ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಪಟ್ಟಣದ ಅಗಸ್ತ್ಯ ತೀರ್ಥ ಕ್ಷೇತ್ರದಲ್ಲಿ ಹುಬ್ಬಳ್ಳಿಯ ವರದಶ್ರೀ ಫೌಂಡೇಷನ್ ಜ್ಞಾನ ಸಂಸತ್ತಿನ ವರದಶ್ರೀ ಪರಿವಾರ, ಅರ್ಗ್ಯಾನಿಕ್ ಅರಮನೆ, ಲಕ್ಮೇಶ್ವರ ಯುವ ಗೆಳೆಯರ ಬಳಗ ಮತ್ತು ಹಿರಿಯ ನಾಗರಿಕರು, ನಿವೃತ್ತ ನೌಕರರ ಸಂಘದ ಸಹಯೋಗದಲ್ಲಿ ವಿಷಮುಕ್ತ ಪುಣ್ಯಸ್ನಾನ ಅಭಿಯಾನವನ್ನು ಮಂಗಳವಾರ ಯಶಸ್ವಿಯಾಗಿ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಯುವ ಗೆಳೆಯರ ಬಳಗದ ಮಹೇಶ ಹೊಗೆಸೊಪ್ಪಿನ, ಡಿ.ಎಂ. ಪೂಜಾರ ಸಂಕ್ರಾಂತಿಯ ಪುಣ್ಯ ಸಮಯದಲ್ಲಿ ಬಹುತೇಕ ಜನರು ತೀರ್ಥ ಕ್ಷೇತ್ರಗಳಲ್ಲಿ ಪುಣ್ಯ ಸ್ನಾನ ಮಾಡುವದು ವಾಡಿಕೆ. ಈ ವೇಳೆಯಲ್ಲಿ ನದಿ, ಪುಷ್ಕರಣಿ ಇತ್ಯಾದಿಗಳಲ್ಲಿ ಸ್ನಾನ ಮಾಡುವಾಗ ಸೋಪು-ಶ್ಯಾಂಪೂ ಬಳಸುವದರಿಂದ ನೀರಿನಲ್ಲಿ ವಿಷದ ಪ್ರಮಾಣ ಸೇರಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ವರದಶ್ರೀ ಫೌಂಡೇಶನ್‌ನವರು ಮಕರ ಸಂಕ್ರಮಣದಂದು ಪ್ರಪ್ರಥಮ ಬಾರಿಗೆ ವಿಷಮುಕ್ತ ಪುಣ್ಯ ಸ್ನಾನ ಅಭಿಯಾನವನ್ನು ರಾಜ್ಯಾದ್ಯಂತ ಕೈಗೊಂಡಿದ್ದು, ಸ್ನಾನಕ್ಕೆ ಸೋಪು, ಶ್ಯಾಂಪೂ ಬದಲಿ ಕಡಲೆ ಹಿಟ್ಟು ಬಳಸಿ ವಿಷಸ್ನಾನ ಬಿಡಿ ಎನ್ನುವ ವಿನೂತನ, ಜನರಿಗೆ ಅವಶ್ಯಕವಾಗಿರುವ ಮಾಹಿತಿ ನೀಡುವ ಕಾರ್ಯವನ್ನು ಮಾಡುತ್ತಿದ್ದಾರೆ.
ಪವಿತ್ರ ಕ್ಷೇತ್ರಗಳಲ್ಲಿ ತೀರ್ಥಸ್ನಾನ ಮಾಡುವರಿಗೆ ಉಚಿತವಾಗಿ ಸಾವಯವ ಕಡಲೆ ಹಿಟ್ಟಿನ ಪ್ಯಾಕೆಟ್‌ಗಳನ್ನು ಪೂರೈಸಿದ್ದು, ವರದಶ್ರೀ ಫೌಂಡೇಶನ್ ಅವರ ಪರಿಸರ ಸ್ನೇಹಿ ಮತ್ತು ಆಯುರ್ವೇದ ಔಷಧಿ ಗುಣವನ್ನು ಹೊಂದಿರುವ ಕಡಲೆ ಹಿಟ್ಟುಗಳನ್ನು ಬಳಸಿ ಇಂದಿನ ಪವಿತ್ರ ದಿನದಲ್ಲಿ ವಿಷಮುಕ್ತ ಸ್ನಾನ ಅಭಿಯಾನದಂತಹ ಜನಪಯೋಗಿ ಕಾರ್ಯಗಳಿಗೆ ನಮ್ಮ ಯುವ ಗೆಳೆಯರ ಬಳಗ ಸೇರಿದಂತೆ, ಪಟ್ಟಣದ ಹಿರಿಯ ನಾಗರೀಕರ ವೇದಿಕೆ, ನಿವೃತ್ತ ನೌಕರರ ಸಂಘ ಹಾಗೂ ಅನೇಕ ಸಂಘಟನೆಗಳು ಕೈಜೋಡಿಸಿವೆ. ಈ ಕಾರ್ಯವನ್ನು ಕೈಗೊಂಡು ಇದರಲ್ಲಿ ಸೇವೆ ಸಲ್ಲಿಸಲು ಅವಕಾಶ ನಮ್ಮ ಸಂಘಟನೆಗೆ ದೊರೆತಿರುವದು ನಮ್ಮ ಭಾಗ್ಯವಾಗಿದೆ ಎಂದರು.
ತೀರ್ಥಕ್ಷೇತ್ರಕ್ಕೆ ತೆರಳುವವರಿಗೆ ಹಾಗೂ ಸಾರ್ವಜನಿಕರಿಗೆ ಸೇರಿದಂತೆ ಸುಮಾರು 5 ಸಾವಿರಕ್ಕೂ ಅಧಿಕ ಕಡಲೆ ಹಿಟ್ಟಿನ ಪ್ಯಾಕೆಟ್‌ಗಳನ್ನು ವಿತರಿಸಲಾಯಿತು.
ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಹಿರಿಯ ಮುಖಂಡ ಚಂಬಣ್ಣ ಬಾಳಿಕಾಯಿ, ಚನ್ನಪ್ಪ ಕೋಲಕಾರ, ಕಿರಣ ನವಲೆ, ಗಂಗಾಧರ ಮ್ಯಾಗೇರಿ, ಶಿವಯೋಗಿ ಮಾನ್ವಿ, ರಾಮು ಪೂಜಾರ, ರಾಜು ಪೂಜಾರ, ಶಿವಾನಂದ ಲಿಂಗಶೆಟ್ಟಿ, ಗುರಿಕಾರ, ಫಕ್ಕಿರೇಶ ನಂದೆಣ್ಣವರ ಹಾಗೂ ಹಿರಿಯ ನಾಗರಿಕರ ವೇದಿಕೆ, ನಿವೃತ್ತ ನೌಕರರ ಸಂಘ, ಯುವ ಗೆಳೆಯರ ಬಳಗದ ಸದಸ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.