ ಜಿಲ್ಲೆಯಲ್ಲಿ ಅವರಿಗೆ ಕಪ್ಪು ಪಟ್ಟಿ ಪ್ರದರ್ಶಿಸುವ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚಿಸಲಾಗುತ್ತದೆ.
– ಅಶೋಕ ಕುಡತಿನ್ನಿ.
ಸಮಾಜದ ಮುಖಂಡ.


