ಮಹಾ ಕುಂಭಮೇಳದಲ್ಲಿ ಹೂಮಾಲೆ ಮಾರಾಟ ಮಾಡುತ್ತಿದ್ದ ಯುವತಿ, ಇಂದು ಸಿನಿರಂಗದಲ್ಲಿ ಅವಕಾಶಗಳ ಮಳೆಗೊಳಗಾಗಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಂಚಲನ ಸೃಷ್ಟಿಸಿದ ಮೊನಾಲಿಸಾ ಈಗ ಚಲನಚಿತ್ರ ಮತ್ತು ಜಾಹೀರಾತು ಕ್ಷೇತ್ರದಲ್ಲಿ ನಿರಂತರವಾಗಿ ಶೂಟಿಂಗ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಕೈಯಲ್ಲಿ ಮೂರು ಸಿನಿಮಾಗಳಿರುವ ಮೊನಾಲಿಸಾ, ‘ದಿ ಡೈರಿ ಆಫ್ ಮಣಿಪುರ’ ಮೂಲಕ ಚಿತ್ರರಂಗ ಪ್ರವೇಶ ಮಾಡುತ್ತಿದ್ದಾರೆ. ಈ ಚಿತ್ರ ಮೊದಲ ಬಿಡುಗಡೆಯಾಗಲಿದ್ದು, ಚಿತ್ರೀಕರಣ ಈಗ ನಡೆಯುತ್ತಿದೆ. ಅಭಿಮಾನಿಗಳಲ್ಲಿ ಅವರ ಡೆಬ್ಯೂ ಸಿನಿಮಾಗೆ ಹೆಚ್ಚಿನ ನಿರೀಕ್ಷೆ ಇದೆ.
ಇತ್ತೀಚೆಗೆ ಪ್ರಯಾಗರಾಜ್‌ಗೆ ಭೇಟಿ ನೀಡಿದ ಅವರು ಗಂಗಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದರು. ಕುಂಭಮೇಳದ ದಿನಗಳನ್ನು ನೆನೆದು ಅವರು ಭಾವುಕರಾದ ಕ್ಷಣಗಳು ವೈರಲ್ ಆಗಿವೆ. ಆದರೆ ಅದಕ್ಕಿಂತ ಹೆಚ್ಚು ಚರ್ಚೆಗೆ ಕಾರಣವಾದದ್ದು ಅವರ ಸಮಾಜಮುಖಿ ನಿರ್ಧಾರ.
ಮೊದಲ ಸಿನಿಮಾದ ಸಂಭಾವನೆಯನ್ನು ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ಹುಡುಗಿಯರಿಗಾಗಿ ಶಾಲೆ ಆರಂಭಿಸಲು ಬಳಸುವ ನಿರ್ಧಾರವನ್ನು ಮೊನಾಲಿಸಾ ಘೋಷಿಸಿದ್ದಾರೆ. “ಹೆಣ್ಣುಮಕ್ಕಳ ಶಿಕ್ಷಣವೇ ಸಮಾಜದ ನಿಜವಾದ ಬದಲಾವಣೆ. ಅವಕಾಶಗಳಿಲ್ಲದೆ ಹಲವರು ಹಿಂದುಳಿದಿದ್ದಾರೆ. ನನ್ನ ಆದಾಯವನ್ನು ವೈಯಕ್ತಿಕ ಸುಖಕ್ಕೆ ಅಲ್ಲ, ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಬಳಸುತ್ತೇನೆ” ಎಂಬ ಅವರ ಮಾತುಗಳು ಜನಮನ ಗೆದ್ದಿವೆ.
ವೈರಲ್ ಫೇಮ್‌ನಿಂದ ಸಮಾಜಮುಖಿ ಚಿಂತನೆವರೆಗೆ – ಮೊನಾಲಿಸಾ ಇದೀಗ ಕೇವಲ ಸುಂದರಿ ಅಲ್ಲ, ಬದಲಾವಣೆಯ ಸಂಕೇತವಾಗಿ ಹೊರಹೊಮ್ಮುತ್ತಿದ್ದಾರೆ. ಅವರ ಈ ನಿರ್ಧಾರಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.



