ಕಾರು ಅಪಘಾತದಲ್ಲಿ ವಿರಾಟ್ ನಿಧನರಾಗಿದ್ದಾರೆ ಎಂದು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಯೂಟ್ಯೂಬ್ನಲ್ಲಿ ಹಾಗೂ ಇನ್ಸ್ಟಾಗ್ರಾಮ್ನಲ್ಲಿ ಈ ಕುರಿತ ವಿಡಿಯೋ ವೈರಲ್ ಆಗುತ್ತಿದ್ದು, “ವಿರಾಟ್ ಕೊಹ್ಲಿ ವಾಹನ ಚಾಲನೆ ಮಾಡುತ್ತಿರುವಾಗ ಅಪಘಾತವಾಗಿದೆ” ಎಂದು ಬರೆದುಕೊಂಡಿದ್ದಾರೆ. “ಫೆಬ್ರವರಿ 19 ರಂದು ವಿರಾಟ್ ಕೊಹ್ಲಿ ನಿನ್ನೆ ರಾತ್ರಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ” ಎಂದು ವಿಡಿಯೋದ ಮೇಲೆ ಬರೆಯಲಾಗಿದೆ.
ಈ ಸುದ್ದಿಯ ಸತ್ಯಾಸತ್ಯತೆ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ವೀವ್ಸ್, ಲೈಕ್ಸ್ ಮತ್ತು ಕಾಮೆಂಟ್‌ಗಳು ಬರಬೇಕೆಂಬ ದುರಾಸೆಯಲ್ಲಿ ಈ ಆಕ್ಷೇಪಾರ್ಹ ಮತ್ತು ನಕಲಿ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇಂತಹ ಹೇಳಿಕೆಗಳು ಈ ಹಿಂದೆಯೂ ವೈರಲ್ ಆಗಿವೆ.
ವಿರಾಟ್ ಕೊಹ್ಲಿ ಮಾತ್ರವಲ್ಲ, ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್, ನಟರಾದ ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್ ಮತ್ತು ಹಿನಾ ಖಾನ್ ಅವರಂತಹ ತಾರೆಯರ ನಕಲಿ ಸಾವಿನ ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ಬಾರಿ ವೈರಲ್ ಆಗಿವೆ.